ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜೀವ ದಹನ ಪ್ರಕರಣ: ಘಟನಾ ಸ್ಥಳದ ಮಾದರಿ ತಕ್ಷಣ ಸಂಗ್ರಹಿಸಲು ಹೈಕೋರ್ಟ್‌ ಸೂಚನೆ

ಬಿರ್‌ಭೂಮ್ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ
Last Updated 23 ಮಾರ್ಚ್ 2022, 19:46 IST
ಅಕ್ಷರ ಗಾತ್ರ

ಕೋಲ್ಕತ್ತ: ‘ರಾಜ್ಯದ ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹಾಟ್‌ ಸಮೀಪದ ಬೋಗ್ತಿ ಗ್ರಾಮದಲ್ಲಿ 8 ಜನರನ್ನು ಸಜೀವವಾಗಿ ದಹನ ಮಾಡಿದ ಘಟನಾ ಸ್ಥಳದಲ್ಲಿನ ಮಾದರಿಗಳನ್ನು, ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲು ತಕ್ಷಣವೇ ಸಂಗ್ರಹಿಸಿ’ ಎಂದು ಕಲ್ಕತ್ತ ಹೈಕೋರ್ಟ್‌ ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಕ್ಕೆ (ಸಿಎಫ್‌ಎಸ್‌ಎಲ್‌) ಸೂಚನೆ ನೀಡಿದೆ.

ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾ ಮಾಡಿದೆ. ಬದಲಿಗೆ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದೆ. ‘ಘಟನಾ ಸ್ಥಳದಲ್ಲಿ ತಕ್ಷಣವೇ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ. ಮುಂದಿನ ಆದೇಶದವರೆಗೂ ಅವು ಅಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಮುಖ್ಯನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

‘ಈ ಪ್ರಕರಣದಲ್ಲಿ ಸಾಕ್ಷಿಗಳಾಗಿರುವವರಿಗೆ ಅಗತ್ಯ ರಕ್ಷಣೆ ನೀಡಬೇಕು. ಅವರಿಗೆ ಏನೂ ಆಗದಂತೆ ಎಚ್ಚರವಹಿಸಬೇಕು. ಬೆಂಕಿಯಲ್ಲಿ ಸ್ವಲ್ಪ ಗಾಯಗಳಿಂದ ಬದುಕುಳಿದಿರುವ ಬಾಲಕನಿಗೆ ಬಿಗಿ ಭದ್ರತೆ ನೀಡಬೇಕು. ಇದಕ್ಕಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಜತೆಗೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಪೀಠವು ಆದೇಶಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಅದಕ್ಕೂ ಮುನ್ನವೇ ರಾಜ್ಯ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಬೇಕು ಎಂದು ಪೀಠವು ಆದೇಶಿಸಿದೆ.

ಪ್ರತಿಭಟನೆ: ಈ ಪ್ರಕರಣವನ್ನು ಖಂಡಿಸಿ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ಮತ್ತು ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಾಮ್‌ಪುರಹಾಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ.

ಮಮತಾಗೆ ರಾಜ್ಯಪಾಲರ ಪತ್ರ, ಟೀಕೆ
ಕೋಲ್ಕತ್ತ (ಪಿಟಿಐ): ‘ರಾಜ್ಯದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುವಾಗ ರಾಜಭವನವು ಮೂಕಪ್ರೇಕ್ಷಕವಾಗಿ ಕೂರುವುದಿಲ್ಲ’ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರತಿಕ್ರಿಯಿಸಬೇಕಿರಲಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಮಂಗಳವಾರ ರಾತ್ರಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ರಾಜ್ಯಪಾಲರು ಬುಧವಾರ ಬೆಳಿಗ್ಗೆ ಈ ಪತ್ರ ಬರೆದಿದ್ದಾರೆ. ಪತ್ರದ ಚಿತ್ರವನ್ನು ಅವರು ಟ್ವೀಟ್‌ ಮಾಡಿದ್ದಾರೆ.

‘ಅಲ್ಲಲ್ಲಿ ಕೆಲವು ಘಟನೆಗಳನ್ನು ಹೊರತುಪಡಿಸಿದರೆ, ರಾಜ್ಯವು ಶಾಂತಿಯುತವಾಗಿದೆ ಎಂದು ನೀವು ನೀಡಿರುವ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ರಾಜ್ಯದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ತನಿಖೆಯ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು, ‘ಇಲ್ಲಿ ಕಾನೂನಿನ ಆಳ್ವಿಕೆ ಇಲ್ಲ. ಬದಲಿಗೆ ಆಳುವವರ ಕಾನೂನು ಇದೆ’ ಎಂದು ಹೇಳಿತ್ತು. ಇದು ರಾಜ್ಯದಲ್ಲಿನ ವಾಸ್ತವ ಸ್ಥಿತಿಯ ಬಹಿರಂಗ ರಹಸ್ಯ’ ಎಂದು ಧನಕರ್ ಅವರು ಟೀಕಿಸಿದ್ದಾರೆ.

‘8 ಜನರ ಹತ್ಯೆ ನಡೆದಿದೆ ಎನ್ನಲಾಗಿದೆ. ಆದರೆ ಸತ್ತವರ ಸಂಖ್ಯೆ ಇದಕ್ಕಿಂತಲೂ ಹೆಚ್ಚು ಎಂದು ಹಲವು ವರದಿಗಳು ಹೇಳಿವೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯದ ಹೆಸರಿಗೆ ಮಸಿ ಬಳಿಯಲು ದೊಡ್ಡ ಮಟ್ಟದ ಸಂಚು ನಡೆಸಲಾಗಿದೆ ಎಂದು ನೀವು ನೀಡಿರುವ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುತ್ತೇವೆ ಎಂದು ನೀವು ನೀಡಿರುವ ಭರವಸೆಯು ಸತ್ಯಕ್ಕೆ ದೂರವಾದುದು. ಪ್ರಕರಣದ ತನಿಖೆಗೆ ನೀವು ರಚಿಸಿರುವ ಎಸ್‌ಐಟಿಯ ಮುಖ್ಯಸ್ಥರಾಗಿರುವ ಗ್ಯಾನಾವಂತ್ ಸಿಂಗ್ ಅವರ ವಿರುದ್ಧ, ನ್ಯಾಯಾಂಗಕ್ಕೆ ಅಪಚಾರ ಎಸಗಿದ ಆರೋಪವಿದೆಯಲ್ಲವೇ? ಅವರು ನಡೆಸುವ ತನಿಖೆ ‘ಸತ್ಯವನ್ನು ಮುಚ್ಚಿಡುವ ಕಾರ್ಯಾಚರಣೆ’ ಅಷ್ಟೆ. ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗಾಗಿ ಇದು ಸರಿಯಾದ ತನಿಖೆಯಲ್ಲ’ ಎಂದು ಧನಕರ್ ಟೀಕಿಸಿದ್ದಾರೆ.

‘ಮುಖ್ಯಮಂತ್ರಿ ತಮ್ಮನ್ನು ತಾವು ಪ್ರಜಾಪ್ರಭುತ್ವದ ರಕ್ಷಕಿ ಎಂದು ಕರೆದುಕೊಳ್ಳುತ್ತಾರೆ. ಆ ಪ್ರಕಾರ ಅವರು ಕನಿಷ್ಠ ಕ್ರಮ ತೆಗದುಕೊಂಡರೂ ಇವೆಲ್ಲಾ ನಿಲ್ಲುತ್ತವೆ’ ಎಂದು ಅವರು ಆಗ್ರಹಿಸಿದ್ದಾರೆ.

*
ಈ ಕೃತ್ಯದಲ್ಲಿ ತಪ್ಪಿತಸ್ಥರನ್ನು ಕ್ಷಮಿಸಲು ಸಾಧ್ಯವಿಲ್ಲ. ಅವರನ್ನು ಹಿಡಿದು ಶಿಕ್ಷಿಸಲು, ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತೇವೆ.
-ನರೇಂದ್ರ ಮೋದಿ, ಪ್ರಧಾನಿ

*
ಬಿಹಾರ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಈ ಬಗ್ಗೆ ರಾಜ್ಯಪಾಲರು ಒಂದು ಮಾತೂ ಆಡುವುದಿಲ್ಲ
-ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

*
ಪಶ್ಚಿಮ ಬಂಗಾಳ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲೂ ಚುನಾವಣೋತ್ತರ ಹಿಂಸಾಚಾರ ನಡೆದಿಲ್ಲ. ಜತೆಗೆ ನನ್ನ ಅಧಿಕಾರದ ವ್ಯಾಪ್ತಿ ಪಶ್ಚಿಮ ಬಂಗಾಳ ಮಾತ್ರ.
-ಜಗದೀಪ್ ಧನಕರ್‌, ಪಶ್ಚಿಮ ಬಂಗಾಳ ರಾಜ್ಯಪಾಲ

*

ಅಲ್ಲಿ ಮತ್ತಷ್ಟು ಜನರನ್ನು ಕೊಲ್ಲಲಾಗಿದೆ. ಸತ್ತಿರುವವರ ಸಂಖ್ಯೆ 8ಕ್ಕಿಂತ ಹೆಚ್ಚು. ಅಲ್ಲಿಗೆ ಭೇಟಿ ನೀಡಲು ಯಾರಿಗೂ ಅವಕಾಶವಿಲ್ಲ. ಹೀಗಾಗಿ ನಿಖರ ಸಂಖ್ಯೆ ಗೊತ್ತಿಲ್ಲ
-ಲಾಕೆಟ್ ಚಟರ್ಜಿ, ಬಿಜೆಪಿ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT