ಸೋಮವಾರ, ಆಗಸ್ಟ್ 8, 2022
25 °C

ಮಹಾರಾಷ್ಟ್ರ ಬಿಕ್ಕಟ್ಟು: ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನಕ್ಕೆ ಬುಧವಾರ ಸಂಜೆ ರಾಜೀನಾಮೆ ಘೋಷಿಸಿದ್ದಾರೆ. ವಿಶ್ವಾಸಮತ ಸಾಬೀತು ಮಾಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರು ನೀಡಿರುವ ಆದೇಶಕ್ಕೆ ತಡೆ ನೀಡಿ ಎಂದು ಶಿವಸೇನಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಗುರುವಾರವೇ ವಿಶ್ವಾಸಮತ ಸಾಬೀತುಪಡಿಸಿ’ ಎಂದು ಆದೇಶಿಸಿತ್ತು. ಅದರ ಬೆನ್ನಲ್ಲೇ ಠಾಕ್ರೆ ಈ ನಿರ್ಧಾರ ಪ್ರಕಟಿಸಿದ್ದಾರೆ. ಜತೆಗೆ ರಾಜ್ಯ ವಿಧಾನ ಪರಿಷತ್ ಸದಸ್ಯತ್ವಕ್ಕೂ ಅವರು ರಾಜೀನಾಮೆ ಘೋಷಿಸಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುವುದು ಸ್ಪಷ್ಟವಾಗಿಲ್ಲ. ಮಹಾ ವಿಕಾಸ ಆಘಾಡಿಯ ಭಾಗವಾಗಿದ್ದ ಶಿವಸೇನಾದ 39 ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದು, ತಮ್ಮ ಬೆಂಬಲ ವಾಪಸ್ ಪಡೆದಿದ್ದರು. ಈಗ ಈ ಶಾಸಕರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆಯೇ ಅಥವಾ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲಿದ್ದಾರೆಯೇ ಎಂದು ಕಾದು ನೋಡ ಬೇಕಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಬಹುಮತವಿಲ್ಲ. ವಿಶ್ವಾಸಮತ ಸಾಬೀತು ಮಾಡಲು ಸೂಚನೆ ನೀಡಿ ಎಂದು ವಿರೋಧ ಪಕ್ಷ ಬಿಜೆಪಿಯ ನಾಯಕ ದೇವೇಂದ್ರ ಫಡಣವೀಸ್‌ ಅವರು ಮಂಗಳವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಮನವಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ, ಗುರುವಾರ 11 ಗಂಟೆಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಆದೇಶಿಸಿದ್ದರು. ಈ ಆದೇಶದ ವಿರುದ್ಧ ಶಿವಸೇನಾವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠವು ಬುಧವಾರ ಸಂಜೆ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಬುಧವಾರ ಸಂಜೆ 5ರಿಂದ ರಾತ್ರಿ 8.30ರವರೆಗೆ ವಿಚಾರಣೆ ನಡೆಸಿದ ಪೀಠವು, 9 ಗಂಟೆಯಲ್ಲಿ ಈ ಆದೇಶ ನೀಡಿತ್ತು. ರಾತ್ರಿ 9.30ಕ್ಕೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಉದ್ಧವ್ ಠಾಕ್ರೆ ಅವರು, ರಾಜೀನಾಮೆ ಘೋಷಿಸಿದರು. ಮಹಾ ವಿಕಾಸ ಆಘಾಡಿ ಸರ್ಕಾರ ರಚಿಸಲು ನೆರವು ನೀಡಿದ್ದಕ್ಕಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಠಾಕ್ರೆ ಧನ್ಯವಾದ ಹೇಳಿದ್ದಾರೆ.

ಪಕ್ಷವನ್ನು ಮತ್ತೆ ಕಟ್ಟುವೆ: ಉದ್ಧವ್

‘ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳಿಗಾಗಿ ತಲೆಗಳನ್ನು ಎಣಿಸಲಾಗುತ್ತದೆ. ಆದರೆ, ಅದರಲ್ಲಿ ನನಗೆ ಆಸಕ್ತಿ ಇಲ್ಲ. ಇಂಥ ಆಟಗಳನ್ನು ಆಡುವುದು ನನಗೆ ಬೇಕಾಗಿಲ್ಲ. ನಾಳೆ(ಭವಿಷ್ಯದಲ್ಲಿ) ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮಗನ ಸರ್ಕಾರವನ್ನು ಉರುಳಿಸಿದೆವು ಎಂದು ಹೇಳುತ್ತಾರೆ. ಶಿವಸೇನೆಯು ಒಂದು ಕುಟುಂಬ. ನಾನು ಎಲ್ಲಿಗೂ ಓಡಿ ಹೋಗುವುದಿಲ್ಲ.ನಾನು ನಮ್ಮ ಎಲ್ಲ ಬೆಂಬಲಿಗರನ್ನು ಒಟ್ಟುಗೂಡಿಸಿ ಪಕ್ಷವನ್ನು ಮತ್ತೆ ಕಟ್ಟುತ್ತೇನೆ’ ಎಂದು ಹೇಳಿದರು. ಇದಕ್ಕೂ ಮುನ್ನ ಅವರು ಸರ್ಕಾರ ರಚನೆಗೆ ನೆರವಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಧನ್ಯವಾದ ತಿಳಿಸಿದ್ದರು.

* ಶಿವಸೇನಾದ ಬಂಡಾಯ ಶಾಸಕರ ನಿವಾಸಗಳಿಗೆ ನೀಡಲಾಗಿದ್ದ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜೊತೆಗೆ, ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್‌ ಪಡೆ (ಎಸ್‌ಆರ್‌ಪಿಎಫ್‌) ನಿಯೋಜಿಸಲಾಗಿದೆ. ಬಂಡಾಯ ಶಾಸಕರು ಖಾಸಗಿ ವಿಮಾನದಲ್ಲಿ ಗುರುವಾರ ಬೆಳಗ್ಗೆ ಮುಂಬೈಗೆ ಬರುವ ನಿರೀಕ್ಷೆ ಇದೆ.

* ‘ನಾವು ಉದ್ಧವ್‌ ಠಾಕ್ರೆ ಅವರ ರಾಜೀನಾಮೆಯನ್ನು ಆಗ್ರಹಿಸಿರಲಿಲ್ಲ. ಈ ಕುರಿತು ನಮಗೆ ಸಂತೋಷವಿಲ್ಲ’ ಎಂದು ಬಂಡಾಯ ಶಾಸಕ ಏಕನಾಥ್ ಶಿಂಧೆ ಅವರ ಬಣ ಹೇಳಿದೆ. ಶಿವಸೇನಾದ ಗುರುತು, ಬಾಳಾಸಾಹೇಬ್ ಠಾಕ್ರೆ ಅವರ ಮಾದರಿಗಾಗಿ ನಮ್ಮ ಹೋರಾಟ ಎಂದು ಬಂಡಾಯ ಶಾಸಕ ದೀಪಕ್ ಕೇಸರ್‌ಕರ್‌ ತಿಳಿಸಿದ್ದಾರೆ. 

 ಯಾರು ಏನು ಹೇಳಿದರು?

l ಮುಂದೆ ಏನು ಮಾಡಬೇಕು ಎಂಬುದು ಫಡಣವೀಸ್ ಮತ್ತು ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ನಿರ್ಧರಿಸುತ್ತಾರೆ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್

l ಬಿಜೆಪಿ ಕಾರ್ಯಕರ್ತರು ಸದ್ಯಕ್ಕೆ ಜಯ ಆಚರಣೆಯಲ್ಲಿ ತೊಡಗಬಾರದು: ಪಕ್ಷ ಸೂಚನೆ

l ಸರ್ಕಾರ ರಚನೆ ಕುರಿತು ನಮ್ಮ ಪಕ್ಷದ ನಿಲುವು ಏನು ಎಂಬುದನ್ನು ಗುರುವಾರ‌ ತಿಳಿಸುತ್ತೇವೆ: ದೇವೇಂದ್ರ ಫಡಣವೀಸ್ 

l ಫಡಣವೀಸ್ ಮುಖ್ಯಮಂತ್ರಿ, ಸದ್ಯಕ್ಕೆ ಮಂತ್ರಿಯಾಗಿರುವ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗುವ ನಿರೀಕ್ಷೆ

l ವಾರಾಂತ್ಯದಲ್ಲಿ ಫಡಣವೀಸ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎಂಬ ನಿರೀಕ್ಷೆಯಿದೆ. 

l ಶಿವಸೇನಾದ ಬಂಡಾಯ ಶಾಸಕರ ನಿವಾಸಗಳಿಗೆ ನೀಡಲಾಗಿದ್ದ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜೊತೆಗೆ, ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್‌ ಪಡೆ (ಎಸ್‌ಆರ್‌ಪಿಎಫ್‌) ನಿಯೋಜಿಸಲಾಗಿದೆ. ಬಂಡಾಯ ಶಾಸಕರು ಖಾಸಗಿ ವಿಮಾನದಲ್ಲಿ ಗುರುವಾರ ಬೆಳಗ್ಗೆ ಮುಂಬೈಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: 

ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮ ‘ಫೇಸ್‌ಬುಕ್‌’ನಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಬೆಂಬಲಿಸಿದ್ದಕ್ಕಾಗಿ ರಾಜ್ಯದ ಜನತೆಗೆ, ಮಿತ್ರಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನವರಿಗೆ ಕೃತಜ್ಞತೆಯನ್ನು ಹೇಳಲು ಬಯಸುತ್ತೇನೆ ಎಂದು ಹೇಳಿದರು.

‘ನಾನು ಅನಿರೀಕ್ಷಿತವಾಗಿ ಇಲ್ಲಿಗೆ (ಅಧಿಕಾರಕ್ಕೆ) ಬಂದಿದ್ದೇನೆ ಹಾಗೂ ಈಗ ಅದೇ ರೀತಿಯಲ್ಲಿ ನಿರ್ಗಮಿಸುತ್ತಿದ್ದೇನೆ. ಹಾಗೆಂದು ಶಾಶ್ವತವಾಗಿ ಇಲ್ಲಿಂದ ತೆರಳುವುದಿಲ್ಲ. ಮತ್ತೊಮ್ಮೆ ಶಿವಸೇನಾ ಭವನದಲ್ಲಿ ಕುಳಿತುಕೊಳ್ಳಲಿದ್ದೇನೆ. ನನ್ನವರೆಲ್ಲರನ್ನು ಒಟ್ಟುಗೂಡಿಸಲಿದ್ದೇನೆ. ಶಿವಸೇನಾ ಮತ್ತೊಮ್ಮೆ ಪುಟಿದೇಳಲಿದೆ. ಮುಖ್ಯಮಂತ್ರಿ ಸ್ಥಾನದ ಜತೆಗೆ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಠಾಕ್ರೆ ಹೇಳಿದರು.

ಇದನ್ನೂ ಓದಿ: 

ಮಹಾ ವಿಕಾಸ್‌ ಆಘಾಡಿ ಸರ್ಕಾರದ ವಿರುದ್ಧ ಕೆಲವು ದಿನಗಳ ಹಿಂದೆ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನಾದ ಹತ್ತಾರು ಶಾಸಕರು ಬಂಡಾಯವೆದ್ದಿದ್ದರು. ಶಿವಸೇನಾದ ಕನಿಷ್ಠ 38 ಶಾಸಕರು, ಪಕ್ಷೇತರರು ಸೇರಿದಂತೆ ಒಟ್ಟು 50 ಶಾಸಕರ ಬೆಂಬಲ ತಮಗಿದೆ ಎಂದು ಶಿಂಧೆ ಹೇಳಿಕೊಂಡಿದ್ದರು.

ಬಿಜೆಪಿ ನಾಯಕರಿಂದ ಸಭೆ:

ಉದ್ಧವ್ ಠಾಕ್ರೆ ರಾಜೀನಾಮೆ ಬೆಳವಣಿಗೆ ಮಧ್ಯೆಯೇ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡಣವೀಸ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹಾಗೂ ಪಕ್ಷದ ಇತರ ನಾಯಕರು ಮುಂಬೈಯ ‘ತಾಜ್ ಪ್ರೆಸಿಡೆಂಟ್ ಹೋಟೆಲ್’ನಲ್ಲಿ ಸಭೆ ನಡೆಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಬಲಾಬಲ

288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 55 ಶಾಸಕರ ಬಲ ಹೊಂದಿದೆ. ಎನ್‌ಸಿಪಿ 53, ಕಾಂಗ್ರೆಸ್‌ನ 44, ಬಹುಜನ ವಿಕಾಸ ಆಘಾಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಹಾಗೂ ಪ್ರಹಾರ್‌ ಜನಶಕ್ತಿ ಪಾರ್ಟಿಯ ತಲಾ ಇಬ್ಬರು ಶಾಸಕರಿದ್ದಾರೆ.

ಎಂಎನ್‌ಎಸ್‌, ಸಿಪಿಐ (ಎಂ), ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಾರ್ಟಿ, ಜನಸೂರ್ಯ ಶಕ್ತಿ ಪಾರ್ಟಿ ಹಾಗೂ ಕ್ರಾಂತಿಕಾರಿ ಶೆತಕರಿ ಪಕ್ಷದಿಂದ ತಲಾ ಒಬ್ಬರು ಶಾಸಕರಿದ್ದಾರೆ. 13 ಮಂದಿ ಪಕ್ಷೇತರ ಶಾಸಕರು ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ 106 ಶಾಸಕರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು