ಬುಧವಾರ, ಜೂನ್ 29, 2022
26 °C

ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಗೃಹ ಸಚಿವರ ಆದೇಶವಿತ್ತು: ಪರಮ್ ಬೀರ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Anil Deshmukh. Credit: DH File Photo

ಮುಂಬೈ: ಪ್ರತಿ ತಿಂಗಳೂ ₹100 ಕೋಟಿ ಲಂಚ ಸಂಗ್ರಹಿಸುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಸೂಚಿಸಿದ್ದರು ಎಂದು ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ.

ಮುಂಬೈ ನಗರ ಪೊಲೀಸ್‌ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ಗುರುವಾರವಷ್ಟೇ ವರ್ಗಾವಣೆ ಮಾಡಲಾಗಿತ್ತು. ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ ಸಿಂಗ್ ಅವರು ವಾಜೆ ಹಾಗೂ ಗೃಹ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ, ರಾಜ್ಯಪಾಲರಿಗೆ ಪತ್ರ

ಗೃಹ ಸಚಿವರ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೂ ಸಿಂಗ್ ಪತ್ರ ಬರೆದಿದ್ದಾರೆ.

ಓದಿ: ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ವರ್ಗಾವಣೆ

ಪತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ, ಆರೋಪದ ಬಗ್ಗೆ ಈಗಾಗಲೇ ಸಿಂಗ್ ಅವರು ಠಾಕ್ರೆ, ಪವಾರ್ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ತಕ್ಷಣವೇ ದೇಶ್‌ಮುಖ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸಿಂಗ್ ಪತ್ರದಲ್ಲೇನಿದೆ?

‘ತಿಂಗಳಿಗೆ ₹100 ಕೋಟಿ ಲಂಚ ಸಂಗ್ರಹಿಸುವಂತೆ ಗೃಹ ಸಚಿವರು ಸಚಿನ್ ವಾಜೆ ಅವರಿಗೆ ಗುರಿ ನಿಗದಿಪಡಿಸಿದ್ದರು. ಈ ಗುರಿ ತಲುಪಲು ಸುಮಾರು 1,750 ಬಾರ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರ ಸಂಸ್ಥೆಗಳಿವೆ ಎಂದು ಗೃಹ ಸಚಿವರು ವಾಜೆ ಅವರಿಗೆ ತಿಳಿಸಿದ್ದರು. ಪ್ರತಿಯೊಂದರಿಂದಲೂ ತಲಾ ₹2 – 3 ಲಕ್ಷದಂತೆ ಸಂಗ್ರಹಿಸಿದರೆ ತಿಂಗಳ ಸಂಗ್ರಹ ಸುಮಾರು ₹40 – 50 ಕೋಟಿ ಆಗಬಹುದು. ಬಾಕಿ ಉಳಿದ ಮೊತ್ತ ಇತರ ಮೂಲಗಳಿಂದ ಸಂಗ್ರಹಿಸಬಹುದು ಎಂದು ಸಚಿವರು ಹೇಳಿದ್ದರು’ ಎಂಬುದಾಗಿ ಪರಮ್ ಬೀರ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರೋಪ ನಿರಾಕರಿಸಿದ ದೇಶ್‌ಮುಖ್

ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ದೇಶ್‌ಮುಖ್ ಅಲ್ಲಗಳೆದಿದ್ದಾರೆ.

ಓದಿ: ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

‘ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ವಾಹನ ಇರಿಸಿರುವುದು ಮತ್ತು ಮನ್ಸುಖ್ ಹಿರೇನ್ ಹತ್ಯೆಯಲ್ಲಿ ಸಚಿನ್ ವಾಜೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತಿದೆ. ಇದು ಪರಮ್ ಬೀರ್ ಸಿಂಗ್ ಅವರನ್ನೂ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ರಕ್ಷಿಸಿಕೊಳ್ಳುವುದಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ’ ಎಂದು ದೇಶ್‌ಮುಖ್ ಟ್ವೀಟ್ ಮಾಡಿದ್ದಾರೆ.

ಯಾರು ಸಚಿನ್ ವಾಜೆ?

ಸಚಿನ್ ವಾಜೆ ಮುಂಬೈನ ಪೊಲೀಸ್ ಅಧಿಕಾರಿ. ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದಲ್ಲಿ ಆರೋಪ ಕೇಳಿಬಂದ ಕಾರಣ ಸದ್ಯ ಬಂಧನಕ್ಕೊಳಗಾಗಿದ್ದಾರೆ. ವಾಜೆ ಅವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಮಾ.13ರಂದು ವಶಕ್ಕೆ ಪಡೆದಿತ್ತು. ಅಲ್ಲಿಯವರೆಗೆ ವಾಜೆ ಅವರು ಮುಂಬೈ ನಗರ ಪೊಲೀಸ್ ಅಪರಾಧ ದಳದ ಅಪರಾಧ ಗುಪ್ತಚರ ಘಟಕದಲ್ಲೇ (ಸಿಐಉ) ಕಾರ್ಯನಿರ್ವಹಿಸುತ್ತಿದ್ದರು.

ಓದಿ: ಅಂಬಾನಿ ಮನೆ ಬಳಿ ಸ್ಫೋಟಕ: ಎನ್‌ಐಎನಿಂದ ಸಚಿನ್‌ ವಾಜೆ ಕಾರಿನ ಹಳೆಯ ಮಾಲೀಕನ ತನಿಖೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು