ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಕ್ಕೆ ಮರುನಾಮಕರಣ | ಸರ್ಕಾರ ನೈಜ ಸಮಸ್ಯೆಗಳತ್ತ ಗಮನಹರಿಸಿ: ಟಿಎಂಸಿ, ಸಿಪಿಐ

Last Updated 29 ಜನವರಿ 2023, 2:12 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಭವನದ ಪ್ರಸಿದ್ಧ 'ಮೊಘಲ್ ಉದ್ಯಾನ'ಕ್ಕೆ ಕೇಂದ್ರ ಸರ್ಕಾರವು 'ಅಮೃತ್ ಉದ್ಯಾನ' ಎಂದು ಮರುನಾಮಕರಣ ಮಾಡಿದೆ. ಈ ಕ್ರಮವನ್ನು ಬಿಜೆಪಿಯು ಶ್ಲಾಘಿಸಿದರೆ, ವಿರೋಧ ಪಕ್ಷಗಳು ಕಿಡಿಕಾರಿವೆ.

ವಸಾಹತುಶಾಹಿಯ ಮತ್ತೊಂದು ಸಂಕೇತವನ್ನು ಚೂರುಚೂರು ಮಾಡಲಾಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಆದರೆ, ವಿರೋಧ ಪಕ್ಷಗಳು, ಕೇಂದ್ರ ಸರ್ಕಾರವು ಇಂತಹ ಕೆಲಸಗಳನ್ನು ಮಾಡುವ ಬದಲು ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣದಂತಹ ವಿಚಾರಗಳತ್ತ ಗಮನಹರಿಸಬೇಕು ಎಂದು ಒತ್ತಾಯಿಸಿವೆ.

ಉದ್ಯಾನದ ಮರುನಾಮಕರಣ ವಿಚಾರವಾಗಿ ಕಾಂಗ್ರೆಸ್‌ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತೃಣಮೂಲ ಕಾಂಗ್ರೆಸ್‌, ಸಿಪಿಐ ಪಕ್ಷಗಳು 'ಇದೊಂದು ಇತಿಹಾಸ ತಿರುಚುವ ಪ್ರಯತ್ನ' ಎಂದು ಟೀಕಿಸಿವೆ.

‘ಮೊಘಲ್ ಉದ್ಯಾನ’ವನ್ನು ಇನ್ನು ಮುಂದೆ ‘ಅಮೃತ್ ಉದ್ಯಾನ’ ಎಂದು ಕರೆಯಲಾಗುವುದು ಎಂದು ಶನಿವಾರ ಬಿಡುಗಡೆಯಾಗಿರುವ ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಕರ್ಷಕ ಉದ್ಯಾನ ವರ್ಷಕ್ಕೊಮ್ಮೆ ಸಾರ್ವಜನಿಕರಿಗೆ ತೆರೆದಿರುತ್ತವೆ. ಈ ಬಾರಿ ಜನರು ಜನವರಿ 31 ರಿಂದ ಮಾರ್ಚ್ 26ರ ವರೆಗೂ ಜನರು ಭೇಟಿ ನೀಡಬಹುದು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಭಾನುವಾರ) ರಾಷ್ಟ್ರಪತಿ ಭವನದ ಉದ್ಯಾನ ಮತ್ತು ಉದ್ಯಾನ ಉತ್ಸವ–2023 ಅನ್ನು ಉದ್ಘಾಟಿಸಲಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರ ದೆಹಲಿಯ ರಾಜಪಥವನ್ನು ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಿತ್ತು.

ವಿಸ್ತಾರವಾದ ರಸ್ತೆಗಳು ಹಾಗೂ ಇತರ ಸಂಸ್ಥೆಗಳು ವಸಾಹತುಶಾಹಿಯ ಗುರುತನ್ನು ಹೊಂದಿರಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅವುಗಳ ಮರುನಾಮಕರಣ ಮಾಡುತ್ತಿದ್ದು, ‘ಕರ್ತವ್ಯ ಪಥ’ ಅಂತಹ ಪ್ರಯತ್ನಗಳಲ್ಲಿ ಒಂದಾಗಿತ್ತು.

ಬಿಜೆಪಿ ನಾಯಕರ ಮೆಚ್ಚುಗೆ
ಉದ್ಯಾನಕ್ಕೆ ಮರುನಾಮಕರಣ ಮಾಡಿರುವುದು ನವ ಭಾರತದ ಕಡೆಗಿನ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.

'ರಾಷ್ಟ್ರಪತಿ ಭವನದ ಉದ್ಯಾನಗಳಿಗೆ 'ಅಮೃತ್‌ ಉದ್ಯಾನ' ಎಂದು ಮರುನಾಮಕರಣ ಮಾಡಿರುವ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಹಾಗೂ ಧನ್ಯವಾದ ಹೇಳುತ್ತೇನೆ. ಈ ಹೊಸ ಹೆಸರು ವಸಾಹತುಶಾಹಿ ಅವಶೇಷದ ಮತ್ತೊಂದು ಸಂಕೇತವನ್ನು ಚೂರುಚೂರು ಮಾಡಿರುವುದಲ್ಲದೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ' ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಟ್ವೀಟ್ ಮಾಡಿದ್ದಾರೆ.

'ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ 'ಅಮೃತ್‌ ಉದ್ಯಾನ' ಎಂದು ಮರುನಾಮಕರಣ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಇದು ನಮ್ಮ ದೇಶದ ಪ್ರಗತಿಯ ಪ್ರಬಲ ಸಂಕೇತ ಹಾಗೂ ನವ ಭಾರತದ ಉಜ್ವಲ ಭವಿಷ್ಯದ ಪ್ರತಿಬಿಂಬ' ಎಂದು ಸಚಿವ ಕಿರಣ್‌ ರಿಜುಜು ಬರೆದುಕೊಂಡಿದ್ದಾರೆ.

ವಿರೋಧ ಪಕ್ಷಗಳ ಟೀಕೆ
ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಿಯಾನ್‌ ಅವರು, 'ಯಾರಿಗೆ ಗೊತ್ತು ಅವರು (ಬಿಜೆಪಿಯವರು) ಈಗಿನ ಈಡನ್‌ ಗಾರ್ಡನ್‌ ಕ್ರೀಡಾಂಗಣದ ಹೆಸರನ್ನು ಬದಲಿಸಲು ಬಯಸಬಹುದು ಮತ್ತು ಅದನ್ನು ಮೋದಿ ಗಾರ್ಡನ್‌ ಎನ್ನಬಹುದು! ಅವರು (ಕೇಂದ್ರ ಸರ್ಕಾರ) ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣ ಮತ್ತು ಅತ್ಯಮೂಲ್ಯ ಸಂಪನ್ಮೂಲಗಳಾದ ಎಲ್‌ಐಸಿ, ಎಸ್‌ಬಿಐ ರಕ್ಷಣೆಗೆ ಗಮನಹರಿಸಬೇಕು' ಎಂದು ಟ್ವಿಟರ್‌ನಲ್ಲಿ ಕುಟುಕಿದ್ದಾರೆ.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಅವರು, ಹೆಸರು ಬದಲಾವಣೆ ಪ್ರಹಸನವು ಬಹಳ ದಿನಗಳಿಂದ ನಡೆಯುತ್ತಿದೆ. ಇದು ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

'ಭಾರತದ ಇತಿಹಾಸವನ್ನು ಮತ್ತೆ ಬರೆಯುವುದು ಹಾಗೂ ರಾಷ್ಟ್ರೀಯತೆಯನ್ನು ಮರು ವ್ಯಾಖ್ಯಾನಿಸುವುದು ಆರ್‌ಎಸ್‌ಎಸ್‌ನ ಅಜೆಂಡಾ ಆಗಿದೆ. ಗಣರಾಜ್ಯೋತ್ಸವದ ಹೊತ್ತಿನಲ್ಲಿ ನಾವೆಲ್ಲರೂ ಎದ್ದುನಿಂತು ನಮ್ಮ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರಕ್ಷಿಸಿಕೊಳ್ಳಬೇಕು. ಭಾರತದಲ್ಲಿ ಧರ್ಮಾಧಾರಿತ ಆಡಳಿತ ವ್ಯವಸ್ಥೆಯಿಲ್ಲ. ಪ್ರಜಾಪ್ರಭುತ್ವ ಜಾರಿಯಲ್ಲಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT