ಬುಧವಾರ, ಡಿಸೆಂಬರ್ 8, 2021
23 °C
ಹೊಸ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ * ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ಮಾಡಲಿದೆ ಕೇಂದ್ರ

4 ವರ್ಷದೊಳಗಿನ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯಲು ಹೊಸ ನಿಯಮಗಳು: ಹೀಗಿವೆ ನೋಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮೋಟಾರ್‌ ಸೈಕಲ್‌ನಲ್ಲಿ ಕರೆದೊಯ್ಯಲು ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 'ಮೋಟಾರ್ ಸೈಕಲ್‌ ಹಿಂಬದಿಯಲ್ಲಿ ಕುಳಿತ ಮಗುವನ್ನು ಸವಾರನೊಂದಿಗೆ ಕೂಡಿಸುವಂತಹ ಸುರಕ್ಷತಾ ಪಟ್ಟಿಯನ್ನು ಒದಗಿಸಬೇಕು' ಎಂದಿದ್ದಾರೆ.

'ಹಿಂಬದಿ ಸೀಟಿನಲ್ಲಿ ಕುಳಿತು ಪ್ರಯಾಣಿಸುವ 9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಕ್ರ್ಯಾಶ್ ಹೆಲ್ಮೆಟ್ ಧರಿಸಿರಬೇಕು. 4 ವರ್ಷ ವಯಸ್ಸಿನ ಮಗುವಿನೊಂದಿಗೆ ತೆರಳುವಾಗ ಮೋಟಾರ್‌ ಸೈಕಲ್‌ನ ವೇಗವು ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚಿರಬಾರದು' ಎಂದವರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದ್ದು, ಇದಕ್ಕಾಗಿ ಕೇಂದ್ರೀಯ ಮೋಟಾರು ವಾಹನ ನಿಯಮಗಳಿಗೆ ತರಲಾಗುತ್ತಿರುವ ತಿದ್ದುಪಡಿಯ ಕರಡನ್ನು ಪ್ರಕಟಿಸಿದೆ. ಈ ತಿದ್ದುಪಡಿಯ ಅಡಿ ಪ್ರಸ್ತಾವಿಸಲಾಗಿರುವ ಹೊಸ ನಿಯಮಗಳು ಈ ಮುಂದಿನಂತಿವೆ;

* 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ವೇಗವು ಪ್ರತಿ ಗಂಟೆಗೆ 40 ಕಿ.ಮೀ  ಮೀರುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ₹1,000 ದಂಡ ವಿಧಿಸಲಾಗುತ್ತದೆ ಮತ್ತು ಚಾಲನಾ ಪರವಾನಗಿಯನ್ನು ಮೂರು ತಿಂಗಳವರೆಗೆ ಅಮಾನತಿನಲ್ಲಿಡಲಾಗುತ್ತದೆ

* 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ, ಸವಾರರು ಮಕ್ಕಳನ್ನು ತಮ್ಮೊಂದಿಗೆ ಬಂಧಿಸುವ ಸುರಕ್ಷಾ ಬೆಲ್ಟ್‌ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಈ ಬೆಲ್ಟ್‌ ಅನ್ನು ಮಕ್ಕಳಿಗೆ ಹಾಕಲಾಗುತ್ತದೆ. ಅದರ ಎರಡು ಸ್ಟ್ರಿಪ್‌ಗಳನ್ನು ವಯಸ್ಕ ಸವಾರರು ತಮ್ಮ ಭುಜದ ಮೂಲಕ ಎಳೆದು, ಹಾಕಿಕೊಳ್ಳಬೇಕು

ಮಕ್ಕಳು ಧರಿಸುವ ಸುರಕ್ಷಾ ಬೆಲ್ಟ್‌ಗಳು ಹಗುರವಾಗಿರಬೇಕು ಮತ್ತು ಗರಿಷ್ಠ 30 ಕೆ.ಜಿ. ತೂಕವನ್ನು ಹೊರುವಷ್ಟು ಸಾಮರ್ಥ್ಯ ಹೊಂದಿರಬೇಕು

4 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳನ್ನು ದ್ವಿಚಕ್ರವಾಹನಗಳಲ್ಲಿ ಕರೆದೊಯ್ಯುವಾಗ ಅವರಿಗೆ ಹೆಲ್ಮೆಟ್ ಹಾಕುವುದು ಕಡ್ಡಾಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು