ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಕಾಶ್ಮೀರ್ ಫೈಲ್ಸ್: ತರೂರ್ ಟ್ವೀಟ್‌ಗೆ ಕಿಡಿಕಾರಿದ ಅಗ್ನಿಹೋತ್ರಿ, ಅನುಪಮ್ ಖೇರ್

ಅಕ್ಷರ ಗಾತ್ರ

ಬೆಂಗಳೂರು: ಸಾಕಷ್ಟು ವಾದ–ವಿವಾದಗಳಿಗೆ ಕಾರಣವಾಗಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಸಿಂಗಪುರ ದೇಶದಲ್ಲಿ ನಿಷೇಧ ಮಾಡಿರುವುದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು.

ಇದೇ ವಿಷಯ ಸಂಸದ ಶಶಿ ತರೂರ್, ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ನಟ ಅನುಪಮ್ಖೇರ್ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.

ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಪುರದಲ್ಲಿ ನಿಷೇಧ ಮಾಡಿದ್ದರ ಬಗ್ಗೆ ಟ್ವೀಟ್ ಮಾಡಿದ್ದ ಶಶಿ ತರೂರ್, ‘ನೋಡಿ ಭಾರತ ಸರ್ಕಾರದ ಆಡಳಿತ ಪಕ್ಷ ಪ್ರೋತ್ಸಾಹಿಸಿದ ಕಾಶ್ಮೀರ್ ಫೈಲ್ಸ್‌ ಸಿನಿಮಾವನ್ನು ಸಿಂಗಪುರದಲ್ಲಿ ಬ್ಯಾನ್ ಮಾಡಿದ್ದಾರೆ’ಎಂದು ಕಾಲೆಳದಿದ್ದರು.

ಈ ಬಗ್ಗೆ ಸಿಡುಕಿದ ನಿರ್ದೇಶಕ ವಿವೇಕ ಅಗ್ನಿಹೋತ್ರಿ, ‘ರೀ ಸ್ವಾಮಿ ಕಿಚಾಯಿಸುವುದನ್ನು ಬಂದ್ ಮಾಡಿ, ‘ಲೀಲಾಹೋಟೆಲ್ ಪೈಲ್ಸ್‌’ ಸಿನಿಮಾವನ್ನೂ ಸಹ ಅವರು ಬ್ಯಾನ್ ಮಾಡಬಹುದು. ಕಾಶ್ಮೀರಿ ಪಂಡಿತರ ವಿಚಾರದಲ್ಲಿ ಹಾಸ್ಯ ಮಾಡುವುದನ್ನು ನಿಲ್ಲಿಸಿ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ವಿವೇಕ್ ಅವರು ಈ ವಿಚಾರದಲ್ಲಿ ಶಶಿ ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಸ್ಕರ್ ಅವರನ್ನು ಎಳೆ ತಂದಿದ್ದರು. ಸುನಂದಾ ಅವರು ದೆಹಲಿಯ ಲೀಲಾ ಹೋಟೆಲ್‌ನಲ್ಲಿ 2014 ರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.

‘ನಿಮ್ಮ ಪತ್ನಿ ಕೂಡ ಒಬ್ಬ ಕಾಶ್ಮೀರಿ ಪಂಡಿತ್ ಕುಟುಂಬದವರು. ನಿಮ್ಮ ಟ್ವೀಟ್‌ ಅನ್ನು ಡಿಲೀಟ್ ಮಾಡಿ’ ಎಂದು ಅಗ್ನಿಹೋತ್ರಿ ಹಾಗೂ ಕೆಲ ನೆಟ್ಟಿಗರು ಆಗ್ರಹ ಮಾಡಿದ್ದರು.

ಇದೇ ವಿಚಾರದಲ್ಲಿ ಮಧ್ಯಪ್ರವೇಶಿಸಿ ಶಶಿ ಅವರ ಮೇಲೆ ಕಿಡಿ ಕಾರಿದ ನಟ ಅನುಪಮ್ ಖೇರ್, ‘ಪ್ರೀತಿಯ ಶಶಿ, ಹಿಂದೂಗಳ ಹತ್ಯೆ ವಿಚಾರದಲ್ಲಿ ನಿಮ್ಮ ನಿರ್ದಯತೆ ಒಂದು ದುರಂತ. ಕನಿಷ್ಠ ನಿಮ್ಮ ಪತ್ನಿಗಾದರೂ ನೀವು ಮರಗುತ್ತೀರಿ ಎಂದುಕೊಂಡಿದ್ದೇವು. ನೀವು ಮಾಡುತ್ತಿರುವುದು ಸರಿಯಲ್ಲ’ ಎಂದಿದ್ದಾರೆ.

ಇದರಿಂದ ಕುಪಿತಗೊಂಡ ಶಶಿ ತರೂರ್ ತಮ್ಮ ಹೆಂಡತಿಯನ್ನು ಎಳೆ ತಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸುನಂದಾಳನ್ನು ಈ ವಿಚಾರದಲ್ಲಿ ಎಳೆ ತಂದಿರುವುದು ಅನಗತ್ಯ ಹಾಗೂ ಅವಹೇಳನಕಾರಿಯಾಗಿದೆ. ನಿಮಗಿಂತ ಚೆನ್ನಾಗಿ ನಾನು ಅವಳನ್ನು ಬಲ್ಲೆ. ಕಾಶ್ಮೀರದ ಸೋಪೂರ್‌ನಲ್ಲಿ ಅವಳು ಮುಸ್ಲಿಂ ಹಾಗೂ ಹಿಂದೂ ಸ್ನೇಹಿತರ ಜೊತೆ ಅತ್ಯಂತ ಅವಿನಾಭಾವದಿಂದ ಇದ್ದಳು. ಅವಳು ದ್ವೇಷವನ್ನು ನಂಬಿರಲಿಲ್ಲ, ಸಾಮರಸ್ಯವನ್ನು ನಂಬಿದ್ದಳು’ ಎಂದಿದ್ದಾರೆ.

90ರ ದಶಕದಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಹತ್ಯೆಯ ಬಗ್ಗೆ ದಿ ಕಾಶ್ಮೀರ್ ಫೈಲ್ಸ್‌ ಕಥೆ ಹೊಂದಿತ್ತು. ಮಾರ್ಚ್ 11 ರಂದು ಬಿಡುಗಡೆಯಾಗಿದ್ದ ಈ ಚಿತ್ರ ಇದುವರೆಗೆ ಬಾಕ್ಸ್ ಆಫೀಸ್‌ನಲ್ಲಿ ₹350 ಕೋಟಿಗೂ ಅಧಿಕ ಗಳಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT