ಬುಧವಾರ, ನವೆಂಬರ್ 25, 2020
20 °C
ಕಮಲನಾಥ್‌ ಸ್ಟಾರ್‌ ಪ್ರಚಾರಕ ಸ್ಥಾನಮಾನ ರದ್ದು ವಿಚಾರ

ಚುನಾವಣಾ ಆಯೋಗದ ಆದೇಶಕ್ಕೆ ‘ಸುಪ್ರೀಂ’ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರ ‘ಸ್ಟಾರ್‌ ಪ್ರಚಾರಕ’ ಸ್ಥಾನಮಾನವನ್ನು ರದ್ದುಗೊಳಿಸಿದ ಚುನಾವಣಾ ಆಯೋಗದ ಆದೇಶಕ್ಕೆ, ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.

ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಹಾಗೂ ‘ನೈತಿಕ ಮತ್ತು ಘನತೆಯ ನಡವಳಿಕೆ’ಯನ್ನು ಮೀರಿ ವರ್ತಿಸಿರುವುದಕ್ಕೆ ಈ ಕ್ರಮವನ್ನು ಆಯೋಗ ಕೈಗೊಂಡಿದೆ ಎಂದು ಆಯೋಗವು ಕಳೆದ ಶುಕ್ರವಾರ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಇದನ್ನು ಪ್ರಶ್ನಿಸಿ ಅ.30ರಂದು ಕಮಲನಾಥ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ‘ವಿಧಾನಸಭೆ ಉಪಚುನಾವಣೆಯ ಪ್ರಚಾರ ಕೊನೆಗೊಂಡಿದ್ದು, ಮಂಗಳವಾರ ಮತದಾನ ನಡೆಯಲಿದೆ. ಹೀಗಾಗಿ ಕಮಲನಾಥ್‌ ಅವರು ಸಲ್ಲಿಸಿರುವ ಅರ್ಜಿಯು ಪ್ರಸ್ತುತ ವ್ಯರ್ಥವಾಗಿದೆ’ ಎಂದು ಆಯೋಗದ ಪರವಾಗಿ ವಾದ ಮಂಡಿಸಿದ ವಕೀಲ ರಾಕೇಶ್‌ ದ್ವಿವೇದಿ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರಿದ್ದ ಪೀಠಕ್ಕೆ ತಿಳಿಸಿದರು. ನಂತರದಲ್ಲಿ ‘ಈ ಆದೇಶಕ್ಕೆ ನಾವು ತಡೆ ನೀಡುತ್ತಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣಿಯನ್‌ ಅವರನ್ನೊಳಗೊಂಡಿದ್ದ ಪೀಠವು ಆದೇಶಿಸಿತು.

ಕಮಲನಾಥ್‌ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ಈ ಅರ್ಜಿಯು ವ್ಯರ್ಥವಾಗಿಲ್ಲ. ಸ್ಟಾರ್‌ ಪ್ರಚಾರಕ ಸ್ಥಾನಮಾನವನ್ನು ರದ್ದುಗೊಳಿಸುವ ಮೊದಲು ಕಮಲನಾಥ್‌ ಅವರಿಗೆ ಆಯೋಗವು ಯಾವುದೇ ನೋಟಿಸ್‌ ನೀಡಿರಲಿಲ್ಲ’ ಎಂದು ತಿಳಿಸಿದರು. ‘ಅವರ ನಾಯಕರು ಯಾರು ಎನ್ನುವುದನ್ನು ನೀವು ಹೇಗೆ ನಿರ್ಣಯಿಸುತ್ತೀರಿ. ಅದು ಅವರ ಅಧಿಕಾರವೇ ಹೊರತು ಚುನಾವಣಾ ಆಯೋಗದ ಅಧಿಕಾರವಲ್ಲ’ ಎಂದು ಆಯೋಗದ ಪರ ವಕೀಲರಿಗೆ ಪೀಠವು ಪ್ರಶ್ನಿಸಿತು.

‘ಅರ್ಜಿಯು ವ್ಯರ್ಥವೇ ಅಲ್ಲವೇ ಎನ್ನುವುದು ವಿಷಯವಲ್ಲ. ನಿಮಗೆ ಈ ಅಧಿಕಾರ ಎಲ್ಲಿಂದ ದೊರೆಯಿತು ಎನ್ನುವುದನ್ನು ನಾವು ನಿರ್ಧರಿಸುತ್ತೇವೆ’ ಎಂದು ಪೀಠವು ತಿಳಿಸಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ದ್ವಿವೇದಿ, ನಾವು ಮಾದರಿ ನೀತಿ ಸಂಹಿತೆ ಮೇಲೆ ಈ ಕ್ರಮ ಕೈಗೊಂಡಿದ್ದೇವೆ. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್‌ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಾದರೆ, ಆಯೋಗದ ಆದೇಶಕ್ಕೆ ತಡೆ ನೀಡಬಾರದು’ ಎಂದು ತಿಳಿಸಿದರು. ಈ ವಾದವನ್ನು ಪೀಠವು ತಿರಸ್ಕರಿಸಿತು.

ಪ್ರಚಾರದ ವೇಳೆ ಚೌಹಾಣ್‌ ಅವರ ವಿರುದ್ಧ ‘ಮಾಫಿಯಾ’ ‘ಮಿಲಾವಟ್‌ ಖೋರ್‌’ ಪದಗಳನ್ನು ಕಮಲನಾಥ್‌ ಉಪಯೋಗಿಸಿದ್ದರು. ಜೊತೆಗೆ ಮಧ್ಯಪ್ರದೇಶದ ಸಚಿವೆ ಇಮರತಿ ದೇವಿ ಅವರನ್ನು ‘ಐಟಂ’ ಎಂದು ಕರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಕಮಲನಾಥ್ ಅವರಿಗೆ ನೋಟಿಸ್‌ ನೀಡಿತ್ತು.

ಕಮಲನಾಥ್‌ ಅರ್ಜಿಗೆ ಶೀಘ್ರದಲ್ಲೇ ಪ್ರತಿಕ್ರಿಯೆ

ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಕಮಲನಾಥ್‌ ಅವರು ಸಲ್ಲಿಸಿರುವ ಅರ್ಜಿಗೆ ಶೀಘ್ರದಲ್ಲೇ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವುದಾಗಿ ಚುನಾವಣಾ ಆಯೋಗವು(ಇ.ಸಿ) ಸೋಮವಾರ ತಿಳಿಸಿದೆ. 

‘ಸುಪ್ರೀಂ ಕೋರ್ಟ್‌ ತೀರ್ಪು ಅಂತಿಮ. ಈ ವಿಷಯವಾಗಿ ಪ್ರತಿಕ್ರಿಯೆಯನ್ನು ಸಲ್ಲಿಸಲು ಇ.ಸಿಗೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿದೆ. ಆದಷ್ಟು ಶೀಘ್ರ ಪ್ರತಿಕ್ರಿಯೆ ಸಲ್ಲಿಸಲಾಗುವುದು’ ಎಂದು ಆಯೋಗವು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು