ಭಾನುವಾರ, ಆಗಸ್ಟ್ 14, 2022
20 °C
ಮಹಾರಾಷ್ಟ್ರ: ಶಿವಸೇನಾದ ಶಿಂಧೆ, ಹಲವು ಶಾಸಕರ ಜತೆ ಗುಜರಾತ್‌ಗೆ

ಶಿವಸೇನಾದ ಶಿಂಧೆ, ಹಲವು ಶಾಸಕರ ಜತೆ ಗುಜರಾತ್‌ಗೆ: ಉದ್ಧವ್‌ ಸರ್ಕಾರಕ್ಕೆ ಕುತ್ತು?

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ/ಸೂರತ್‌ : ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ನೇತೃತ್ವದ, ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವು ಬಿಕ್ಕಟ್ಟಿಗೆ ಸಿಲುಕಿದೆ. ಶಿವಸೇನಾದ ಪ್ರಭಾವಿ ಮುಖಂಡ, ಸಚಿವ ಏಕನಾಥ ಶಿಂಧೆ ಅವರು ಪಕ್ಷದ ಕೆಲವು ಶಾಸಕರೊಂದಿಗೆ ಸೂರತ್‌ನ ಹೋಟೆಲ್‌ನಲ್ಲಿ ತಂಗಿದ್ದು, ಬಂಡಾಯದ ಬಾವುಟ ಹಾರಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸರ್ಕಾರದ ಉಳಿವಿನ ಬಗ್ಗೆ ಈ ಬಂಡಾಯವು ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎಂವಿಎಗೆ ಹಿನ್ನಡೆಯಾದ ಬಳಿಕ ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆಗಳು ನಡೆದಿವೆ. ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮೈತ್ರಿಕೂಟವಾಗಿರುವ ಎಂವಿಎ, ಪರಿಷತ್‌ನ ಆರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ, ಎಂವಿಎ ಅಂಗ ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಿದ ಕಾರಣ ಎಂವಿಎಯ ಆರನೇ ಅಭ್ಯರ್ಥಿಗೆ ಸೋಲಾಗಿದೆ. ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ, ಶಿಂಧೆ ಅವರು ಕೆಲವು ಶಾಸಕರ ಜತೆಗೆ ಗುಜರಾತ್‌ಗೆ ತೆರಳಿದ್ದಾರೆ. 

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿಯೂ ಎಂವಿಎ ಅಂಗ ಪಕ್ಷಗಳ ಶಾಸಕರು ಬಿಜೆಪಿ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿದ್ದರು.

ಶಿಂಧೆ ಅವರ ಜತೆಗೆ 14–15 ಶಾಸಕರು ಇದ್ದಾರೆ ಎಂದು ಸೇನಾ ಸಂಸದ ಸಂಜಯ ರಾವುತ್‌ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶಿವಸೇನಾದ ನಾಯಕ ಹುದ್ದೆಯಿಂದ ಶಿಂಧೆ ಅವರನ್ನು ವಜಾ ಮಾಡಲಾಗಿದೆ. ಅಜಯ್‌ ಚೌಧರಿ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ರಾವುತ್‌ ತಿಳಿಸಿದ್ದಾರೆ.

ಬಂಡಾಯ ಶಮನದಲ್ಲಿಯೂ ಎಂವಿಎ ತೊಡಗಿದೆ. ಮುಖಂಡರಾದ ಮಿಲಿಂದ್‌ ನಾರ್ವೇಕರ್‌ ಮತ್ತು ರವೀಂದ್ರ ಪಾಠಕ್‌ ಅವರನ್ನು ಸೂರತ್‌ಗೆ ಕಳುಹಿಸಿದ್ದು, ಶಿಂಧೆ ಮನವೊಲಿಸುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ. ತಮ್ಮ ಯೋಜನೆಗಳೇನು ಎಂಬುದನ್ನು ಶಿಂಧೆ ಅವರು ಬಹಿರಂಗಪಡಿಸಿಲ್ಲ. 

ಶಿವಸೇನಾದಲ್ಲಿನ ಬೆಳವಣಿಗೆಯೊಂದಿಗೆ ಬಿಜೆಪಿಗೆ ಯಾವುದೇ ನಂಟು ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಹೇಳಿದ್ದಾರೆ. ಪರ್ಯಾಯ ಸರ್ಕಾರ ರಚಿಸುವುದಕ್ಕಾಗಿ ಶಿಂಧೆ ಅವರು ತಮ್ಮನ್ನು ಸಂಪರ್ಕಿಸಿದರೆ, ಖಂಡಿತವಾಗಿಯೂ ಅದನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ. 

‘ಹಿಂದುತ್ವದ ಪಾಠ ಹೇಳಿಕೊಟ್ಟ ಬಾಳಾಸಾಹೇಬ್‌ ಅವರ ನಿಷ್ಠಾವಂತ ಶಿವ ಸೈನಿಕರು ನಾವು. ಅಧಿಕಾರಕ್ಕಾಗಿ ನಾವು ವಂಚಿಸುವುದಿಲ್ಲ. ಬಾಳಾಸಾಹೇಬ್‌ ಮತ್ತು ಆನಂದ್‌ ದಿಘೆ ಅವರ ಸಿದ್ಧಾಂತಗಳನ್ನು ಅಧಿಕಾರಕ್ಕಾಗಿ ಕೈಬಿಡುವುದಿಲ್ಲ’ ಎಂದು ಶಿಂಧೆ ಟ್ವೀಟ್‌ ಮಾಡಿದ್ದಾರೆ. ಬಾಳಾಸಾಹೇಬ್‌ ಅವರು ಸೇನಾ ಸಂಸ್ಥಾಪಕ. ದಿಘೆ ಅವರು ಠಾಣೆ ಪ್ರದೇಶ ದಲ್ಲಿ ಸೇನಾದ ಪ್ರಭಾವಿ ಮುಖಂಡರಾಗಿದ್ದರು. ದಿಘೆ ಮಾರ್ಗದರ್ಶನದಲ್ಲಿಯೇ ಶಿಂಧೆ ಅವರು ಬೆಳೆದುಬಂದಿದ್ದಾರೆ.

ಮಹಾರಾಷ್ಟ್ರದ ಸರ್ಕಾರವನ್ನು ಉರುಳಿಸುವ ಮೂರನೇ ಪ್ರಯತ್ನ ನಡೆದಿದೆ ಎಂದು ಎಂವಿಎಯ ಎರಡನೇ ಅತೀ ದೊಡ್ಡ ಪಕ್ಷ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ. ಇದು ಸೇನಾದ ಆಂತರಿಕ ವಿಚಾರವಾಗಿದ್ದು, ಉದ್ಧವ್‌ ಅವರು ಅದನ್ನು ನಿಭಾಯಿಸಲಿದ್ದಾರೆ ಎಂದಿದ್ದಾರೆ. 

ಸೇನಾವು ದೀರ್ಘ ಕಾಲ ಬಿಜೆಪಿಯ ಮಿತ್ರಪಕ್ಷವಾಗಿತ್ತು. 2019ರಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಎಂವಿಎ ರೂಪಿಸಿತ್ತು. 

ಹೋಟೆಲ್‌ಗೆ ಬಿಗಿ ಭದ್ರತೆ

ಸೇನಾ ಶಾಸಕರು ತಂಗಿರುವ ಸೂರತ್‌ನ ಲಿ ಮೆರೀಡಿಯನ್‌ ಹೋಟೆಲ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ. 300–400 ಪೊಲೀಸರು ಕಾವಲು ಕಾಯುತ್ತಿದ್ದಾರೆ. ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಪರಿಶೀಲನೆಯ ಬಳಿಕವೇ ಜನರನ್ನು ಒಳಕ್ಕೆ ಕಳುಹಿಸಲಾಗುತ್ತಿದೆ. ಹೋಟೆಲ್‌ನ ಒಳಗಡೆಯೂ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಸಣ್ಣ ಪಕ್ಷಗಳೇ ನಿರ್ಣಾಯಕ

ಮಹಾರಾಷ್ಟ್ರ ಸರ್ಕಾರವು ಅಸ್ಥಿರಗೊಳ್ಳುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಸಣ್ಣ ಪಕ್ಷಗಳ ಶಾಸಕರು ಮತ್ತು ಪಕ್ಷೇತರ ಶಾಸಕರು ನಿರ್ಣಾಯಕ ಎನಿಸಲಿದ್ದಾರೆ. ಒಟ್ಟು 13 ಪಕ್ಷೇತರ ಶಾಸಕರು ಇದ್ದಾರೆ. ಅವರಲ್ಲಿ ಆರು ಶಾಸಕರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ, ಐವರು ಶಿವಸೇನಾ ಜತೆಗಿದ್ದಾರೆ. ಎನ್‌ಸಿಪಿ ಮತ್ತು ಕಾಂಗ್ರೆಸ್‌ಗೆ ತಲಾ ಒಬ್ಬರ ಬೆಂಬಲವಿದೆ. 

ಬಹುಜನ ವಿಕಾಸ ಆಘಾಡಿ (3), ಸಮಾಜವಾದಿ ಪಕ್ಷ (2), ಎಐಎಂಐಎಂ (2), ಪ್ರಹಾರ್ ಜನಶಕ್ತಿ
ಪಕ್ಷ (2) ಶಾಸಕರನ್ನು ಹೊಂದಿವೆ. ಎಂಎನ್‌ಎಸ್‌, ಸಿಪಿಎಂ, ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ಜನಸುರಾಜ್ಯ ಶಕ್ತಿ ಪಾರ್ಟಿ ಮತ್ತು ಕ್ರಾಂತಿಕಾರಿ ಶೇತ್ಕರಿ ಪಕ್ಷ ತಲಾ ಒಬ್ಬೊಬ್ಬ ಶಾಸಕರನ್ನು ಹೊಂದಿವೆ. 

ಚಟುವಟಿಕೆ ಬಿರುಸು

l ಎಂವಿಎ ಮೈತ್ರಿಕೂಟದ ಘಟಕ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಮುಖಂಡರು ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬಾಳಾಸಾಹೇಬ್‌ ಥೋರಟ್‌ ಮತ್ತು ಅಶೋಕ್‌ ಚವಾಣ್ ಅವರು ಉದ್ಧವ್‌ ಅವರನ್ನು ಭೇಟಿಯಾದರು

l ಉದ್ಧವ್‌ ಠಾಕ್ರೆ ಅವರು ಪಕ್ಷದ ಶಾಸಕರ ಜತೆಗೆ ಸಭೆ ನಡೆಸಿದ್ದಾರೆ

l ಕಾಂಗ್ರೆಸ್‌ನ ಎಲ್ಲ 44 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್‌ ಥೋರಟ್‌ ಹೇಳಿದ್ದಾರೆ

l ಮುಖಂಡ ಕಮಲನಾಥ್ ಅವರನ್ನು ಎಐಸಿಸಿ ವೀಕ್ಷಕರಾಗಿ ನಿಯೋಜಿಸಲಾಗಿದೆ

l ತಮ್ಮ ಗಂಡ ಕಾಣೆಯಾಗಿದ್ದಾರೆ ಎಂದು ಶಿವಸೇನಾ ಶಾಸಕ ನಿತಿನ್‌ ದೇಶಮುಖ್‌ ಅವರ ಹೆಂಡತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ರಾತ್ರಿಯಿಂದ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ‌

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ಅಪಾಯ ತಂದಿರುವ ಏಕನಾಥ ಶಿಂಧೆ ಯಾರು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು