ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಜಾನೆಯ ಪ್ರಮುಖ ಸುದ್ದಿಗಳು| ಮಾರ್ಚ್‌ 23, ಮಂಗಳವಾರ

Last Updated 23 ಮಾರ್ಚ್ 2021, 3:23 IST
ಅಕ್ಷರ ಗಾತ್ರ

1. ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

‘ಮೀಸಲಾತಿ ಪ್ರಮಾಣವು ಶೇ 50 ಮೀರಬಾರದು ಎಂದು ಒಂಬತ್ತು ಸದಸ್ಯರ ಪೀಠ 1992ರಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆ’ ಎಂದು ಕರ್ನಾಟಕ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸಾಮಾಜಿಕ ಸ್ತರಗಳಲ್ಲಿ ಬದಲಾವಣೆಗಳಾಗಿವೆ. ಕೋರ್ಟ್‌ ನಿಗದಿಪಡಿಸಿದ ಮಿತಿಯಲ್ಲಿ, ವಸ್ತುಸ್ಥಿತಿಯನ್ನು ಪರಿಗಣಿಸಿ, ನ್ಯಾಯ ಒದಗಿಸುವ ಗುರಿ ಸಾಧಿಸಲಾಗದು ಎಂದು ಸರ್ಕಾರ ಅರ್ಜಿಯಲ್ಲಿ ಪ್ರತಿಪಾದಿಸಿದೆ.

***

ಬೆಳಗ್ಗಿನ ಪ್ರಮುಖ ಸುದ್ದಿಗಳ ಪಾಡ್‌ಕಾಸ್ಟ್‌ ಆಲಿಸಿ

***

2. ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯ

‘ಸಿ.ಡಿ ‍ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಸೋಮವಾರ ಧರಣಿ ನಡೆಸಿದರು.

3. ಭಾರತ-ಇಂಗ್ಲೆಂಡ್‌ ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭ

ಟೆಸ್ಟ್ ಮತ್ತು ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿ ಸರಣಿ ಗೆದ್ದಿರುವ ಭಾರತ ತಂಡ ಇಂಗ್ಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಗೆ ಸಜ್ಜಾಗಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಮಂಗಳವಾರ ನಡೆಯಲಿದೆ.

4. ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ದೂರು ನೀಡಲು ಬಿಜೆಪಿಯ 30 ಶಾಸಕರ ನಿರ್ಧಾರ

ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ದೂರು ನೀಡಲು 30 ಕ್ಕೂ ಹೆಚ್ಚು ಶಾಸಕರು ನಿರ್ಧರಿಸಿದ್ದಾರೆ. ಸೋಮವಾರ ರಾತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಈ ಶಾಸಕರು ಯತ್ನಾಳ್‌ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

5. ಕೆರೆ ಪುನರುಜ್ಜೀವನಗೊಳಿಸಿದ ಔರಾದ್‌ನ ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ

ಕೆರೆ ಪುನರುಜ್ಜೀವನಗೊಳಿಸಿ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿದ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನ ಧೂಪತ್‌ಮಹಾಗಾಂವ ಗ್ರಾಮ ಪಂಚಾಯಿತಿಯ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರು ದೇಶದ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರೊಂದಿಗೆ ಸೋಮವಾರ ವಿಡಿಯೊ ಸಂವಾದ ನಡೆಸಿದರು.

6. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕ್‌ ನಡುವೆ ಇಂದು ಸಿಂಧೂ ಜಲ ಆಯೋಗ ಸಭೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ಜಲ ಆಯೋಗದ ಸಭೆ ಮಂಗಳವಾರ ನಡೆಯುತ್ತಿದೆ. ಈ ಮೂರು ವರ್ಷಗಳಲ್ಲಿ ಆಯೋಗದ ಸಭೆ ನಡೆಯುತ್ತಿರುವುದು ಇದೇ ಮೊದಲು. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ವೃದ್ಧಿಗೆ ಈ ಸಭೆಯು ನೆರವಾಗಲಿದೆ ಎಂದು ಎರಡೂ ದೇಶಗಳೂ ತಿಳಿಸಿವೆ.

7. ಅಮೆರಿಕದಲ್ಲಿ ಮೂರು ಕೋಟಿ ಸೋಂಕಿತರು

ಅಮೆರಿಕದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚು ಕಡಿಮೆ ಮೂರು ಕೋಟಿ ಸಮೀಪಿಸಿದೆ. ಇದರೊಂದಿಗೆ ವಿಶ್ವದ ಒಟ್ಟು ಸೋಂಕಿತರ ಸಂಖ್ಯೆ 12.3 ಕೋಟಿಗೆ ಏರಿದೆ. ಬ್ರೆಜಿಲ್‌ನಲ್ಲಿ 1.20 ಕೋಟಿ ಮಂದಿಗೆ, ಭಾರತದಲ್ಲಿ 1.16 ಕೋಟಿ ಜನರಿಗೆ ಕೋವಿಡ್‌ ಬಂದಿದೆ. ಜಗತ್ತಿನಲ್ಲಿ ಇಲ್ಲಿಯ ವರೆಗೆ 27 ಲಕ್ಷಕ್ಕೂ ಅಧಿಕ ಮಂದಿ ಈ ಸಾಂಕ್ರಾಮಿಕ ರೋಗಕ್ಕೆ ಪ್ರಾಣ ತೆತ್ತಿದ್ದಾರೆ.

8. ಟ್ವಿಟರ್‌ ಸಿಇಒ ಡಾರ್ಸಿ ಅವರ ಮೊದಲ ಟ್ವೀಟ್‌ ₹20ಕೋಟಿಗೆ ಮಾರಾಟ

ಟ್ವಿಟರ್ ಸಿಇಒ ಜಾಕ್ ಡಾರ್ಸಿ ಅವರು ತಮ್ಮ ಮೊದಲ ಟ್ವೀಟ್‌ನ ಡಿಜಿಟಲ್ ಆವೃತ್ತಿಯನ್ನು₹ 20 ಕೋಟಿಗೆ ಮಾರಾಟ ಮಾಡಿದ್ದಾರೆ. ಮಾರ್ಚ್ 2006 ‌ರಲ್ಲಿ "just setting up my twttr" ಎಂದು ತಾವು ಮಾಡಿದ್ದ ಟ್ವೀಟ್ ಅನ್ನು 'ಬ್ರಿಡ್ಜ್ ಒರಾಕಲ್' ಸಿಇಒ ಸಿನಾ ಎಸ್ಟಾವಿ ಅವರು ಖರೀದಿಸಿದ್ದಾರೆ. ಹರಾಜಿನಿಂದ ಬಂದ ಕ್ರಿಪ್ಟೋ ಕರೆನ್ಸಿಯ ಹಣವನ್ನು ಆಫ್ರಿಕಾದಲ್ಲಿ ಕೊರೊನಾ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಬಡ ಕುಟುಂಬಗಳಿಗೆ ನೆರವಾಗಲು ಚಾರಿಟಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT