ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊವ್ಯಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ್ದ ವ್ಯಕ್ತಿ ಸಾವು

Last Updated 9 ಜನವರಿ 2021, 10:13 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕೋವಾಕ್ಸಿನ್‌ ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ಪಾಲ್ಗೊಂಡಿದ್ದ 42 ವರ್ಷದ ಸ್ವಯಂಸೇವಕ 10 ದಿನಗಳ ಬಳಿಕ ಸಾವನ್ನಪ್ಪಿದ್ದಾನೆ ಎಂದು ಸಂಸ್ಥೆಯ ಉಪಕುಲಪತಿ ಶನಿವಾರ ಹೇಳಿದ್ದಾರೆ. ಆದರೆ, ಆ ವ್ಯಕ್ತಿಯು ವಿಷಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.

"ಮೃತಪಟ್ಟ ಸ್ವಯಂಸೇವಕ ದೀಪಕ್ ಮರಾವಿ, ಡಿಸೆಂಬರ್ 12ರಂದು ನಡೆದ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ್ದರು," ಎಂದು ಪೀಪಲ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉಪಕುಲಪತಿ ಡಾ. ರಾಜೇಶ್ ಕಪೂರ್ ಹೇಳಿದ್ದಾರೆ.

ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ ಮಧ್ಯಪ್ರದೇಶದ ವೈದ್ಯಕೀಯ ಕಾನೂನು ಸಂಸ್ಥೆಯ ನಿರ್ದೇಶಕ ಡಾ.ಅಶೋಕ್ ಶರ್ಮಾ ಮಾತನಾಡಿ, ವಿಷ ಸೇವಿಸಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಿದ್ದಾರೆ. ಆದರೂ, ಅವರ ಒಳ ಅಂಗಗಳ ಪರೀಕ್ಷೆ ಬಳಿಕವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಅವರು ಹೇಳಿದ್ದಾರೆ.

"ಡಿಸೆಂಬರ್ 21ರಂದು ಮರಾವಿ ಮೃತಪಟ್ಟ ಬಳಿಕ ನಾವು ಭಾರತದ ಔಷಧ ಮಹಾನಿಯಂತ್ರಕರು ಮತ್ತು ಲಸಿಕೆ ಅಭಿವೃದ್ಧಿಪಡಿಸಿರುವ, ಕ್ಲಿನಿಕಲ್ ಪ್ರಯೋಗ ಆಯೋಜಿಸಿದ್ದಭಾರತ್ ಬಯೋಟೆಕ್ ಸಂಸ್ಥೆಗೆ ಮಾಹಿತಿ ನೀಡಿದ್ದೇವೆ.," ಎಂದು ಡಾ. ಕಪೂರ್ ಪಿಟಿಐಗೆ ತಿಳಿಸಿದ್ದಾರೆ.

"ಲಸಿಕೆ ಕ್ಲಿನಿಕಲ್ ಪ್ರಯೋಗ ನಡೆಸುವುದಕ್ಕೂ ಮುನ್ನ ಎಲ್ಲ ಪ್ರೊಟೊಕಾಲ್ ಪಾಲಿಸಲಾಗಿದೆ. ಸ್ವಯಂಸೇವಕ ಮರಾವಿ ಒಪ್ಪಿಗೆಯನ್ನೂ ಪಡೆದುಕೊಂಡು ಪರೀಕ್ಷೆ ನಡೆಸಲಾಗಿತ್ತು," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಟ್ರಯಲ್‌ಗೆ ಬಂದಿದ್ದ ಲಸಿಕೆ ಟ್ಯೂಬ್‌ಗಳನ್ನು ಕವರ್ ಮಾಡಿ ಕೋಡ್ ನೀಡಲಾಗಿತ್ತು. ಶೇ. 50ರಷ್ಟು ಜನರಿಗೆ ಲಸಿಕೆ ಚುಚ್ಚುಮದ್ದು ಮತ್ತು ಉಳಿದವರಿಗೆ ಸಲೈನ್ ನೀಡಲಾಗಿತ್ತು. ಮರಾವಿ ಲಸಿಕೆ ಪಡೆದ ಬಳಿಕ 7–8 ದಿನ ಮೇಲ್ವಿಚಾರಣೆ ನಡೆಸಲಾಗಿದೆ," ಎಂದು ಡಾ. ರಾಜೇಶ್ ಕಪೂರ್ ಹೇಳಿದ್ದಾರೆ.

ಮೃತ ಮರಾವಿ, ಬುಡಕಟ್ಟು ಜನಾಂಗಕ್ಕೆ ಸೇರಿದವನಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ. ಡಿಸೆಂಬರ್ 12ರಂದು ಮರಾವಿ ಮತ್ತು ಆತನ ಸಹಚರರು ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದರು.

"ಲಸಿಕೆ ಪಡೆದು ಮನೆಗೆ ಹಿಂದಿರುಗಿದ ಬಳಿಕ ಮರಾವಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಡಿಸೆಂಬರ್ 17ರಂದು ಭುಜದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಎರಡು ದಿನಗಳ ಬಳಿಕ ಬಾಯಲ್ಲಿ ನೊರೆ ರೀತಿಯ ದ್ರವ ಬಂದಿದೆ. ಆದರೆ, ಆಗಲೂ ಮರಾವಿ ಆಸ್ಪತ್ರೆಗೆ ತೆರಳದೆ ಒಂದೆರಡು ದಿನಗಳಲ್ಲಿ ಸರಿಯಾಗುತ್ತೆ ಅಂತಾ ಸುಮ್ಮನಾಗಿದ್ದಾರೆ. ಬಳಿಕ, ಡಿಸೆಂಬರ್ 21ರಂದು ಪರಿಸ್ಥಿತಿ ಗಂಭೀರವಾದಾಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ದಾರಿ ಮಧ್ಯೆಯೇ ಮರಾವಿ ಸಾವನ್ನಪ್ಪಿದ್ದಾರೆ," ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT