ಸೋಮವಾರ, ಸೆಪ್ಟೆಂಬರ್ 27, 2021
25 °C

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; ಅವಶೇಷಗಳ ಅಡಿಯಲ್ಲಿ 40 ಜನ ಪ್ರಯಾಣಿಕರಿದ್ದ ಬಸ್

ಪಿಟಿಐ Updated:

ಅಕ್ಷರ ಗಾತ್ರ : | |

ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯಲ್ಲಿ ಮಣ್ಣು ಕುಸಿದಿರುವುದು

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯಲ್ಲಿ ಬುಧವಾರ ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 40 ಮಂದಿ ಮಣ್ಣು ಕಲ್ಲಿನ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಜಿಲ್ಲಾಧಿಕಾರಿ ಅಬಿದ್‌ ಹುಸೇನ್‌ ಸಾದಿಖ್‌ ಹೇಳಿದ್ದಾರೆ.

ಐಟಿಬಿಪಿ ಸಿಬ್ಬಂದಿ ಒಂಬತ್ತು ಜನರನ್ನು ರಕ್ಷಿಸಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿರುವುದಾಗಿ ತಿಳಿದು ಬಂದಿದೆ.

40 ಮಂದಿ ಪ್ರಯಾಣಿಸುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ನಿಗಮದ (ಎಚ್‌ಆರ್‌ಟಿಸಿ) ಬಸ್ ಸೇರಿದಂತೆ ಹಲವು ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿವೆ. ಕಿನ್ನೌರ್‌ನ ರಿಕಾಂಗ್‌ ಪಿಓದಿಂದ ಶಿಮ್ಲಾಗೆ ಬಸ್‌ ಸಂಚರಿಸುತ್ತಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

'ಇನ್ನೂ ಸಹ ಕಲ್ಲುಗಳು ಜಾರಿ ಬೀಳುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ಸ್ಥಳೀಯ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಬರುವಂತೆ ಕೋರಲಾಗಿದೆ' ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಭೂಕುಸಿತ ಉಂಟಾಗಿರುವ ಸ್ಥಳದಲ್ಲಿ ಅವಶೇಷಗಳ ಅಡಿಯಲ್ಲಿ 50ರಿಂದ 60 ಜನರು ಸಿಲುಕಿರುವ ಸಾಧ್ಯತೆ ಇದೆ. ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಬಸ್‌ನ ಚಾಲಕ, ನಿರ್ವಾಹಕ ಸೇರಿದಂತೆ ನಾಲ್ಕು ಜನರನ್ನು ರಕ್ಷಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಹೇಳಿದ್ದಾರೆ.

17, 19 ಮತ್ತು 43ನೇ ಬೆಟಾಲಿಯನ್‌ನ ಐಟಿಬಿಪಿ ಸಿಬ್ಬಂದಿ ರಿಕಾಂಗ್‌ ಪಿಓ–ಶಿಮ್ಲಾ ಹೆದ್ದಾರಿ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

'ಬಸ್‌, ಟ್ರಕ್‌ ಸೇರಿ ನಾಲ್ಕು ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿವೆ' ಎಂದು ಐಟಿಬಿಪಿ ಹೇಳಿದೆ.

ಕಿನ್ನೌರ್‌ನ ಭೂಕುಸಿತದಿಂದ ಎದುರಾಗಿ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನೂ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ) ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು