ಶುಕ್ರವಾರ, ಮೇ 20, 2022
24 °C
ಆಜಾದ್‌ ಸೇವೆಯನ್ನು ಸ್ಮರಿಸಿ ಗದ್ಗದಿತರಾದ ಮೋದಿ

ರಾಜ್ಯಸಭೆ ಸದಸ್ಯರಿಗೆ ಭಾವುಕ ಬೀಳ್ಕೊಡುಗೆ: ಆಜಾದ್‌ ಸೇವೆ ಸ್ಮರಿಸಿ ಮೋದಿ ಗದ್ಗದಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜ್ಯಸಭೆಯಲ್ಲಿ ಮಂಗಳವಾರ ನಾಲ್ವರು ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ನಿವೃತ್ತರಾಗುತ್ತಿರುವ ಸದಸ್ಯರನ್ನು ಕುರಿತು ಮಾತನಾಡುವಾಗ ಪ್ರಧಾನಿ ಮೋದಿ ಗದ್ಗದಿತರಾದರೆ, ಅತ್ತ ಗುಲಾಂನಬಿ ಆಜಾದ್‌ ಅವರೂ ಅಂಥದ್ದೇ ಕ್ಷಣಗಳನ್ನು ನೆನಪಿಸಿ ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡರು.

ಫೆ. 15ರೊಳಗೆ ಗುಲಾಂನಬಿ ಆಜಾದ್‌, ನಜೀರ್‌ ಅಹಮದ್‌ ಲವೆ, ಶಂಷೇರ್‌ ಸಿಂಗ್‌ ಮನ್ಹಾಸ್‌ ಹಾಗೂ ಮೀರ್‌ ಮಹಮ್ಮದ್‌ ಫಯಾಜ್‌ ಅವರು ರಾಜ್ಯಸಭೆಯಿಂದ ನಿವೃತ್ತಿಯಾಗಲಿದ್ದಾರೆ. ಈ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭವನ್ನು ಮಂಗಳವಾರ ಮೇಲ್ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸದಸ್ಯರನ್ನುದ್ದೇಶಿದಿ ಮಾತನಾಡುವಾಗ 2005ರ ಭಯೋತ್ಪಾದಕ ಕೃತ್ಯದ ಸಂದರ್ಭವನ್ನು ನೆನಪಿಸಿದ ಮೋದಿ, ‘ಆ ಘಟನೆಯಲ್ಲಿ ಗುಜರಾತ್‌ನ ಕೆಲವು ತೀರ್ಥಯಾತ್ರಿಗಳೂ ಸಾವನ್ನಪ್ಪಿದ್ದರು. ಘಟನೆಯ ಬಗ್ಗೆ ನನಗೆ ಮೊದಲು ಮಾಹಿತಿ ನೀಡಿದ ವ್ಯಕ್ತಿ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಆಜಾದ್‌ ಅವರಾಗಿದ್ದರು. ಮಾಹಿತಿ ನೀಡುವಾಗ ಆಜಾದ್‌ ಅವರಿಗೂ ಅಳುವನ್ನು ತಡೆಯಲಾಗಿರಲಿಲ್ಲ. ಅಲ್ಲಿಂದ ಮೃತದೇಹಗಳನ್ನು ಗುಜರಾತ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಲ್ಲದೆ, ವಿಮಾನವು ಗುಜರಾತ್‌ನಲ್ಲಿ ಬಂದಿಳಿಯುವವರೆಗೂ ನನ್ನ ಜತೆ ಸಂಪರ್ಕದಲ್ಲಿದ್ದರು’ ಎಂದು ಆ ಕ್ಷಣಗಳನ್ನು ಗದ್ಗದಿತರಾಗಿ ನೆನಪಿಸಿಕೊಂಡರು. ಘಟನೆ ನಡೆದಾಗ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು.

‘ಆಜಾದ್‌ ಅವರಿಂದ ತೆರವಾಗುವ ಸ್ಥಾನವನ್ನು ತುಂಬುವವರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಆಜಾದ್‌, ತನ್ನ ಪಕ್ಷವಷ್ಟೇ ಅಲ್ಲ ದೇಶ ಮತ್ತು ಸಂಸತ್ತಿನ ಬಗೆಗೂ ಕಾಳಜಿ ವಹಿಸಿದ್ದರು. ಇದು ಸಣ್ಣ ವಿಚಾರವೇನೂ ಅಲ್ಲ’ ಎಂದರು.

‘ಅಧಿಕಾರ ಬರುತ್ತೆ–ಹೋಗುತ್ತೆ. ಅದನ್ನು ಅರಗಿಸಿಕೊಳ್ಳುವುದು ಹೇಗೆ ಎಂಬುದು ಕೆಲವರಿಗಷ್ಟೇ ಗೊತ್ತಿರುತ್ತದೆ. ಮೇಲ್ಮನೆಯಿಂದ ನಿವೃತ್ತನಾಗಿದ್ದೇನೆ ಎಂದು ಅವರು ಭಾವಿಸಬಾರದು. ನಿಮಗಾಗಿ ನನ್ನ ಮನೆ ಯಾವತ್ತೂ ತೆರೆದಿರುತ್ತದೆ. ನಿಮ್ಮ ಸಲಹೆ ಸೂಚನೆಗಳನ್ನು ನಾನು ನಿರೀಕ್ಷಿಸುತ್ತೇನೆ ಮತ್ತು ಗೌರವಿಸುತ್ತೇನೆ. ನೀವು ದುರ್ಬಲರಾಗುವುದಕ್ಕೆ ನಾನು ಅವಕಾಶ ಕೊಡುವುದಿಲ್ಲ’ ಎಂದು ಸದನದಲ್ಲೇ ಆಜಾದ್‌ ಅವರಿಗೆ ಮೋದಿ ಸೆಲ್ಯುಟ್‌ ಹೊಡೆದರು.

ಆಜಾದ್‌ ಅವರೂ ಭಾವುಕರಾಗಿಯೇ ಮಾತನಾಡಿದರು. ‘ನಾನು ಕೇವಲ ನಾಲ್ಕೈದು ಬಾರಿ ಜೋರಾಗಿ ಅತ್ತಿರಬಹುದು. ಇಂದಿರಾಗಾಂಧಿ ಮತ್ತು ರಾಜೀವ್‌ ಗಾಂಧಿ ಅವರ ಹತ್ಯೆ, ಸಂಜಯ್‌ ಗಾಂಧಿ ಸಾವು, 1999ರಲ್ಲಿ ಒಡಿಶಾದಲ್ಲಿ ಉಂಟಾದ ಚಂಡಮಾರುತದ ಸಂದರ್ಭಗಳಲ್ಲಿ ಮತ್ತು 2005ರ ಭಯೋತ್ಪಾದಕ ಕೃತ್ಯದ ಸಂದರ್ಭದಲ್ಲಿ ಗಟ್ಟಿಯಾಗಿ ಅತ್ತಿದ್ದೆ. ಆ ಘಟನೆಯಲ್ಲಿ ಮಡಿದವರನ್ನು ನೋಡಲು ನಾನು ವಿಮಾನ ನಿಲ್ದಾಣಕ್ಕೆ ಹೋದಾಗ, ಅಲ್ಲಿ ಮಕ್ಕಳು ದೊಡ್ಡ ಸಂಖ್ಯೆಯಲ್ಲಿದ್ದರು. ಅವರ ಮುಖವನ್ನು ನೋಡಲಾಗದೆ ನಾನೂ ಅತ್ತಿದ್ದೆ. ಪಾಲಕರನ್ನು ಕಳೆದುಕೊಂಡ ಮಕ್ಕಳು ಅಳುತ್ತಿದ್ದರೆ, ಅವರಿಗೆ ಪ್ರತಿಕ್ರಿಯೆ ನೀಡುವುದಾದರೂ ಹೇಗೆ?’ ಎಂದು ಅಂದಿನ ಕ್ಷಣವನ್ನು ಆಜಾದ್‌ ಸ್ಮರಿಸಿಕೊಂಡರು.

ಸಭಾಪತಿ ವೆಂಕಯ್ಯ ನಾಯ್ದು ಅವರಿಂದ ಆರಂಭಿಸಿ ರಾಜ್ಯಸಭೆಯ ಪ್ರತಿ ಸದಸ್ಯರೂ ಆಜಾದ್‌ ಅವರ ಗುಣಗಾನ ಮಾಡಿದರು.

ಜಮ್ಮು ಕಾಶ್ಮೀರಕ್ಕೆ ಪ್ರಾತಿನಿಧ್ಯ ಇಲ್ಲ

ಈ ನಾಲ್ವರು ಸದಸ್ಯರ ನಿವೃತ್ತರಾದರೆ, ರಾಜ್ಯಸಭೆಯಲ್ಲಿ ಜಮ್ಮು ಕಾಶ್ಮೀರದ ಪ್ರತಿನಿಧಿಗಳೇ ಇಲ್ಲದಂತಾಗುತ್ತದೆ. ಅಲ್ಲಿ ವಿಧಾನಸಭೆ ಇನ್ನೂ ರಚನೆಯಾಗದಿರುವುದರಿಂದ, ಹೊಸ ಸದಸ್ಯರ ಆಯ್ಕೆ ಸದ್ಯಕ್ಕೆ ಆಗುವ ಸಾಧ್ಯತೆ ಇಲ್ಲದಾಗಿದೆ.

ಆಜಾದ್‌ ಅವರು ನಿವೃತ್ತಿಯಾಗುವುದರಿಂದ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವೂ ತೆರವಾಗಲಿದ್ದು, ಅದಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಪಿ. ಚಿದಂಬರಂ, ದಿಗ್ವಿಜಯ್‌ ಸಿಂಗ್‌ ಹಾಗೂ ಆನಂದ್‌ ಶರ್ಮಾ ಅವರ ಹೆಸರುಗಳು ಕೇಳಿಬರುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು