ಶನಿವಾರ, ಜನವರಿ 28, 2023
13 °C
ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ

ದೇಗುಲಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ: ಮದ್ರಾಸ್‌ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮದುರೈ (ಪಿಟಿಐ): ‘ಪರಿಶುದ್ಧತೆ ಹಾಗೂ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ರಾಜ್ಯದ ಎಲ್ಲಾ ದೇಗುಲಗಳಲ್ಲೂ ಮೊಬೈಲ್ ಬಳಕೆ ನಿಷೇಧಿಸಬೇಕು. ಇದನ್ನು ಕಡ್ಡಾಯವಾಗಿ ಕಾರ್ಯಗತಗೊಳಿಸಬೇಕು’ ಎಂದು ಮದ್ರಾಸ್‌ ಹೈಕೋರ್ಟ್‌ ತಮಿಳುನಾಡು ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಆದೇಶಿಸಿದೆ.

ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್‌.ಮಹಾದೇವನ್‌ ಮತ್ತು ಜೆ.ಸತ್ಯನಾರಾಯಣ ಪ್ರಸಾದ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಶುಕ್ರವಾರ ಈ ಸಂಬಂಧ ಸೂಚನೆ ನೀಡಿದೆ.

ತೂತ್ತುಕುಡಿ ಜಿಲ್ಲೆಯ ತಿರುಚೆಂಡೂರ್‌ನಲ್ಲಿರುವ ಪ್ರಸಿದ್ಧ ಅರುಳ್‌ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಮೊಬೈಲ್‌ ಬಳಕೆ ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವಸ್ಥಾನದ ಆಡಳಿತಕ್ಕೆ ಸೂಚನೆ ನೀಡಬೇಕು ಎಂದು ಎಂ.ಸೀತಾರಾಮನ್‌ ಎಂಬುವರು ಪಿಐಎಲ್‌ನಲ್ಲಿ ಆಗ್ರಹಿಸಿದ್ದರು.

‘ಸುಬ್ರಹ್ಮಣ್ಯಸ್ವಾಮಿಯ ನೆಲೆಯಾಗಿರುವ ಈ ದೇಗುಲ ಪುರಾತನ ಕಾಲದ್ದಾಗಿದೆ. ಇಲ್ಲಿ ಉಚಿತ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಹಾಗೂ ವಿಡಿಯೊ ಮಾಡಲು ಮುಂದಾಗುವುದರಿಂದ ದೀಪಾರತಿ, ಪೂಜೆ ಹಾಗೂ ಇತರೆ ಆಚರಣೆಗಳಿಗೆ ಅಡಚಣೆ ಉಂಟಾಗುತ್ತಿದೆ. ಫೋಟೊ ಕ್ಲಿಕ್ಕಿಸಿಕೊಳ್ಳುವ ಹಾಗೂ ವಿಡಿಯೊ ಚಿತ್ರೀಕರಿಸುವವರ ಮೇಲೆ ದೇವಸ್ಥಾನದ ಆಡಳಿತ ಯಾವುದೇ ನಿರ್ಬಂಧ ಹೇರಿಲ್ಲ’ ಎಂದು ಅರ್ಜಿಯಲ್ಲಿ ದೂರಿದ್ದಾರೆ.

‘ಬೆಲೆಬಾಳುವ ವಿಗ್ರಹಗಳ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವುದು ‘ಆಗಮ’ ನಿಯಮಕ್ಕೆ ವಿರುದ್ಧವಾದುದಾಗಿದೆ. ಇದರಿಂದ ದೇವಸ್ಥಾನದ ಭದ್ರತೆ ಹಾಗೂ ಅದರೊಳಗಿರುವ ಬೆಲೆಬಾಳುವ ವಸ್ತುಗಳಿಗೂ ಅಪಾಯ ಎದುರಾಗುತ್ತದೆ’ ಎಂದೂ ತಿಳಿಸಿದ್ದಾರೆ.

‘ಕೆಲವರು ದೇವಸ್ಥಾನಕ್ಕೆ ಬರುವ ಮಹಿಳೆಯರ ಫೋಟೊಗಳನ್ನು ಅವರ ಅನುಮತಿ ಇಲ್ಲದೆಯೇ ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದುಕೊಳ್ಳುತ್ತಾರೆ. ಆ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ’ ಎಂದೂ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

‘ಪೂಜಾರಿಗಳು, ಭಕ್ತರು ಹಾಗೂ ಸಾರ್ವಜನಿಕರು ದೇವಸ್ಥಾನದೊಳಗೆ ಮೊಬೈಲ್‌ ಬಳಕೆ ಮಾಡುವುದನ್ನು ತಡೆಯಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಮೇಲ್ವಿಚಾರಣೆಗೆ ತಂಡಗಳನ್ನೂ ರಚಿಸಲಾಗಿದೆ. ಭಕ್ತರು ತಮ್ಮ ಮೊಬೈಲ್‌ಗಳನ್ನು ಇಡಲು ಅನುವಾಗುವಂತೆ ಭದ್ರತಾ ಕೌಂಟರ್‌ಗಳನ್ನೂ ತೆರೆಯಲಾಗಿದೆ’ ಎಂದು ಪ್ರತಿವಾದಿಗಳು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. 

‘ಮೊಬೈಲ್‌ ಬಳಕೆ ನಿಷೇಧಿಸುವ ಹಾಗೂ ವಸ್ತ್ರಸಂಹಿತೆ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಎರಡನೇ ಪ್ರತಿವಾದಿಗಳು (ಕಾರ್ಯನಿರ್ವಹಣಾ ಅಧಿಕಾರಿ/ಜಂಟಿ ಆಯುಕ್ತರು) ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ನಾವು ಸೂಚಿಸುತ್ತಿದ್ದೇವೆ. ಈ ಪತ್ರವನ್ನು ಅಂಗೀಕರಿಸುವಂತೆ ತೂತ್ತುಕುಡಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನಿರ್ದೇಶಿಸುತ್ತಿದ್ದೇವೆ’ ಎಂದು ನ್ಯಾಯಪೀಠ ಹೇಳಿದೆ. 

‘ರಾಜ್ಯದಲ್ಲಿರುವ ದೇವಸ್ಥಾನಗಳ ಪಾವಿತ್ರ್ಯತೆ ಹಾಗೂ ಪರಿಶುದ್ಧತೆ ಕಾಪಾಡುವ ನಿಟ್ಟಿನಲ್ಲಿ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡುತ್ತಿದ್ದೇವೆ’ ಎಂದೂ ತಿಳಿಸಿದೆ.

‘ದೇವಸ್ಥಾನಗಳು ಶ್ರೇಷ್ಠ ಸಂಸ್ಥೆಗಳು. ಇವು ಸಾಂಪ್ರದಾಯಿಕವಾಗಿ ಪ್ರತಿಯೊಬ್ಬರ ಬದುಕಿನ ಕೇಂದ್ರಗಳಾಗಿವೆ. ಇವು ಪೂಜಾಸ್ಥಳಗಳಷ್ಟೇ ಅಲ್ಲ, ಜನರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಇವು ಜೀವಂತ ಸಂಪ್ರದಾಯಗಳಾಗಿದ್ದು, ಈಗಲೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿವೆ’ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು