ಭಾನುವಾರ, ಜನವರಿ 23, 2022
27 °C

ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ: 12 ಮಂದಿ ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಜಮ್ಮು: ಇಲ್ಲಿನ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಹೊಸ ವರ್ಷದ ದಿನವಾದ ಶನಿವಾರ ಕಾಲ್ತುಳಿತ ಉಂಟಾಗಿದ್ದು, ಘಟನೆಯಲ್ಲಿ 12 ಯಾತ್ರಾರ್ಥಿಗಳು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.

‘ಶುಕ್ರವಾರ ಮಧ್ಯರಾತ್ರಿ 2.45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹೊಸ ವರ್ಷವನ್ನು ಭಕ್ತಿಪೂರ್ವಕವಾಗಿ  ಬರಮಾಡಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಕಟ್ರಾದಲ್ಲಿರುವ ತ್ರಿಕೂಟ ಬೆಟ್ಟಗಳ ವೈಷ್ಣೋದೇವಿ ಗುಹಾ ದೇಗುಲದಲ್ಲಿ ನೆರೆದಿದ್ದರು. ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದ ವೇಳೆ ಯಾತ್ರಾರ್ಥಿಗಳ ನಡುವೆ ವಾಗ್ವಾದ ನಡೆದಿದ್ದು ತಳ್ಳಾಟ ನಡೆದಿದೆ. ಈ ವೇಳೆ ನೂಕುನುಗ್ಗಲು ಉಂಟಾಗಿ ದುರ್ಘಟನೆ ಸಂಭವಿಸಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು’  ಎಂದು ಮೂಲಗಳು ತಿಳಿಸಿವೆ.

ಮೃತಪಟ್ಟವರಲ್ಲಿ ಉತ್ತರ ಪ್ರದೇಶದ ಏಳು ಮಂದಿ, ದೆಹಲಿಯ ಮೂವರು ಮತ್ತು ಹರಿಯಾಣದ ಇಬ್ಬರು ಸೇರಿದ್ದಾರೆ. ಘಟನೆಯನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಮಾತಾ ವೈಷ್ಣೋದೇವಿ ದೇಗುಲದ ಕಾಲ್ತುಳಿತದಲ್ಲಿ ಪ್ರಾಣ
ಕಳೆದುಕೊಂಡವರಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು