ಲವ್ ಜಿಹಾದ್ ವಿಷಯದಲ್ಲಿ ಬಿಜೆಪಿ ಬೆಂಬಲಿಸಿದ ಇ. ಶ್ರೀಧರನ್

ತಿರುವನಂತಪುರ: ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿರುವ ಮೆಟ್ರೊ ಮ್ಯಾನ್ ಖ್ಯಾತಿಯ ಇ. ಶ್ರೀಧರನ್, 'ಲವ್ ಜಿಹಾದ್' ವಿಷಯದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಕೇರಳದಲ್ಲಿ ಹಿಂದೂ ಹಾಗೂ ಕ್ರೈಸ್ತ ಹುಡುಗಿಯರನ್ನು ಮೋಸಗೊಳಿಸಿರುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಶ್ರೀಧರನ್, ದೇಶದಲ್ಲಿ ಬಿಜೆಪಿ ಪಕ್ಷವನ್ನು ಕೋಮುವಾದಿ ಪಕ್ಷ ಎಂದು ಚಿತ್ರಿಸಲಾಗುತ್ತಿದೆ. ಆದರೆ ತಾವು ಕೇಸರಿ ಪಕ್ಷವನ್ನು ದೇಶಪ್ರೇಮಿ ಪಕ್ಷವಾಗಿ ಕಾಣುವುದಾಗಿ ತಿಳಿಸಿದರು.
ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಜತೆಗೆ ಸಿಎಂ ಆಗಲು ಸಿದ್ಧ: ಇ. ಶ್ರೀಧರನ್
ಬಿಜೆಪಿ ಜನರೊಂದಿಗೆ ಒಡನಾಟದಿಂದಾಗಿ ನಾನು ಇದನ್ನು ಹೇಳುತ್ತಿಲ್ಲ. ಬಿಜೆಪಿ ಕೋಮುವಾದಿ ಪಕ್ಷವೇ ಅಲ್ಲ. ಇದು ರಾಷ್ಟ್ರ ಪ್ರೇಮಿಗಳನ್ನು ಒಳಗೊಂಡಿರುವ ಪಕ್ಷವಾಗಿದ್ದು, ಎಲ್ಲ ಪಕ್ಷಗಳು, ಎಲ್ಲ ಸಮುದಾಯಗಳನ್ನು ಒಪ್ಪಿಕೊಳ್ಳುತ್ತಾರೆ. ಅದುವೇ ನರೇಂದ್ರ ಮೋದಿ ಸರ್ಕಾರದ ನೀತಿಯಾಗಿದೆ. ಅವರು ಮಾತನಾಡುವ ವಿಧಾನವನ್ನೇ ನೋಡಬಹುದು. ಯಾವ ಸಂದರ್ಭದಲ್ಲೂ ಯಾವುದೇ ಧರ್ಮದ ವಿರುದ್ಧ ಆಕ್ರಮಣ ಮಾಡುವುದನ್ನು ನಾನು ನೋಡಿಲ್ಲ. ಈ ಧಾರ್ಮಿಕ ಪಕ್ಷಪಾತವು ಬಿಜೆಪಿ ಮೇಲಿನ ಅನಗತ್ಯ ನಿಂದನೆಯಾಗಿದ್ದು, ಅನ್ಯಾಯವಾಗಿದೆ ಎಂದು ಹೇಳಿದರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಗುರುವಾರದಂದು ಇ. ಶ್ರೀಧರನ್ ಖಚಿತಪಡಿಸಿದ್ದರು. ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಹೆಚ್ಚಿನ ಕುತೂಹಲ ಕೆರಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.