ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ಮಾನ್ಯತೆ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ: ಶಿವಸೇನಾ ಬಂಡಾಯ ಶಾಸಕ

ಅಕ್ಷರ ಗಾತ್ರ

ಗುವಾಹಟಿ: ನಮ್ಮ ಬಣಕ್ಕೆ ಮಾನ್ಯತೆ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಶಿವಸೇನಾ ಬಂಡಾಯ ಶಾಸಕ ದೀಪಕ್‌ ಕೇಸರ್ಕರ್‌ ತಿಳಿಸಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಅವರು, ‘ನಾವು ಇನ್ನೂ ಶಿವಸೇನಾದಲ್ಲಿದ್ದೇವೆ. ಪಕ್ಷ ತೊರೆದಿದ್ದೇವೆ ಎಂಬುದು ತಪ್ಪು ತಿಳುವಳಿಕೆ. ನಾವು ಈಗಷ್ಟೇ ನಮ್ಮ ಬಣವನ್ನು ಬೇರ್ಪಡಿಸಿಕೊಂಡಿದ್ದೇವೆ‘ ಎಂದು ಹೇಳಿದ್ದಾರೆ.

‘ನಾವು ಬಯಸಿದ ಮಾರ್ಗವನ್ನು ಅನುಸರಿಸಲು ನಮಗೆ ಬಹುಮತವಿದೆ. ನಮ್ಮ ಹೊಸ ನಾಯಕ(ಏಕನಾಥ ಶಿಂಧೆ) ಬಹುಮತದಿಂದ ಆಯ್ಕೆಯಾಗಿದ್ದಾರೆ. ಅವರ(ಉದ್ಧವ್‌ ಠಾಕ್ರೆ) ಬಳಿ 17ಕ್ಕಿಂತ ಹೆಚ್ಚು ಶಾಸಕರಿರಲಿಲ್ಲ’ ಎಂದು ಕೇಸರ್ಕರ್‌ ತಿಳಿಸಿದ್ದಾರೆ.

‘ನಮ್ಮ ಹೋಟೆಲ್ ವಾಸ್ತವ್ಯದ ಖರ್ಚಿಗೆ ಯಾವುದೇ ಪಕ್ಷವು ಹಣ ನೀಡುತ್ತಿಲ್ಲ. ನಮ್ಮ ನಾಯಕ ಏಕನಾಥ ಶಿಂಧೆ ನಮ್ಮನ್ನು ಕರೆದರು. ನಾವು ಇಲ್ಲಿಗೆ(ಗುವಾಹಟಿ ಹೋಟೆಲ್) ಬಂದು ಉಳಿದುಕೊಂಡಿದ್ದೇವೆ. ಇದರ ವೆಚ್ಚವನ್ನು ನಾವೇ ಭರಿಸಲಿದ್ದೇವೆ. ಈ ಬೆಳವಣಿಗೆಗಳ ಹಿಂದೆ ಬಿಜೆಪಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಮ್ಮ ಬಣಕ್ಕೆ ಮಾನ್ಯತೆ ನೀಡಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮಗೆ ಸಂಖ್ಯಾ ಬಲವಿದೆ. ನಾವು ಸಿಎಂ ಉದ್ಧವ್ ಠಾಕ್ರೆ ಅವರನ್ನು ಗೌರವಿಸುತ್ತೇವೆ. ನಾವು ಅವರ ವಿರುದ್ಧ ಮಾತನಾಡುವುದಿಲ್ಲ. ವಿಧಾನಸಭೆ ಚುನಾವಣೆ ಎದುರಿಸಿದ ಹಾದಿಯಲ್ಲಿ(ಬಿಜೆಪಿ–ಶಿವಸೇನಾ ಮೈತ್ರಿ) ನಾವು ಸಾಗಬೇಕು. ಇದಷ್ಟೇ ನಮ್ಮ ಬೇಡಿಕೆ’ ಎಂದು ಕೇಸರ್ಕರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸದ್ಯ ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳನ್ನೊಳಗೊಂಡ ಮಹಾ ವಿಕಾಸ್‌ ಆಘಾಡಿ ಮೈತ್ರಿಕೂಟ ಅಧಿಕಾರದಲ್ಲಿದೆ. ಸದ್ಯ ಶಿವಸೇನಾದಲ್ಲಿ ಬಿಕ್ಕಟ್ಟು ಬಿಗಡಾಯಿಸಿದೆ. ಶಾಸಕ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನಾದ ಕನಿಷ್ಠ 38 ಶಾಸಕರು ಮತ್ತು 10 ಪಕ್ಷೇತರರು ಅಸ್ಸಾಂನ ಗುವಾಹಟಿಯ ಹೋಟೆಲ್‌ವೊಂದರಲ್ಲಿ ಬೀಡುಬಿಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿನ ಬಲಾಬಲ

288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 55 ಶಾಸಕರ ಬಲ ಹೊಂದಿದೆ. ಎನ್‌ಸಿಪಿ 53, ಕಾಂಗ್ರೆಸ್‌ನ 44, ಬಹುಜನ ವಿಕಾಸ ಆಘಾಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಹಾಗೂ ಪ್ರಹಾರ್‌ ಜನಶಕ್ತಿ ಪಾರ್ಟಿಯ ತಲಾ ಇಬ್ಬರು ಶಾಸಕರಿದ್ದಾರೆ.

ಎಂಎನ್‌ಎಸ್‌, ಸಿಪಿಐ (ಎಂ), ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಾರ್ಟಿ, ಜನಸೂರ್ಯ ಶಕ್ತಿ ಪಾರ್ಟಿ ಹಾಗೂ ಕ್ರಾಂತಿಕಾರಿ ಶೆತಕರಿ ಪಕ್ಷದಿಂದ ತಲಾ ಒಬ್ಬರು ಶಾಸಕರಿದ್ದಾರೆ. 13 ಮಂದಿ ಪಕ್ಷೇತರ ಶಾಸಕರು ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ 106 ಶಾಸಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT