ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಾಲಯ: ಸೆಪ್ಟೆಂಬರ್ 1ರಿಂದ ಪ್ರವಾಸೋದ್ಯಮ ಪುನರಾರಂಭ

Last Updated 27 ಆಗಸ್ಟ್ 2021, 8:10 IST
ಅಕ್ಷರ ಗಾತ್ರ

ಗುವಾಹಟಿ: ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರ ಸೆಪ್ಟೆಂಬರ್‌ 1 ರಿಂದ ಪ್ರವಾಸಿಗರಿಗೆ ರಾಜ್ಯದ ಎಲ್ಲ ಪ್ರವಾಸಿ ತಾಣಗಳ ಬಾಗಿಲು ತೆರೆಯಲು ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವ ಸರ್ಕಾರ, ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿರುವ ಪ್ರವಾಸಿಗರಿಗೆ ಯಾವುದೇ ನಿಬಂಧನೆಗಳಿಲ್ಲದೇ, ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಮೊದಲ ಡೋಸ್ ಲಸಿಕೆ ಪಡೆದವರು ಅಥವಾ ಲಸಿಕೆ ಹಾಕಿಸಿಕೊಳ್ಳದಿರುವವರು ರಾಜ್ಯವನ್ನು ಪ್ರವೇಶಿಸುವ 72 ಗಂಟೆಗಳಿಗೆ ಮುನ್ನ ಆರ್‌ಟಿಪಿಸಿಆರ್‌/ಟ್ರೂನ್ಯಾಟ್‌ ಅಥವಾ ಸಿಬಿಎನ್‌ಎಎಟಿ ಪರೀಕ್ಷೆ ಮಾಡಿಸಿರುವ ಕೋವಿಡ್‌– ನೆಗೆಟಿವ್ ವರದಿಯನ್ನು ಸಲ್ಲಿಸಬೇಕು ಎಂದು ನಿಬಂಧನೆ ಇದೆ ಎಂದು ಹೇಳಿದೆ.

‘ಸಂಪೂರ್ಣ ಲಸಿಕೆ ಹಾಕಿಸಿಕೊಂಡಿರುವ ಅಥವಾ ಮೊದಲ ಡೋಸ್‌ ಲಸಿಕೆ ಪಡೆದಿರುವ ಸ್ಥಳೀಯ ಪ್ರವಾಸಿಗರು ಮೇಘಾಲಯದ ಯಾವುದೇ ಸ್ಥಳಕ್ಕೆ ಭೇಟಿ ನೀಡಬಹುದು‘ ಎಂದು ತಿಳಿಸಿದೆ.

ಮೇಘಾಲಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ಪ್ರಮುಖ ಕ್ಷೇತ್ರ ಪ್ರವಾಸೋದ್ಯಮ. ರಾಜ್ಯದಲ್ಲಿರುವ ಶಿಲ್ಲಾಂಗ್, ಚಿರಾಪುಂಜಿ, ದವ್ಕಿ, ಜೊವಾಯಿ ಸೇರಿದಂತೆ ಹಲವು ಗಿರಿಧಾಮಗಳಿಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಆದರೆ, ಕೋವಿಡ್‌–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಎಲ್ಲ ತಾಣಗಳನ್ನು ಮುಚ್ಚಿದ್ದ ಕಾರಣ, ಅನೇಕ ಯುವಕರು, ಮಹಿಳೆಯರು ಕೆಲಸ ಕಳೆದುಕೊಂಡಿದ್ದರು.

ಪ್ರಸ್ತುತ ರಾಜ್ಯದಲ್ಲಿ 2600 ಕೋವಿಡ್‌–19 ಸಕ್ರಿಯ ಪ್ರಕರಣಗಳಿವೆ. ನಿತ್ಯ 200ಕ್ಕಿಂತ ಕಡಿಮೆ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.

ಶಾಲಾ– ಕಾಲೇಜುಗಳು ಪುನರಾರಂಭ:ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಒಂದರಿಂದ ಐದನೇ ತರಗತಿ ವರೆಗಿನ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ಮುಂದುವರಿಯುತ್ತದೆ. ಆದರೆ, ಆರನೇ ತರಗತಿಯಿಂದ ಎಂಟನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯಲಿವೆ. ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿವರೆಗೆ ಶಾಲೆ ಆರಂಭಿಸಬಹುದು. ಗ್ರಾಮೀಣ ಪ್ರದೇಶದಲ್ಲಿ 1ನೇ ತರಗತಿಯಿಂದ ಐದನೇ ತರಗತಿವರೆಗೆ ಮಕ್ಕಳು ಶಾಲೆಗೆ ಹೋಗಬಹುದು. ಎಂಟರಿಂದ ಹನ್ನೆರಡನೇ ತರಗತಿವರೆಗೆ ಶಾಲೆಗಳು ಆರಂಭವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT