ಬುಧವಾರ, ಮೇ 18, 2022
24 °C

ಸರ್ಕಾರ ಗೃಹ ಬಂಧನದಲ್ಲಿರಿಸಿದೆ: ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ಸರ್ಕಾರ ನನ್ನನ್ನು ಗೃಹಬಂಧನದಲ್ಲಿರಿಸಿದೆ’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.

‘ಕಳೆದ ಡಿಸೆಂಬರ್‌ನಲ್ಲಿ ಪರಿಂಪೋರಾ ಪ್ರದೇಶದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಮೂವರು ಶಂಕಿತ ಉಗ್ರರಲ್ಲಿ ಒಬ್ಬನಾದ ಅಥರ್ ಮುಷ್ತಾಕ್‌ ಕುಟುಂಬದವರನ್ನು ಭೇಟಿಯಾಗಬಾರದೆಂಬ ಕಾರಣಕ್ಕೆ ನನ್ನನ್ನು ಗೃಹ ಬಂಧನದಲ್ಲಿ ಇಡಲಾಗಿದೆ’ ಎಂದು ಅವರು ದೂರಿದ್ದಾರೆ.

‘ಅಥರ್‌ ಮುಷ್ತಾಕ್‌ನ ಮೃತದೇಹವನ್ನು ಹಸ್ತಾಂತರಿಸುವಂತೆ ಮನವಿ ಮಾಡಿದ ಅಥರ್‌ನ ತಂದೆಯ ವಿರುದ್ಧವೂ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮೆಹಬೂಬ ಮುಫ್ತಿ ಅವರು ಟ್ವೀಟ್‌ ಮಾಡಿದ್ದಾರೆ.

ಇದರೊಂದಿಗೆ ತಮ್ಮ ಮನೆಯ ಮುಂದೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿಯೊಂದಿಗಿನ ಸಂವಾದದ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಕಾಶ್ಮೀರದಲ್ಲಿ ನಡೆಯುತ್ತಿರುವ ದಬ್ಬಾಳಿಕೆಯ ಆಡಳಿತವನ್ನು ಮರೆಮಾಚಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. 16 ವರ್ಷದ ಯುವಕನನ್ನು ಹತ್ಯೆಗೈದು, ಆತುರದಲ್ಲಿ ಆತನ ದೇಹವನ್ನು ಮಣ್ಣು ಮಾಡಲಾಯಿತು. ಆತನ ಕುಟುಂಬದವರಿಗೆ ಅಂತಿಮ ವಿಧಿವಿಧಾನಗಳನ್ನು ಮಾಡಲು ಕೂಡ ಅವಕಾಶ ನೀಡಲಾಗಿಲ್ಲ’ಎಂದು ಅವರು ಟ್ವಿಟರ್‌ನಲ್ಲಿ ದೂರಿದ್ದಾರೆ.

‘ನನ್ನನ್ನು ಯಾಕೆ ಅವರ ಮನೆಗೆ ತೆರಳಲು ಬಿಡುತ್ತಿಲ್ಲ. ನಾನು ಕೈದಿಯೇ ಅಥವಾ ಅಪರಾಧಿಯೇ? ಮತ್ಯಾಕೆ ನನ್ನನ್ನು ತಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಆದೇಶಗಳು ಎಲ್ಲಿವೆ?. ನನ್ನನ್ನು ಯಾಕೆ ಬಂಧಿಸಲಾಗಿದೆ’ ಎಂದು ಅವರು ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದಾರೆ.

‘ತನ್ನ ಮನೆಯ ಗೇಟ್‌ಗೆ ಬೀಗ ಹಾಕಲಾಗಿದೆ. ಅಲ್ಲದೆ ತಾನು ಮನೆಯಿಂದ ಹೊರ ಹೋಗದಂತೆ ತಡೆಯಲು ಮನೆಯ ಮುಂದೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

 ‘ಭದ್ರತೆಯ ಸಮಸ್ಯೆ ಇದೆ. ಹೀಗಾಗಿ, ಹೊರಗೆ ಹೋಗುವುದು ಬೇಡ’ ಎಂದು ಭದ್ರತಾ ಅಧಿಕಾರಿಗಳು ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು