ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯದ ಬಲ ಪ್ರದರ್ಶಿಸಿದ ಶಿಂಧೆ; ಗುವಾಹಟಿಯಲ್ಲಿ 42 ‘ಮಹಾ‘ ಶಾಸಕರು ಪ್ರತ್ಯಕ್ಷ

ಅಕ್ಷರ ಗಾತ್ರ

ಗುವಾಹಟಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಭಾಗವಾಗಿದ್ದ ಶಿವಸೇನಾದ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಅಸ್ಸಾಂನ ಗುವಾಹಟಿ ಸೇರಿದ್ದಾರೆ. ಇದೇ ಮೊದಲ ಬಾರಿಗೆ ಶಿವಸೇನಾದ ಎಲ್ಲ ಬಂಡಾಯ ಶಾಸಕರು ಒಟ್ಟಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಒಟ್ಟು 42 ಮಂದಿ ಬಂಡಾಯ ಶಾಸಕರಿದ್ದಾರೆ.

288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 55 ಶಾಸಕರ ಬಲ ಹೊಂದಿದೆ. ‌ಶಿಂಧೆ ಬಣದಲ್ಲೀಗ 42 ಶಾಸಕರು (ಶಿವಸೇನಾದ 35, ಪಕ್ಷೇತರ 7 ಶಾಸಕರು) ಕಾಣಿಸಿಕೊಂಡಿದ್ದು, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಬೆಂಬಲದಲ್ಲೀಗ 13 ಶಾಸಕರಷ್ಟೇ ಕಾಣಿಸಿಕೊಂಡಿದ್ದಾರೆ.

ಗುವಾಹಟಿಯಲ್ಲಿ 42 ಮಂದಿ ಬಂಡಾಯ ಶಾಸಕರು ಒಟ್ಟಿಗೆ ಕಾಣಿಸಿಕೊಳ್ಳುವ ಜೊತೆಗೆ 'ಶಿವಸೇನಾ ಜಿಂದಾಬಾದ್‌' ಹಾಗೂ 'ಬಾಳಾಸಾಹೇಬ್‌ ಠಾಕ್ರೆ ಕಿ ಜಯ್‌' ಘೋಷಣೆಗಳನ್ನು ಕೂಗಿದ್ದಾರೆ. ಇಲ್ಲಿನ ರ್‍ಯಾಡಿಸನ್‌ ಬ್ಲೂ ಹೋಟೆಲ್‌ನ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ.

ಉದ್ಧವ್‌ ಠಾಕ್ರೆ ಅವರ ನೇತೃತ್ವದ ಶಿವಸೇನಾ, 'ವರ್ಷಾದಲ್ಲಿ' ಕರೆಯಲಾಗಿದ್ದ ಪಕ್ಷದ ಸಭೆಯಲ್ಲಿ ಆದಿತ್ಯ ಠಾಕ್ರೆ ಹಾಗೂ ಸೂರತ್‌ನಿಂದ ತಪ್ಪಿಸಿಕೊಂಡು ಬಂದ ನಿತಿನ್‌ ದೇಶ್‌ಮುಖ್, ಕೈಲಾಶ್‌ ಪಾಟೀಲ್‌ ಸೇರಿದಂತೆ 13 ಜನ ಶಾಸಕರು ಮಾತ್ರ ಭಾಗಿಯಾಗಿದ್ದಾರೆ.

ಬಿಜೆಪಿಗೆ 106 ಶಾಸಕರ ಬಲವಿದ್ದು, ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ಉರುಳಿಸಿ, ಹೊಸ ಸರ್ಕಾರವನ್ನು ರಚಿಸಲು ಬಿಜೆಪಿಗೆ 37 ಶಾಸಕರ ಅಗತ್ಯವಿದೆ. ಈಗ ಬಂಡಾಯದಲ್ಲಿ 42 ಶಾಸಕರು ಗುರುತಿಸಿಕೊಂಡಿದ್ದಾರೆ.

ಈ ಬೆಳವಣಿಗೆಗಳ ನಡುವೆ ಪ್ರತಿಕ್ರಿಯಿಸಿರುವ ಸಂಸದ ಸಂಜಯ್‌ ರಾವುತ್‌, ವಿಶ್ವಾಸ ಮತ ಯಾಚನೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಅಪಹರಣಕ್ಕೆ ಒಳಗಾಗಿದ್ದ ಶಾಸಕರ ಪೈಕಿ ಇಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವಾಪಸ್‌ ಬಂದಿದ್ದಾರೆ. ಗುವಾಹಟಿಯಿಂದ 21 ಶಾಸಕರು ನಮ್ಮನ್ನು ಸಂಪರ್ಕಿಸಿದ್ದಾರೆ ಹಾಗೂ ಮರಳಿ ಬರಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ನಾವು ವಿಶ್ವಾಸ ಮತದಲ್ಲಿ ಗೆಲುವು ಪಡೆಯುತ್ತೇವೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT