ಭಾನುವಾರ, ಮಾರ್ಚ್ 7, 2021
31 °C
ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಸಂಬಂಧಿಸಿದ ರಿಪಬ್ಲಿಕ್‌ ಟಿವಿ, ಟೈಮ್ಸ್‌ ನೌ ವರಿಗಳಿಗೆ ಕೋರ್ಟ್‌ ಆಕ್ಷೇಪ | ಆತ್ಮಹತ್ಯೆ ವರದಿಯಲ್ಲಿ ಸಂಯಮ ಇರಬೇಕೆಂದ ನ್ಯಾಯಾಲಯ

'ಮಾಧ್ಯಮ ವಿಚಾರಣೆ' ಎಂಬುದು ನ್ಯಾಯಾಂಗ ಕಾರ್ಯನಿರ್ವಹಣೆಗೆ ಎದುರಾದ ಅಡ್ಡಿ: ಕೋರ್ಟ್

ಮೃತ್ಯುಂಜಯ ಬೋಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಆತ್ಮಹತ್ಯೆ ಪ್ರಕರಣಗಳನ್ನು ವರದಿ ಮಾಡುವಾಗ ಸುದ್ದಿ ಮಾಧ್ಯಮಗಳು ಸಂಯಮ ವಹಿಸಬೇಕು ಎಂದು ಬಾಂಬೆ ಹೈಕೋರ್ಟ್ ಸೋಮವಾರ ತಾಕೀತು ಮಾಡಿದೆ. ಅಲ್ಲದೆ, ಪ್ರಕರಣಗಳಲ್ಲಿನ 'ಮಾಧ್ಯಮ ವಿಚಾರಣೆ'ಯು (ಮೀಡಿಯ ಟ್ರಯಲ್‌) ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿನ ಹಸ್ತಕ್ಷೇಪ ಮತ್ತು ಅಡಚಣೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಮಾಧ್ಯಮಗಳು ಸುಶಾಂತ್ ಪ್ರಕರಣದ ವಿಚಾರಣೆ ನಿಲ್ಲಿಸಲಿ: ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಕಳೆದ ವರ್ಷ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಈ ಮೇಲಿನಂತೆ ಅಭಿಪ್ರಾಯಪಟ್ಟಿದೆ.

'ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ನಂತರ ರಿಪಬ್ಲಿಕ್‌ ಟಿ.ವಿ ಮತ್ತು ಟೈಮ್ಸ್‌ ನೌ ಮಾಡಿದ ಕೆಲವು ವರದಿಗಳು ಅಪಮಾನಕಾರಿಯಾಗಿದೆ,' ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ನ್ಯಾಯಪೀಠ ಹೇಳಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸ್ತುತ ಅದರದ್ದೇ ಆದ ಮಾರ್ಗಸೂಚಿಗಳನ್ನು ಹೊಂದಿರದ ಕಾರಣ, ಮುದ್ರಣ ಮಾಧ್ಯಮಕ್ಕಾಗಿ ಇರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಮಾರ್ಗಸೂಚಿಗಳು ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ ಅನ್ವಯವಾಗುತ್ತವೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

'ಯಾವುದೇ ಮಾಧ್ಯಮ ಸಂಸ್ಥೆ ಮಾಡುವ ಇಂಥ ವರದಿಗಳು, ವಿಚಾರಣೆ ಹಂತದಲ್ಲಿರುವ ಪ್ರಕರಣವೊಂದರಲ್ಲಿನ ಹಸ್ತಕ್ಷೇಪ. ಅಲ್ಲದೆ, ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿನ ಅಡಚಣೆ. ಇದು, ನ್ಯಾಯಾಂಗ ನಿಂದನೆಗೆ ಕಾರಣವೂ ಆಗುತ್ತದೆ. ಇಂಥ ವರದಿಗಳು ಕೇಬಲ್‌ ಟಿ.ವಿ ನೆಟವರ್ಕ್‌ ನಿಯಂತ್ರಣಾ ಕಾಯ್ದೆಯ ಅಡಿಯಲ್ಲಿ 'ಕಾರ್ಯಕ್ರಮ ಸಂಹಿತೆ'ಯ ಉಲ್ಲಂಘನೆಯಾಗುತ್ತದೆ,' ಎಂದು ಪೀಠ ತಿಳಿಸಿತು

ಆದಾಗ್ಯೂ ಚಾನೆಲ್‌ಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರಲು ಕೋರ್ಟ್‌ ತೀರ್ಮಾನಿಸಿರುವುದಾಗಿಯೂ ಪೀಠ ಹೇಳಿತು.

'ಯಾವುದೇ ವರದಿಗಾರಿಕೆ ಪತ್ರಿಕೋದ್ಯಮದ ಮಾನದಂಡಗಳು ಮತ್ತು ನೈತಿಕತೆಯ ಎಲ್ಲೆಗಳಿಗೆ ಅನುಗುಣವಾಗಿರಬೇಕು. ಇಲ್ಲದಿದ್ದರೆ, ಮಾಧ್ಯಮ ಸಂಸ್ಥೆಗಳು ನಿಂದನಾ ಕ್ರಮವನ್ನು ಎದುರಿಸಬೇಕಾಗುತ್ತದೆ,' ಎಂದು ಕೋರ್ಟ್‌ ಎಚ್ಚರಿಕೆ ನೀಡಿತು. ಅಲ್ಲದೆ, ಆತ್ಮಹತ್ಯೆ ಪ್ರಕರಣಗಳನ್ನು ವರದಿ ಮಾಡಬೇಕಾದಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕೋರ್ಟ್‌ ಇದೇ ವೇಳೆ ಹೊರಡಿಸಿತು.

ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳು, ಅದರಲ್ಲಿಯೂ ಪ್ರಮುಖವಾಗಿ ಸುದ್ದಿ ವಾಹಿನಿಗಳು ಸಂಯಮದ ವರದಿಗಳನ್ನು ಪ್ರಸಾರ ಮಾಡಬೇಕೆಂದು ಸೂಚಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಳೆದ ವರ್ಷ ನ.6ರಂದು ತೀರ್ಪನ್ನು ಕಾದಿರಿಸಿತ್ತು.

ನಟನ ಆತ್ಮಹತ್ಯೆ ಪ್ರಕರಣದಲ್ಲಿನ 'ಮೀಡಿಯ ಟ್ರಯಲ್‌'ಗಳನ್ನು ನಿಲ್ಲಿಸಬೇಕೆಂದು ಕೋರಿ ಹೋರಾಟಗಾರರು, ನಾಗರಿಕರು, ನಿವೃತ್ತ ಪೊಲೀಸ್‌ ಅಧಿಕಾರಿಗಳ ಗುಂಪು ಹಿರಿಯ ವಕೀಲ ಆಸ್ಪಿ ಚಿನೊಯ್‌ ಅವರ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

'ಯಾವುದೇ ಸುದ್ದಿ ಮುದ್ರಿಸುವಾಗ ಅಥವಾ ಪ್ರಸಾರ ಮಾಡುವಾಗ ಸುದ್ದಿವಾಹಿನಿಗಳೂ ಸೇರಿದಂತೆ ಮಾಧ್ಯಮಗಳು ಪಾಲಿಸಬೇಕಾದ ಶಾಸನಬದ್ಧ ಮತ್ತು ಸ್ವಯಂ-ನಿಯಂತ್ರಕ ಕಾರ್ಯವಿಧಾನಗಳು ಈಗಾಗಲೇ ಅಸ್ತಿತ್ವದಲ್ಲಿವೆ,' ಎಂದು ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸೀಟರ್‌ ಜನರಲ್‌ ಅನಿಲ್‌ ಸಿಂಗ್‌ ಹೇಳಿದ್ದರು.

'ಈಗಿನ ಸ್ವಯಂ-ನಿಯಂತ್ರಕ ಕಾರ್ಯವಿಧಾನವು ಸಮರ್ಪಕವಾಗಿದೆ. ಮಾಧ್ಯಮಗಳನ್ನು ನಿಯಂತ್ರಿಸಲು ಯಾವುದೇ ಹೊಸ ಶಾಸನಬದ್ಧ ಕಾರ್ಯವಿಧಾನ ಅಥವಾ ಮಾರ್ಗಸೂಚಿಗಳ ಅಗತ್ಯವಿಲ್ಲ,' ಎಂದು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದ ಸುದ್ದಿ ವಾಹಿನಿಗಳು ಕೋರ್ಟ್‌ಗೆ ಮನವಿ ಮಾಡಿದ್ದವು.

ಕಳೆದ ವರ್ಷ ಜೂನ್ 14 ರಂದು ಮುಂಬೈನ ಬಾಂದ್ರಾದ ತಮ್ಮ ಫ್ಲ್ಯಾಟ್‌ನಲ್ಲಿ ಬಾಲಿವುಡ್‌ ನಟ ರಜಪೂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು