ಬುಧವಾರ, ಅಕ್ಟೋಬರ್ 20, 2021
29 °C
ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಕೊಲ್ಹಾಪುರ ಪ್ರವೇಶ ನಿಷೇಧ: ಸರ್ಕಾರದ ಆದೇಶ

ಕೊಲ್ಹಾಪುರದತ್ತ ಹೊರಟಿದ್ದ ಬಿಜೆಪಿ ನಾಯಕ ಸೋಮಯ್ಯಗೆ ಪೊಲೀಸರಿಂದ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ‘ಕೊಲ್ಹಾಪುರಕ್ಕೆ ಹೋಗುತ್ತಿದ್ದ ನನ್ನನ್ನು ಸತಾರ್‌ ಜಿಲ್ಲೆಯ ಕರಾಡ್‌ ಬಳಿ ಪೊಲೀಸರು ತಡೆದಿದ್ದಾರೆ’ ಎಂದು ಬಿಜೆಪಿಯ ಮಾಜಿ ಸಂಸದ ಕೀರ್ತಿ ಸೋಮಯ್ಯಾ ಸೋಮವಾರ ಆರೋಪಿಸಿದ್ದಾರೆ.

ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಷ್ರಿಫ್‌ ಅವರ ವಿರುದ್ಧ ಇತ್ತೀಚೆಗೆ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕಾಗಿ, ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ಜಿಲ್ಲೆಯ ಅಧಿಕಾರಿಗಳು ಕೊಲ್ಹಾಪುರ ಪ್ರವೇಶಿಸದಂತೆ ತಡೆದಿದ್ದಾರೆ ಎಂದು ಸೋಮವಾರ ಟ್ವೀಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಸೋಮಯ್ಯ ಅವರು, ಕೊಲ್ಹಾಪುರ ಜಿಲ್ಲೆಯ ಕಾಗಲ್‌ ಕ್ಷೇತ್ರದ ಶಾಸಕ ಮುಷ್ರಿಫ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ತಮ್ಮ ಸಂಬಂಧಿಕರ ಹೆಸರಲ್ಲಿ ಶಾಸಕರು ಬೇನಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ದೂರಿದ್ದರು. ನಂತರದಲ್ಲಿ ‘ಇದೆಲ್ಲ ಆಧಾರ ರಹಿತ ಆರೋಪ‘ ಎಂದು ಶಾಸಕರು ತಿರಸ್ಕರಿಸಿದ್ದರು.

ಇದರ ಮುಂದುವರಿದ ಭಾಗವಾಗಿ ಸೋಮಯ್ಯ ಅವರು ಮುಷ್ರಿಫ್ ಅವರ ಮತ್ತೊಂದು ಹಗರಣವನ್ನು ಬಯಲು ಮಾಡುವ ಸಲುವಾಗಿ ಕರಾಡ್‌ನಲ್ಲಿ ಸುದ್ದಿಗೋಷ್ಠಿ ನಡೆಸಲು ಭಾನುವಾರ ರಾತ್ರಿ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಬೈನಿಂದ ಕೊಲ್ಹಾಪುರಕ್ಕೆ ತೆರಳುತ್ತಿದ್ದರು. ಈ ವಿಷಯವನ್ನು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಪೊಲೀಸರು ಕರಾಡ್‌ಗೆ ತೆರಳಿ, ಅಲ್ಲಿನ ರೈಲು ನಿಲ್ದಾಣದಲ್ಲೇ ಸೋಮಯ್ಯ ಅವರನ್ನು ತಡೆದು, ಕೊಲ್ಹಾಪುರ ಜಿಲ್ಲೆಯ ಪ್ರವೇಶಕ್ಕೆ ನಿಷೇಧ ವಿಧಿಸಿರುವ ಸರ್ಕಾರದ ಆದೇಶದ ಪ್ರತಿಯನ್ನು ನೀಡಿದ್ದಾರೆ‘ ಎಂದು ಕೊಲ್ಹಾಪುರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್‌ ಬೆಳಕವಾಡೆ ಸುದ್ದಿ ಸಂಸ್ಥೆಗೆ ತಿಳಿಸಿದರು.

ಆದರೆ ಸೋಮಯ್ಯ ಅವರು, ಕೊಲ್ಹಾಪುರ ಜಿಲ್ಲಾಧಿಕಾರಿ ರಾಹುಲ್ ರೇಖವಾರ್‌ ಅವರ ಆದೇಶವನ್ನು ಪೊಲೀಸರಿಗೆ ತೋರಿಸಿದ್ದಾರೆ. ಆ ಆದೇಶದಲ್ಲಿ ‘ಐಪಿಸಿ ಸೆಕ್ಷನ್ 144 ರ ಅಡಿಯಲ್ಲಿ ಜಿಲ್ಲಾ ಪ್ರವೇಶವನ್ನು ನಿಷೇಧಿಸಲಾಗಿದೆ. ಗಣಪತಿ ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ಅಲ್ಲಿಗೆ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಹೀಗಾಗಿ ಸೋಮಯ್ಯ ಅವರಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ‘ ಎಂದು ಹೇಳಲಾಗಿತ್ತು.

ಈ ನಡುವೆ ಮುಂಬೈನ ನವ್‌ಘರ್‌ ಪೊಲೀಶ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುನಿಲ್ ಕಾಂಬ್ಳೆ ಅವರು ಕೊಲ್ಹಾಪುರ ಜಿಲ್ಲಾಡಳಿತದ ಆದೇಶವನ್ನು ಪಾಲಿಸುವಂತೆ ಸೋಮಯ್ಯ ಅವರಿಗೆ ಸೂಚನೆ ನೀಡಿದ್ದರು. ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮಯ್ಯ ಅವರ ನಿವಾಸವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು