ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಮನ್‌ನ ರೆಮ್‌ಡಿಸಿವಿರ್ ಪೂರೈಕೆದಾರರಿಗೆ ಮಹಾರಾಷ್ಟ್ರ ಸರ್ಕಾರ ಕಿರುಕುಳ: ಫಡಣವೀಸ್

Last Updated 18 ಏಪ್ರಿಲ್ 2021, 3:37 IST
ಅಕ್ಷರ ಗಾತ್ರ

ಮುಂಬೈ: ನೆರೆಯ ಕೇಂದ್ರಾಡಳಿತ ಪ್ರದೇಶ ದಮನ್‌ನ ರೆಮ್‌ಡಿಸಿವಿರ್ ಪೂರೈಕೆದಾರ ಕಂಪನಿಯೊಂದಕ್ಕೆ ಮಹಾರಾಷ್ಟ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಆರೋಪಿಸಿದ್ದಾರೆ.

ರಾಜ್ಯಕ್ಕೆ ರೆಮ್‌ಡಿಸಿವಿರ್ ಚುಚ್ಚುಮದ್ದು ಪೂರೈಸುವಂತೆ ಬಿಜೆಪಿ ನಾಯಕರು ಕೇಳಿಕೊಂಡಿದ್ದಕ್ಕಾಗಿ ಸರ್ಕಾರವು ಕಂಪನಿಗೆ ಕಿರುಕುಳ ನೀಡುತ್ತಿದೆ ಎಂದು ಅವರು ದೂರಿದ್ದಾರೆ.

ಶನಿವಾರ ರಾತ್ರಿ ವರದಿಗಾರರ ಜತೆ ಮಾತನಾಡಿದ ಫಡಣವೀಸ್, ‘ರಾಜ್ಯವು ರೆಮ್‌ಡಿಸಿವಿರ್ ಕೊರತೆ ಎದುರಿಸುತ್ತಿರುವುದರಿಂದ ಬಿಜೆಪಿ ನಾಯಕರು ದಮನ್ ಮೂಲದ ‘ಬ್ರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್’ ಅನ್ನು ಸಂಪರ್ಕಿಸಿದ್ದರು. ರೆಮ್‌ಡಿಸಿವಿರ್ ಚುಚ್ಚುಮದ್ದು ಪೂರೈಸುವಂತೆ ಕೇಳಿಕೊಂಡಿದ್ದರು. ಈ ವಿಚಾರವಾಗಿ ರಾಜ್ಯದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಸಚಿವರಿಗೂ ಮಾಹಿತಿ ನೀಡಲಾಗಿತ್ತು. ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನೂ ಕೋರಲಾಗಿತ್ತು’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಪ್ರವೀಣ್ ದರೇಕರ್ ಮತ್ತು ಪರಿಷತ್ ಸದಸ್ಯ ಪ್ರಸಾದ್ ಲಾಡ್ ಅರು ಕೆಲವು ದಿನಗಳ ಹಿಂದೆ ದಮನ್‌ಗೆ ತೆರಳಿದ್ದರು. ರಫ್ತಿಗಾಗಿ ತೆಗೆದಿಟ್ಟಿರುವ ರೆಮ್‌ಡಿಸಿವಿರ್ ಅನ್ನು ರಾಜ್ಯಕ್ಕೆ ಪೂರೈಸುವಂತೆ ‘ಬ್ರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್’ಗೆ ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ ಔಷಧ ಪೂರೈಸುವುದಾಗಿ ನಮ್ಮ ನಾಯಕರಿಗೆ ಕಂಪನಿ ತಿಳಿಸಿತ್ತು ಎಂದು ಫಡಣವೀಸ್ ತಿಳಿಸಿದ್ದಾರೆ.

‘ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರೂ ರಫ್ತಿಗಾಗಿ ಇರಿಸಿದ್ದ ಔಷಧವನ್ನು ರಾಜ್ಯಕ್ಕೆ ಪೂರೈಕೆ ಮಾಡಲು ಕಂಪನಿಗೆ ಅನುಮತಿ ನೀಡಿದ್ದರು. ಆದರೆ, ರಾಜ್ಯ ಎಫ್‌ಡಿಎ ಸಚಿವರ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿಯು ಕಂಪನಿ ಮಾಲೀಕರಿಗೆ ಬೆದರಿಕೆ ಹಾಕಿರುವುದು ತಿಳಿದುಬಂದಿದ್ದು ಆಘಾತವಾಗಿದೆ. ಕೇಂದ್ರ ಮತ್ತು ಬಿಜೆಪಿ ನಾಯಕರ ಸಲಹೆ ಕೇಳಿದ್ದಕ್ಕಾಗಿ ಅಧಿಕಾರಿಯು ಅವರಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಇಂಥ ಕೃತ್ಯಗಳನ್ನು ಸಹಿಸಲಾಗದು ಎಂದೂ ಫಡಣವೀಸ್ ಹೇಳಿದ್ದಾರೆ.

ಕೋವಿಡ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ಬಿಜೆಪಿ ನಡುವೆ ಕಳೆದ ಕೆಲವು ದಿನಗಳಿಂದ ವಾಕ್ಸಮರ ನಡೆಯುತ್ತಿದೆ. ಕೇಂದ್ರ–ರಾಜ್ಯಗಳ ನಡುವೆಯೂ ಜಟಾಪಟಿ ನಡೆಯುತ್ತಿದೆ.

‘ರೆಮ್‌ಡಿಸಿವಿರ್ ಇಂಜೆಕ್ಷನ್‌ ಮತ್ತು ಆಕ್ಸಿಜನ್‌ ಕೊರತೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಮುಂದಾಗಿದ್ದೆ. ಆದರೆ ಅವರು ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದರು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರವಷ್ಟೇ ದೂರಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಕೇಂದ್ರ ಸಚಿವ ಪೀಯೂಷ್ ಗೋಯಲ್, ‘ಪ್ರಧಾನಿಯವರು ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಲ್ಲದೆ, ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಕೆಲಸ ಮಾಡುವಂತೆ ಸಲಹೆ ಸೂಚನೆ ನೀಡಿದ್ದಾರೆ. ಹೀಗಿರುವಾಗ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ನೋಡಿ ಆಘಾತವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿಯವರು ಇಂಥ ರಾಜಕೀಯ ಮಾಡುವುದನ್ನು ನಿಲ್ಲಿಸಿ ಜವಾಬ್ದಾರಿಯಿಂದ ವರ್ತಿಸಬೇಕಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT