ಭಾನುವಾರ, ಅಕ್ಟೋಬರ್ 24, 2021
28 °C

ಅಖಾಡ ಪರಿಷತ್‌ನ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಪ್ರಯಾಗರಾಜ (ಉತ್ತರ ಪ್ರದೇಶ): ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಸೋಮವಾರ ಸಂಜೆ ಪ್ರಯಾಗರಾಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ದರ್ಗಾಂಜ್ ಪ್ರದೇಶದ ಬಘಂಬರಿ ಮಠದ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ  ಕಂಡುಬಂದಿದ್ದಾರೆ. 

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. 

ಇದು ಆತ್ಮಹತ್ಯೆ ಎಂದು ತೋರುತ್ತದೆ. ಆದರೆ ಹೆಚ್ಚಿನ ತನಿಖೆಯಿಂದಷ್ಟೇ ಗಿರಿ ಅವರ ಸಾವಿಗೆ ನಿಖರವಾದ ಕಾರಣ ತಿಳಿಯಲು ಸಾಧ್ಯ ಎಂದು ಪೊಲೀಸರು ಹೇಳಿದರು.

ಪ್ರಸ್ತುತ ಮಠಕ್ಕೆ ಭಾರೀ ಭದ್ರತೆ ನಿಯೋಜಿಸಲಾಗಿದ್ದು, ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ. ಗಿರಿಯ ನೂರಾರು ಶಿಷ್ಯರು, ಅನುಯಾಯಿಗಳು ಮಠದ ಬಳಿ ಜಮಾಯಿಸಿದ್ದಾರೆ. ಆದರೆ ಅವರನ್ನು ಒಳಗೆ ಹೋಗದಂತೆ ತಡೆಯಲಾಗಿದೆ. 

ಕೆಲವು ತಿಂಗಳ ಹಿಂದೆ ಗಿರಿ ಅವರು ತಮ್ಮ ಆನಂದ್ ಗಿರಿಯೊಂದಿಗೆ ಆಸ್ತಿ ಕಲಹದಲ್ಲಿ ಸಿಲುಕಿದ್ದರು. ನಂತರ ವಿವಾದ ಬಗೆಹರಿದಿತ್ತು. 

ಮೂಲಗಳ ಪ್ರಕಾರ ಐದು ಪುಟಗಳ ಡೆತ್‌ ನೋಟ್‌ ಆತ್ಮಹತ್ಯೆ ಸ್ಥಳದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಸಾವಿಗೆ ಅವರ ಶಿಷ್ಯರೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹೇಳಲಾಗಿದೆಯಾದರೂ, ಪೊಲೀಸರು ಇದನ್ನು ಖಚಿತಪಡಿಸಿಲ್ಲ.

2016 ರ ಮಾರ್ಚ್‌ನಲ್ಲಿ ಮಹಾಂತ ಜ್ಞಾನ ದಾಸ್ ಅವರ ಬದಲಿಗೆ ಗಿರಿ ಅವರನ್ನು ಅಖಾಡ ಪರಿಷತ್ತಿನ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಆದರೆ ವಿವಾದಿತ ಮಹಾಂತ ಅವರು ಗಿರಿ ಅವರಿಗೆ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದರು.

 ದಾಸ್ ಅವರು ಕ್ರಿಮಿನಲ್ ಚಟುವಟಿಕೆಗಳು ಮತ್ತು ಆಕ್ಷೇಪಾರ್ಹ ನಡವಳಿಕೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಯೋಧ್ಯೆ ಮತ್ತು ಅಲಹಾಬಾದ್ ನಲ್ಲಿ ಅವರ ಮೇಲೆ ಕೊಲೆ, ಲೂಟಿ, ದೌರ್ಜನ್ಯ ಮತ್ತು ಆರ್ಥಿಕ ಅಪರಾಧಗಳನ್ನು ದಾಖಲಿಸಲಾಗಿದೆ. ಈ ಪೈಕಿ ಹೆಚ್ಚಿನವು ಅಖಾಡ ಪರಿಷತ್ತಿನ ಸಾಧುಗಳಿಂದಲೇ ದಾಖಲಾಗಿದ್ದವು. 

ದಾಸ್ ನಂತರ ಅಖಾಡ ಪರಿಷತ್ತಿನ ಅಧ್ಯಕ್ಷ ಪದವಿ ವಹಿಸಿಕೊಂಡ ಗಿರಿ ಅವರು ಗಮನಾರ್ಹ ಕಾರ್ಯಗಳನ್ನು ಮಾಡಿದ್ದರು.  ಉಜ್ಜಯಿನಿ, ಪ್ರಯಾಗರಾಜ್ ಮತ್ತು ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಕುಂಭಮೇಳಗಳನ್ನು ಅವರ ನೇತೃತ್ವದಲ್ಲೇ ನಡೆಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು