ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿಯ ತಿರುಚಿದ ವಿಡಿಯೊ ಹಂಚಿಕೆ: ಟಿವಿ ನಿರೂಪಕ ರೋಹಿತ್‌ ರಂಜನ್‌ ಬಂಧನ

ಅಕ್ಷರ ಗಾತ್ರ

ಗಾಜಿಯಾಬಾದ್/ರಾಯಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ತಿರುಚಿದ ವಿಡಿಯೊ ಪ್ರಸಾರ ಮಾಡಿದ ಆರೋಪದಲ್ಲಿ ಝೀ ನ್ಯೂಸ್‌ ವಾಹಿನಿಯ ನಿರೂಪಕ ರೋಹಿತ್‌ ರಂಜನ್‌ ಅವರನ್ನು ಬಂಧಿಸಲು ಛತ್ತೀಸಗಡ ಪೊಲೀಸರ ತಂಡ ಮಂಗಳವಾರ ಗಾಜಿಯಾಬಾದ್‌ಗೆ ಬಂದಿದ್ದರೂ, ನೊಯ್ಡಾ ಪೊಲೀಸರೇ ಅವರನ್ನು ವಶಕ್ಕೆ ಪಡೆದಿದ್ದಾರೆ.

ಗಾಜಿಯಾಬಾದ್‌ನಲ್ಲಿರುವ ರೋಹಿತ್‌ ರಂಜನ್‌ ಅವರ ಮನೆಗೆ ಛತ್ತೀಸಗಡದ ಪೊಲೀಸರು ಮುಂಜಾನೆ ಬಂದಿದ್ದರು. ಎರಡು ಗಂಟೆಗಳ ಬಳಿಕ ಉತ್ತರ ಪ್ರದೇಶದ ಪೊಲೀಸರು ಕೂಡ ಅಲ್ಲಿಗೆ ತಲುಪಿದ್ದಾರೆ.

‘ತಿರುಚಿದ ವಿಡಿಯೊ ಪ್ರಸಾರ ಮಾಡಿದ ಆರೋಪದಲ್ಲಿ ಅವರದೇ ವಾಹಿನಿ ನೀಡಿದ ದೂರಿನ ಮೇರೆಗೆ ರೋಹಿತ್‌ ರಂಜನ್‌ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ’ ಎಂದು ನೊಯ್ಡಾದ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

‘ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಾಗೂ ವಿವಿಧ ಗುಂಪುಗಳ ನಡುವೆ ದ್ವೇಷ ಹರಡಲು ಪ್ರಚೋದನೆ ನೀಡುವ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಶಾಸಕ ದೇವೇಂದ್ರ ಯಾದವ್‌ ಅವರು ನೀಡಿರುವ ದೂರಿನ ಆಧಾರದಲ್ಲಿ ರೋಹಿತ್‌ ಹಾಗೂ ಝೀ ನ್ಯೂಸ್‌ನ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ರಾಯಪುರದ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್‌ ಅಗರ್‌ವಾಲ್‌ ತಿಳಿಸಿದ್ದಾರೆ.

‘ಛತ್ತೀಸಗಡ ಪೊಲೀಸರು ನನ್ನನ್ನು ಬಂಧಿಸಲಿಕ್ಕಾಗಿ ಮನೆಯ ಹೊರಗೆ ಕಾಯುತ್ತಿದ್ದಾರೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಬಂದಿರುವುದು ಕಾನೂನುಬದ್ಧವೇ?’ ಎಂದು ರಂಜನ್ ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಅನ್ನು ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಜ್ಯ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು.

‘ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕೆಂಬ ಯಾವುದೇ ನಿಯಮವಿಲ್ಲ. ನಿಮಗೆ ವಾರಂಟ್ ಆದೇಶವನ್ನುಪೊಲೀಸರ ತಂಡ ತೋರಿಸಿದೆ. ನೀವು ತನಿಖೆಗೆ ಸಹಕರಿಸಬೇಕು’ ಎಂದು ರಾಯಪುರ ಪೊಲೀಸರು ರಂಜನ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

‘ರಂಜನ್ ಅವರನ್ನು ಬಂಧಿಸಲು ಛತ್ತೀಸಗಡದ ಪೊಲೀಸರಿಗೆ ಸಾಧ್ಯವಾಗಿಲ್ಲ. ಆದರೆ ತನಿಖೆಗೆ ಸಹಕರಿಸುವಂತೆ ಕೋರಿದ್ದಾರೆ’ ಎಂದೂ ಹೇಳಿದ್ದಾರೆ.

ಕೇರಳದಲ್ಲಿನ ತಮ್ಮ ಸಂಸದರ ಕಚೇರಿ ಗುರಿಯಾಗಿಸಿ ಗಲಾಟೆ ಮಾಡಿದ್ದ ಎಸ್‌ಎಫ್‌ಐ ಕಾರ್ಯಕರ್ತರನ್ನು ಕ್ಷಮಿಸಬೇಕು ಎಂದು ರಾಹುಲ್‌ಗಾಂಧಿ ಮಾತನಾಡಿದ್ದರು. ಆ ಹೇಳಿಕೆಯನ್ನು ತಿರುಚಿ ಉದಯಪುರ ಕೃತ್ಯಕ್ಕೆ ಅನ್ವಯಿಸಿ ಹೇಳಿದಂತೆ ವಿಡಿಯೊ ಅನ್ನು ರೂಪಿಸಿದ್ದು, ಬಿಜೆಪಿಯ ಹಲವು ಮುಖಂಡರು ಹಂಚಿಕೊಂಡಿದ್ದರು.

ವಾಹಿನಿ ಕಾರ್ಯಕ್ರಮದಲ್ಲಿ ರಂಜನ್‌ ಅವರು ಈ ವಿಡಿಯೊ ಪ್ರಸಾರ ಮಾಡಿ ಅದನ್ನು ಉದಯಪುರ ಕೃತ್ಯಕ್ಕೆ ಅನ್ವಯಿಸಿ ಹೇಳಿಕೆ ನೀಡಿದ್ದರು. ವಿಡಿಯೊ ಪ್ರಸಾರ ಮಾಡಿದ್ದಕ್ಕೆ ಬಳಿಕ ವಾಹಿನಿ ಕ್ಷಮೆ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT