ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಮತದಾನದ ದಿನವೂ ಮೋದಿ ರೋಡ್‌ಷೋ

ಕ್ರಮ ಕೈಗೊಳ್ಳಲು ಆಯೋಗಕ್ಕೆ ಭಯವೇಕೆ: ಕಾಂಗ್ರೆಸ್
Last Updated 5 ಡಿಸೆಂಬರ್ 2022, 21:34 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್ ವಿಧಾನಸಭೆಗೆ ಸೋಮವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಹಕ್ಕು ಚಲಾಯಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ಷೋ ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಒತ್ತಡದ ಕಾರಣಕ್ಕೆ ಚುನಾವಣಾ ಆಯೋಗ ಹೆದರಿದ್ದು, ಪ್ರಧಾನಿ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದೂ ಟೀಕಿಸಿದೆ.

ಪ್ರಜಾಪ್ರಭುತ್ವ ಹಾಗೂ ಚುನಾವಣೆಗಳ ಕಾವಲುನಾಯಿ ಆಗಿರುವ ಚುನಾವಣಾ ಆಯೋಗವು ಕೆಲವು ವಾರಗಳಿಂದ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಆರೋಪಿಸಿದ್ದಾರೆ. ‘ಗುಜರಾತ್, ದೆಹಲಿಯಲ್ಲಿ ಹಲವು ಬಾರಿ ನಾವು ಆಯೋಗಕ್ಕೆ ದೂರು ನೀಡಿದ್ದೇವೆ. ಆಯೋಗವು ಒತ್ತಡದಲ್ಲಿ ಕೆಲಸ ಮಾಡಿದಂತೆ ತೋರುತ್ತಿದೆ’ ಎಂದು ಖೇರಾ ಹೇಳಿದ್ದಾರೆ. ಈ ವಿಚಾರದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಪಕ್ಷ ಸಮಾಲೋಚಿಸುತ್ತಿದೆ ಎಂದಿದ್ದಾರೆ.

‘ಪ್ರಧಾನಿಯಾದರೂ, ಸಾಮಾನ್ಯ ವ್ಯಕ್ತಿಯಾದರೂ, ಮತದ ಮೌಲ್ಯ ಒಂದೇ. ಹಕ್ಕು ಚಲಾಯಿಸಲು ಮತಗಟ್ಟೆಗೆ ಹೋಗುವಾಗಪ್ರಧಾನಿ ಎರಡೂವರೆ ಗಂಟೆ ರೋಡ್‌ಷೋ ನಡೆಸಲು ಹೇಗೆ ಸಾಧ್ಯ. ಪ್ರಧಾನಿ ಅವರ ಈ ನಡೆಯಲ್ಲಿ ಯಾವುದೇ ಉಲ್ಲಂಘನೆ ಕಾಣುತ್ತಿಲ್ಲ ಎಂದರೆ ಆಯೋಗದ ಮೇಲೆ ಇರುವ ಒತ್ತಡ ಎಂಥದ್ದು’ ಎಂದು ಅವರು ಪ್ರಶ್ನಿಸಿದ್ದಾರೆ.

‘ಮೋದಿ ಅವರು ಎರಡೂವರೆ ಗಂಟೆ ನಡೆಸಿದ ಖರ್ಚಿಲ್ಲದ ರೋಡ್‌ಷೋ ಅನ್ನು ಎಲ್ಲ ಟಿವಿ ಸುದ್ದಿವಾಹಿನಿಗಳು ನೇರಪ್ರಸಾರ ಮಾಡಿವೆ. ಇದು ಜಾಹೀರಾತು ಅಲ್ಲವೇ? ಬಿಜೆಪಿ ಖರ್ಚಿಗೆ ಇದನ್ನು ಸೇರಿಸುವುದಿಲ್ಲವೇ? ಇದನ್ನು ಉಚಿತವಾಗಿ ಮಾಡಿದ್ದು ಏಕೆ’ ಎಂದೂ ಅವರು ಕೇಳಿದ್ದಾರೆ.

ಚುನಾವಣೆ ವೇಳೆ ಬಿಜೆಪಿ ಹಲವು ಅಕ್ರಮಗಳನ್ನು ಎಸಗಿದ್ದರೂ ಚುನಾವಣಾ ಆಯೋಗ ಮೌನವಾಗಿದೆ ಎಂದು ಖೇರಾ ಆರೋಪಿಸಿದ್ದಾರೆ. ‘ಪಕ್ಷದ ಸದಸ್ಯರು ಬಿಜೆಪಿ ಚಿಹ್ನೆ ಇರುವ ವಾಹನಗಳಲ್ಲಿ ಜನರಿಗೆ ಮದ್ಯ ಹಂಚಿದ ವಿಡಿಯೊಗಳನ್ನು ಆಯೋಗಕ್ಕೆ ಸಲ್ಲಿಸಿದ್ದರೂ, ಗಮನ ನೀಡುತ್ತಿಲ್ಲ. ಕಾಂಗ್ರೆಸ್ ನೀಡಿದ್ದ ಯಾವ ದೂರಿಗೂ ಆಯೋಗ ಸ್ಪಂದಿಸಿಲ್ಲ’ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸದಸ್ಯರಿಂದ ಅಪಹರಣಕ್ಕೆ ಒಳಗಾಗಿದ್ದ ದಂತಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಬುಡಕಟ್ಟು ಅಭ್ಯರ್ಥಿ ಕಾಂತಿಭಾಯ್ ಖರಾಡಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು,ಜೀವ ಬೆದರಿಕೆ ಇರುವ ಕಾರಣಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೋರಿದ್ದಾರೆ ಎಂದು ಖೇರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT