ಬುಧವಾರ, ಅಕ್ಟೋಬರ್ 20, 2021
24 °C

ಎಫ್ಐಆರ್ ಇಲ್ಲದೆ 28 ಗಂಟೆಯಿಂದ ಬಂಧನದಲ್ಲಿಟ್ಟಿದ್ದಾರೆ: ಮೋದಿಗೆ ಪ್ರಿಯಾಂಕಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಖನೌ: ಲಖಿಂಪುರ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬದ ಭೇಟಿಗೆ ತೆರಳುತ್ತಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನಿನ್ನೆಯಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ.

ನಿನ್ನೆ ಲಖಿಂಪುರದ ಗಡಿಯಲ್ಲೇ ಅವರನ್ನು ತಡೆದ ಪೊಲೀಸರು ಸೀತಾಪುರ ಬಳಿಯ ಸರ್ಕಾರಿ ವಸತಿ ಗೃಹದಲ್ಲಿ ಇಟ್ಟಿದ್ದಾರೆ. ಬಂಧನ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

ಮೋದಿ ಸರ್, ನಿಮ್ಮ ಸರ್ಕಾರ ಯಾವುದೇ ಎಫ್ಐಆರ್ ಇಲ್ಲದೆ ನನ್ನನ್ನು 28 ಗಂಟೆಗಳಿಂದ ಬಂಧನದಲ್ಲಿರಿಸಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಜೊತೆಗೆ ಅವರು ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.

ಈ ಮಧ್ಯೆ, ಪ್ರಿಯಾಂಕಾ ಗಾಂಧಿಯವರನ್ನು ಗೃಹ ಬಂಧನದಲ್ಲಿಟ್ಟಿರುವ ಸೀತಾಪುರ ಗೆಸ್ಟ್ ಹೌಸ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

'ಯಾವುದೇ ಆದೇಶವಿಲ್ಲದೆ ಪ್ರತಿಪಕ್ಷದವರನ್ನು ಏಕೆ ಬಂಧಿಸಲಾಗಿದೆ. ಅಂತಹ ಭಯಾನಕ ಅಪರಾಧ ಮಾಡಿದ ವ್ಯಕ್ತಿಯನ್ನು ಏಕೆ ಬಂಧಿಸಲಾಗಿಲ್ಲ. ನಮ್ಮಂತಹ ವ್ಯಕ್ತಿಗಳನ್ನು ಬಿಟ್ಟು ಅಪರಾಧಿಗಳನ್ನು ಬಂಧಿಸಿ ಮೋದಿಜೀ’ ಎಂದು ಎನ್‌ಡಿಟಿವಿ ಜೊತೆ ಮಾತನಾಡುತ್ತಾ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಲಖನೌಗೆ 75ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಬಗ್ಗೆ ಮಾತನಾಡಿರುವ ಅವರು, ‘ಮೋದಿ-ಜೀ ಆಜಾದಿ (ಸ್ವಾತಂತ್ರ್ಯ) ಆಚರಿಸಲು ಬರುತ್ತಿದ್ದಾರೆ. ನಮಗೆ ಯಾರು ಸ್ವಾತಂತ್ರ್ಯ ನೀಡಿದರು? ರೈತರು ನಮಗೆ ಸ್ವಾತಂತ್ರ್ಯ ನೀಡಿದವರು. ರೈತರ ಸಾವಿಗೆ ಕಾರಣವಾದ ನಿಮ್ಮ ಮಂತ್ರಿಯನ್ನು ವಜಾ ಮಾಡಿ ಆತನ ಮಗನನ್ನು ಬಂಧಿಸದಿದ್ದಾಗ ಲಖನೌದಲ್ಲಿ ಸ್ವಾತಂತ್ರ್ಯೋವ ಆಚರಿಸಲು ನಿಮಗೆ ಯಾವ ನೈತಿಕ ಅಧಿಕಾರವಿದೆ? ಈ ಸರ್ಕಾರಕ್ಕೆ ನೈತಿಕ ಅಧಿಕಾರವಿಲ್ಲ’ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

‘ಮೋದಿ ಜೀ, ನೀವು ಲಖಿಂಪುರ್ ಖೇರಿಗೆ ಹೋಗುತ್ತೀರಾ?’ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿದ್ದರು.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ವಾಹನಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿದು, ನಾಲ್ವರು ರೈತರು ಸಾವಿಗೀಡಾಗಿದ್ದರು. ಆಕ್ರೋಶಗೊಂಡ ರೈತರು ಎರಡೂ ವಾಹನಗಳನ್ನು ತಡೆದು ನಿಲ್ಲಿಸಿ, ಅವುಗಳಿಗೆ ಬೆಂಕಿ ಹಚ್ಚಿದಾಗ ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಮತ್ತು ಇತರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಈ ಮಧ್ಯೆ, ಮೃತ ರೈತರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ತಲಾ ₹ 45 ಲಕ್ಷ ಪರಿಹಾರ ಘೋಷಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು