ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತ್ತ ಭೂಕುಸಿತ, ಅತ್ತ ಪ್ರವಾಹ; ನಲುಗಿದ ಕೇರಳ

ಸತತ ಮೂರನೇ ವರ್ಷವೂ ಕೇರಳದಲ್ಲಿ ಭೂಕುಸಿತ
Last Updated 8 ಆಗಸ್ಟ್ 2020, 2:36 IST
ಅಕ್ಷರ ಗಾತ್ರ

ಇಡುಕ್ಕಿ: ಮುಂಗಾರು ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವ ಪರಿಣಾಮ ಕಳೆದ ಎರಡು ವರ್ಷಗಳಿಂದ ಸತತವಾಗಿ ಕೇರಳದಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಈ ವರ್ಷವೂ ಅದು ಮರುಕಳಿಸಿದೆ.ಇಡುಕ್ಕಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಲ್ಲಿ 20 ಮನೆಗಳು ನೆಲಸಮವಾಗಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.80ಕ್ಕೂ ಹೆಚ್ಚು ಕಾರ್ಮಿಕರು ವಾಸಿಸುತ್ತಿದ್ದ ಸಾಲು ಮನೆಗಳ ಮೇಲೆ ಮಣ್ಣು ಕುಸಿದಿದೆ. ಘಟನಾ ಸ್ಥಳದಲ್ಲಿ ದೊಡ್ಡ ದೊಡ್ಡ ಅಳತೆಯ ಕಲ್ಲುಗಳು ಬಿದ್ದಿದ್ದು, ಪಾತ್ರೆ ಸಾಮಾನುಗಳು ಮಣ್ಣಿನಲ್ಲಿ ಹೂತುಹೋಗಿರುವ ಚಿತ್ರಣ ಅಲ್ಲಿ ಕಂಡುಬಂದಿತು. ನಾಪತ್ತೆಯಾದವರಿಗೆ ಶೋಧ ನಡೆಯುತ್ತಿದೆ.

ಮಳೆಯ ಮಧ್ಯೆಯೂ ಸಮೀಪದ ಎಸ್ಟೇಟ್‌ಗಳ ಕಾರ್ಮಿಕರು, ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿರಕ್ಷಣಾ ಕಾರ್ಯ ನಡೆಸಿದರು. ಎನ್‌ಡಿಆರ್‌ಎಫ್‌ ಅನ್ನು ಬಳಿಕ ನಿಯೋಜಿಸಲಾಯಿತು.15 ಆಂಬುಲೆನ್ಸ್‌ ಹಾಗೂ ವಿಶೇಷ ವೈದ್ಯಕೀಯ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದುಮುನ್ನಾರ್ ಶಾಸಕ ಎಸ್. ರಾಜೇಂದ್ರನ್ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಮಳೆಯಿಂದ ಕೊಚ್ಚಿ ಹೋಗಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳುವುದು ಕಷ್ಟವಾಗಿದೆ ಎಂದು ಶಾಸಕರು ಹೇಳಿದ್ದಾರೆ. ‘ಸುಮಾರು 300 ಜನ ಅಲ್ಲಿ ವಾಸುಸುತ್ತಿದ್ದಾರೆ. ವಿದ್ಯುತ್ ಪೂರೈಕೆ ಇಲ್ಲದ ಕಾರಣ ಅಲ್ಲಿರುವ ಮೊಬೈಲ್ ಟವರ್ ನಿಷ್ಕ್ರಿಯವಾಗಿದ್ದು, ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪ್ರವಾಹದ ಭೀತಿ:ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಲ್ಲಿಂದ ಹುಟ್ಟಿ ಹರಿಯುವ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಎರ್ನಾಕುಲಂ, ತ್ರಿಶೂರ್, ಕೊಟ್ಟಾಯಂ ಮತ್ತು ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ಜಲಾಶಯಗಳಿಗೆ ಅಧಿಕ ಪ್ರಮಾಣದ ನೀರು ಬರುತ್ತಿದ್ದು, ನದಿಪಾತ್ರದ ಜನರು ಎಚ್ಚರಿಕೆ ಇರುವಂತೆ ಸೂಚಿಸಲಾಗಿದೆ. ಎರ್ನಾಕುಲಂ ಜಿಲ್ಲೆಯ ಮೂಲಕ ಹರಿಯುವ ಪೆರಿಯಾರ್ ಹಾಗೂ ಮುವಾಟ್ಟುಪುಳ ನದಿಗಳಲ್ಲಿ ಇದ್ದಕ್ಕಿಂತೆ ಒಳಹರಿವು ಹೆಚ್ಚಾಗಿದೆ.2018ರಲ್ಲಿ ಉಂಟಾದ ಭಾರಿ ಪ್ರವಾಹದ ಅನಾಹುತದಿಂದ ಕೇರಳ ಇನ್ನೂ ಚೇತರಿಸಿಕೊಂಡಿಲ್ಲ. ಆ ವೇಳೆ ಸುಮಾರು 400 ಮಂದಿ ಮೃತಪಟ್ಟು, ಲಕ್ಷಾಂತರ ಜನ ಆಶ್ರಯ ಕಳೆದುಕೊಂಡಿದ್ದರು.

ಈ ಬಾರಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಎರ್ನಾಕುಲಂ ಜಿಲ್ಲಾಡಳಿತವು ಅಳುವಾ ಮತ್ತು ಮುವಾಟ್ಟುಪುಳಗಳಲ್ಲಿ ನಿರಾಶ್ರಿತ ಶಿಬಿರಗಳನ್ನು ತೆರೆದಿದೆ. ಈಗಾಗಲೇ ನೀರು ನುಗ್ಗಿರುವ ಪ್ರದೇಶಗಳ ಜನರನ್ನು ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ.ಭೂಕುಸಿತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎರ್ನಾಕುಲಂ ಜಿಲ್ಲಾಧಿಕಾರಿ ಎಸ್.ಸುಹಾಸ್ ಅವರು, ಜಿಲ್ಲೆಯಲ್ಲಿ ಎಲ್ಲ ರೀತಿಯ ಗಣಿಗಾರಿಕೆ ಚಟುವಟಿಕೆಗಳ ಮೇಲೆ ನಿಷೇಧ ಹೇರಿದ್ದಾರೆ.

ಕೊಯಿಕ್ಕೋಡ್, ವಯನಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಲೇ ಇದೆ. ಚಲಿಯಾರ್ ನದಿ ಪ್ರವಾಹದ ಕಾರಣ ಮಲಪ್ಪುರಂನ ನಿಲಂಬೂರ್‌ ಜಲಾವೃತವಾಗಿದೆ. ಎರ್ನಾಕುಲಂ ಜಿಲ್ಲೆಯ ನೆರಿಯಮಂಗಳಂ ಎಂಬ ಗ್ರಾಮದ ಸಮೀಪ ಪೆರಿಯಾರ್ ನದಿಯ ಪ್ರವಾಹದ ನೀರಿನಲ್ಲಿ ಕಾಡಾನೆಯ ಕಳೇಬರ ತೇಲಿಬಂದಿದೆ. ತ್ರಿಶೂರ್‌ನಲ್ಲಿ ಮರಗಳು ನೆಲಕ್ಕುರುಳಿವೆ.

ಗಿರಿಶ್ರೇಣಿಯ ಇಡುಕ್ಕಿ ಜಿಲ್ಲೆಯಲ್ಲಿ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಮುನ್ನಾರ್–ಮರಯೂರ್ ರಸ್ತೆಯ ಈಗಾಗಲೇ ಬಂದ್ ಆಗಿದೆ. ಇಡುಕ್ಕಿ–ಕಟ್ಟಪ್ಪನ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಆಗಸ್ಟ್ 9ರವರೆಗೆ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುರುವಾರ ಮಳೆ ಸಂಬಂಧಿ ಅವಘಡಗಳಿಂದ ಐವರು ಮೃತಪಟ್ಟಿದ್ದರು. 6 ಜನರು ಗಾಯಗೊಂಡಿದ್ದು, 12 ಮನೆಗಳು ಹಾನಿಗೊಂಡಿವೆ. 735 ಮನೆಗಳು ಭಾಗಶಃ ಹಾನಿಗೀಡಾಗಿವೆ.

ಉತ್ತರ ಪ್ರದೇಶ: ಮಲಗಿದ್ದ ದಂಪತಿ ಸಮಾಧಿ

ಉತ್ತರ ಪ್ರದೇಶದ ರೌನಾಪಾರ್ ಎಂಬಲ್ಲಿ ಭಾರಿ ಪ್ರಮಾಣದ ಮಳೆಯಿಂದ ಮಣ್ಣಿನ ಮನೆಯ ಛಾವಣಿ ಕುಸಿದುಬಿದ್ದಿದ್ದು, ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗರುವಾರ ತಡರಾತ್ರಿ ಈ ಅವಘಡದಲ್ಲಿ ಜಿನಕರಾಮ್ ಮತ್ತು ಕಲಾವತಿ ದೇವಿ ಅವರು ಕೊನೆಯುಸಿರೆಳೆದಿದ್ದಾರೆ.

ಮನೆ ನೀರಿನಿಂದ ಆವೃತವಾಗಿತ್ತು.ಭಾರಿ ಶಬ್ದ ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದರು. ಅಷ್ಟೊತ್ತಿಗಾಗಲೇ ದಂಪತಿ ಮೃತಪಟ್ಟಿದ್ದರು. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಡಳಿತದ ಅಧಿಕಾರಿಗಳು ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

ಅಪಾಯದ ಮಟ್ಟದಲ್ಲಿ ಪಂಚಗಂಗಾ ನದಿ

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಪಂಚಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದರೆ ಅಣೆಕಟ್ಟೆಯಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಪಂಚಗಂಗಾ ನದಿಯ ರಾಜಾರಾಮ್‌ ಬ್ಯಾರೇಜ್‌ನಲ್ಲಿ ಶುಕ್ರವಾರ ಬೆಳಿಗ್ಗೆ 44.7 ಅಡಿ ನೀರು ಸಂಗ್ರಹವಾಗಿತ್ತು. 43.7 ಅಡಿ ಇದ್ದರೆ, ಅದು ಅಪಾಯದ ಮಟ್ಟ.ಭಾರಿ ಮಳೆಯಿಂದ ರಾಧಾನಗರಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಈ ನೀರು ಪಂಚಗಂಗಾ ನದಿಗೆ ಸೇರುವುದರಿಂದ ನದಿಯ ನೀರಿನ ಮಟ್ಟ ಹೆಚ್ಚಲು ಕಾರಣವಾಗಿದೆ.ಪಂಚಗಂಗಾ ನದಿಪಾತ್ರದ 23 ಗ್ರಾಮಗಳ 1,750 ಜನರ ಸ್ಥಳಾಂತರ ಮಾಡಲಾಗಿದೆ.

ಸಾಂಗ್ಲಿಯ ಪ್ರವಾಹ ಪೀಡಿತ 20 ಗ್ರಾಮಗಳಿಗೆ ರಕ್ಷಣಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಜೀವರಕ್ಷಣಾ ಜಾಕೆಟ್, ಹಗ್ಗ, ಬ್ಯಾಟರಿ, ಚೀಲ ಮೊದಲಾದ ವಸ್ತುಗಳನ್ನು ಕಿಟ್ ಒಳಗೊಂಡಿದೆ. ಕಳೆದ ವರ್ಷ ಕೊಲ್ಲಾಪುರ ಸಾಂಗ್ಲಿ ಜಿಲ್ಲೆಗಳಲ್ಲಿ ಮಳೆ ಭಾರಿ ಅನಾಹುತ ಸೃಷಿಸಿತ್ತು. ಸುಮಾರು 60 ಜನರು ಪ್ರಾಣ ಕಳೆದುಕೊಂಡಿದ್ದರು.

ಸಿಕ್ಕಿಂನಲ್ಲಿ ಭೂಕುಸಿತ, ಭಾರಿ ಮಳೆ

ಭಾರಿ ಮಳೆಯಿಂದಾಗಿ ಸಿಕ್ಕಿಂನ ರಂಗೀತ್ ನದಿಪಾತ್ರದ ಜನರು ಆತಂಕ ಎದುರಿಸಿದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದಲೆಗ್‌ಶೆಪ್, ರೇಶಿ, ರೋಹ್ಟಕ್, ಬೈಗುನೆ, ಪಿಪ್ಪಲೆ, ಸಿಕ್ಕಿಪ್ ಮತ್ತು ಜೋರೆಥಾಂಗ್‌ನ ಜನರು ತೊಂದರೆ ಅನುಭವಿಸಿದರು. ಹಲವು ಕುಟುಂಬಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸುರಕ್ಷಿತ ಸ್ಥಗಳಿಗೆ ರವಾನೆ ಮಾಡಿದೆ. ನದಿಯಲ್ಲಿ ನೀರು ಹೆಚ್ಚುತ್ತಿರುವ ಬಗ್ಗೆ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಪಶ್ಚಿಮ ಸಿಕ್ಕಿಂನ ಲೆಗ್‌ಶೆಪ್ ಎಂಬಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಐತಿಹಾಸಿಕ ಕಿರಟೇಶ್ವರ ಶಿವ ದೇವಸ್ಥಾನದ ಒಂದು ಭಾಗ ಹಾನಿಗೊಂಡಿದೆ. ಭೂಕುಸಿತದಿಂದ ಜೊರೆಥಾಂಗ್‌ನ ಮೂರು ಅಂತಸ್ತುಗಳ ಐಪಿಸಿಎ ಲ್ಯಾಬ್ ಮಣ್ಣುಪಾಲಾಗಿದೆ.

20 ಗ್ರಾಮಗಳಿಗೆ ಪ್ರವಾಹ ಭೀತಿ

ಇತ್ತೀಚೆಗೆ ಸುರಿದ ಮಳೆಯಿಂದ ತಮಿಳುನಾಡಿನಲ್ಲಿ ಬಹುತೇಕ ಎಲ್ಲ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಪಿಲ್ಲೂರ್ ಜಲಾಶಯದ ನೀರಿ ಮಟ್ಟ 97 ಅಡಿಗೆ (ಗರಿಷ್ಠ 100 ಅಡಿ) ತಲುಪಿದೆ. ಹೀಗಾಗಿ ಭವಾನಿ ನದಿಗೆ 30 ಸಾವಿರ ಕ್ಯೂಸೆನ್ ನೀರು ಹರಿಸಲಾಗುತ್ತಿದೆ. ನದಿಪಾತ್ರದ ಸತ್ಯಮಂಗಲ, ಗೋಬಿಚೆಟ್ಟಿಪಾಳ್ಯ ಒಳಗೊಂಡ 20 ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ನೀರಿನ ಒಳಹರಿವು ಹೆಚ್ಚಾದಲ್ಲಿ, ನದಿಗೆ ಇನ್ನಷ್ಟು ನೀರು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನೀರು ಕಾವೇರಿ ಜೊತೆ ಸೇರುತ್ತದೆ. ಪಕ್ಕದ ನೀಲಗಿರಿ ಜಿಲ್ಲೆಯಲ್ಲೂ ವ್ಯಾಪಕ ಮಳೆ ಸುರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT