ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಕೇಜ್ರಿವಾಲ್‌ ಎದುರಾಳಿ: ಮನೀಷ್‌ ಸಿಸೋಡಿಯಾ

ದೆಹಲಿ ಸರ್ಕಾರದ ಅಬಕಾರಿ ನೀತಿ: ಎಎಪಿ –ಬಿಜೆಪಿ ಕಿತ್ತಾಟ
Last Updated 20 ಆಗಸ್ಟ್ 2022, 19:39 IST
ಅಕ್ಷರ ಗಾತ್ರ

ದೆಹಲಿ ಸರ್ಕಾರದ ‘ಅಬಕಾರಿ ನೀತಿ’ ಜಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಎಎಪಿ ನಾಯಕರ ನಡುವೆ ವಾಕ್ಸಮರ ನಡೆದಿದೆ. ಸಿಸೋಡಿಯಾ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಿದ್ದರೂ ಕೇಜ್ರಿವಾಲ್ ಅವರೇ ಪ್ರಕರಣದ ಸೂತ್ರಧಾರ ಎಂದು ಬಿಜೆಪಿ ಆರೋಪಿಸಿದೆ. ಕೇಜ್ರಿವಾಲ್ ಬಗ್ಗೆ ಇರುವ ಭೀತಿಯಿಂದಾಗಿ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಸುವ ಯತ್ನ ಮಾಡುತ್ತಿದೆ ಎಂದು ಎಎಪಿ ಹೇಳಿದೆ.

‘ಮೋದಿಗೆ ಕೇಜ್ರಿವಾಲ್‌ ಎದುರಾಳಿ’
ನವದೆಹಲಿ: ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನೇರ ಎದುರಾಳಿ ಆಗಲಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಶನಿವಾರ ಹೇಳಿದ್ದಾರೆ. ತಮ್ಮ ವಿರುದ್ಧ ಸಿಬಿಐ ಕ್ರಮ ತೆಗೆದುಕೊಂಡ ಮರುದಿನ ಈ ಹೇಳಿಕೆ ನೀಡಿರುವ ಸಿಸೋಡಿಯಾ, ಕೇಜ್ರಿವಾಲ್ ಅವರ ಬಗ್ಗೆ ಇರುವ ಭಯದಿಂದ ಕೇಂದ್ರ ಸರ್ಕಾರವು ಅವರನ್ನು ನಿಯಂತ್ರಿಸುವ ಎಲ್ಲಾ ಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

‘ದೆಹಲಿ ಅಬಕಾರಿ ನೀತಿ’ಯನ್ನು ಸಂಪೂರ್ಣ ಪಾರದರ್ಶಕವಾಗಿ ಜಾರಿ ಮಾಡಲಾಗಿದ್ದು, ಯಾವುದೇ ಹಗರಣ ನಡೆದಿಲ್ಲ ಎಂದು ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ.

‘ಮೋದಿ ಅವರು ರಾಜ್ಯ ಸರ್ಕಾರಗಳನ್ನು ಉರುಳಿಸುವ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಆದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೇಜ್ರಿವಾಲ್ ಅವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ಬಗ್ಗೆ ಜಗತ್ತು ಮಾತನಾಡುತ್ತಿರುವುದು ಬಿಜೆಪಿಯನ್ನು ಭೀತಿಗೆ ತಳ್ಳಿದೆ’ ಎಂದು ಅವರು ಹೇಳಿದ್ದಾರೆ.ಕೇಜ್ರಿವಾಲ್ ಅವರು ಪರ್ಯಾಯ ರಾಷ್ಟ್ರೀಯ ನಾಯಕರಾಗಿ ಬೆಳೆದಿರುವುದನ್ನು ಬಿಜೆಪಿ ಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಜಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಸಿಸೋಡಿಯಾ ಹಾಗೂ ಐಎಎಸ್ ಅಧಿಕಾರಿ ಆರವ್ ಗೋಪಿಕೃಷ್ಣ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿತ್ತು.

‘ಹಗರಣದ ಸೂತ್ರಧಾರ ಕೇಜ್ರಿವಾಲ್’
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು‘ಅಬಕಾರಿ ಹಗರಣ’ದ ಮುಖ್ಯ ಸೂತ್ರಧಾರ ಎಂದು ಬಿಜೆಪಿ ಶನಿವಾರ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ತನ್ನ ನೈಜ ಮುಖ ಬಹಿರಂಗವಾಗಿದ್ದು, ಗಮನವನ್ನು ಬೇರೆಡೆ ಸೆಳೆಯಲುಎಎಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಎಎಪಿ ರಾಜಕೀಯ ಬೆಳವಣಿಗೆ ಸಹಿಸದ ಬಿಜೆಪಿ, ಪಕ್ಷಕ್ಕೆ ನಿಯಂತ್ರಣ ಹೇರಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷಕ್ಕೆ ಠಾಕೂರ್ ತಿರುಗೇಟು ನೀಡಿದ್ದಾರೆ. ಎಎಪಿಯು ಹಲವು ಚುನಾವಣೆಗಳಲ್ಲಿ ಗೆಲ್ಲುವುದಾಗಿ ಹೇಳಿಕೊಂಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಲ್ಲಲು ಆಗಿಲ್ಲ ಎಂದಿದ್ದಾರೆ.

‘ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಖಾತೆ ತೆರೆಯಲೂ ಎಎಪಿಗೆ ಸಾಧ್ಯವಾಗಲಿಲ್ಲ. ಮೋದಿ ನೇತೃತ್ವದಲ್ಲಿ ಬಿಜೆಪಿಯು 2024ರ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದೆ’ ಎಂದು ಠಾಕೂರ್ ಹೇಳಿದ್ದಾರೆ.

‘ಇದು ‘ರೇವ್ಡಿ’ (ಉಚಿತ ಕೊಡುಗೆ) ಸರ್ಕಾರವಷ್ಟೇ ಅಲ್ಲ, ‘ಬೇವ್ಡಿ’ (ಕುಡುಕರ) ಸರ್ಕಾರ ಕೂಡಾ. ಸಂಪುಟದ ಒಪ್ಪಿಗೆ ಪಡೆಯದೆ ಅಬಕಾರಿ ಕಂಪನಿಗಳಿಗೆ ₹144 ಕೋಟಿ ಹಿಂತಿರುಗಿಸಿದ್ದು ಏಕೆ’ ಎಂದುಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ. ಮನೀಷ್‌ ಸಿಸೋಡಿಯಾ ಅವರನ್ನು ದುಡ್ಡಿನ ವ್ಯಕ್ತಿ ಎಂದು ಕರೆದಿರುವ ಠಾಕೂರ್, ಸಿಸೋಡಿಯಾ ಹಣ ಮಾಡುತ್ತಾರೆ ಹಾಗೂ ಮೌನವಾಗಿರುತ್ತಾರೆ ಎಂದು ಆರೋಪಿಸಿದ್ದಾರೆ. ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ ಗುಪ್ತಾ, ಲೋಕಸಭಾ ಸದಸ್ಯ ಮನೋಜ್ ತಿವಾರಿ ಅವರೂ ಕೇಜ್ರಿವಾಲ್ ವಿರುದ್ಧ ವಾಕ್ಸಮರ ನಡೆಸಿದ್ದಾರೆ.

ಸಿಬಿಐ ಸಮನ್ಸ್: ದೆಹಲಿ ಅಬಕಾರಿ ನೀತಿ ಜಾರಿ ಪ್ರಕರಣ ಸಂಬಂಧ ಹಲವು ಆರೋಪಿಗಳಿಗೆ ಸಿಬಿಐ ಶನಿವಾರ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿ ಸಿದೆ. ಸಿಸೋಡಿಯಾ ಅವರಿಂದ ವಶ ಪಡಿಸಿಕೊಂಡ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ದತ್ತಾಂಶಗಳನ್ನು ಪರಿಶೀ ಲಿಸಿದ ಬಳಿಕ ಇನ್ನಷ್ಟು ಜನರಿಗೆ ಸಮನ್ಸ್ ನೀಡಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಎಫ್‌ಐಆರ್ ಅನ್ನು ಜಾರಿ ನಿರ್ದೇಶನಾಲಯದ ಜೊತೆಗೆ ಹಂಚಿಕೊಳ್ಳಲಾಗಿದೆ.

ಗುಜರಾತ್‌ಗೆ ಕೇಜ್ರಿವಾಲ್, ಸಿಸೋಡಿಯಾ
ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರು ಸೋಮವಾರದಿಂದ ಎರಡು ದಿನಗಳ ಕಾಲ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಶನಿವಾರ ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ‘ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಅಧಿಕಾರ ನೀಡಿದರೆ, ಉಚಿತ ಹಾಗೂ ಗುಣಮಟ್ಟದ ಆರೋಗ್ಯ, ಶಿಕ್ಷಣವನ್ನು ನೀಡಲಾಗುವುದು ಎಂಬ ಸಂದೇಶವನ್ನು ಗುಜರಾತ್ ಜನರಿಗೆ ತಲುಪಿಸಲು ಅಲ್ಲಿಗೆ ಹೋಗುತ್ತಿದ್ದೇವೆ’ ಎಂದಿದ್ದಾರೆ.

ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಮನೀಷ್‌ ಸಿಸೋಡಿಯಾ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಎಎಪಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ದೆಹಲಿ ಕಾಂಗ್ರೆಸ್ ಕಚೇರಿಯಿಂದ ಎಎಪಿ ಕೇಂದ್ರ ಕಚೇರಿವರೆಗೆ ಕಾರ್ಯಕರ್ತರು ಮೆರವಣಿಗೆ ನಡೆಸಿ, ಕೇಜ್ರಿವಾಲ್ ಹಾಗೂ ಸಿಸೋಡಿಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖವಾಗಿರುವ ಸಿಸೋಡಿಯಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

*

ಶಿಕ್ಷಣ, ಆರೋಗ್ಯ ಕ್ಷೇತ್ರದ ಒಳ್ಳೆ ಕೆಲಸಗಳನ್ನು ತಡೆಯುವುದು ಬಿಜೆಪಿ ಉದ್ದೇಶ. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮೊದಲು ಬಂಧಿಸಲಾಯಿತು. ಮುಂದಿನ ದಿನಗಳಲ್ಲಿ ನನ್ನನ್ನು ಬಂಧಿಸುವ ಸಾಧ್ಯತೆಯಿದೆ.
-ಮನೀಶ್ ಸಿಸೋಡಿಯಾ, ದೆಹಲಿ ಉಪಮುಖ್ಯಮಂತ್ರಿ

*

ಕೇಜ್ರಿವಾಲ್ ಅವರ ‘ಎಡಗೈ’ ಸತ್ಯೇಂದ್ರ ಜೈನ್ ಈಗಾಗಲೇ ಜೈಲಿನಲ್ಲಿದ್ದಾರೆ. ಅವರ ‘ಬಲಗೈ’ ಸಿಸೋಡಿಯಾ ಅವರೂ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕೇಜ್ರಿವಾಲ್‌ಗೆ ಭಯ ಶುರುವಾಗಿದೆ.
-ಅನುರಾಗ್ ಠಾಕೂರ್, ಕೇಂದ್ರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT