ಮಂಗಳವಾರ, ಜನವರಿ 31, 2023
27 °C

ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಸೇನಾನಿಯಾಗಿದ್ದ ಮುಲಾಯಂ: ಪಿಎಂ ಮೋದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಲಾಯಂ ಸಿಂಗ್‌ ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಪ್ರಮುಖ ಸೇನಾನಿ'ಯಾಗಿದ್ದರು ಎಂದಿದ್ದಾರೆ.

82 ವರ್ಷದ ಮುಲಾಯಂ ಅವರು ಇಂದು (ಸೋಮವಾರ) ನಿಧನರಾದರು. ಅವರನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಅ. 2ರಂದು ದಾಖಲಿಸಲಾಗಿತ್ತು. ಅಂದಿನಿಂದಲೂ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು.

ಇದನ್ನೂ ಓದಿ: 

ಮುಲಾಯಂ ನಿಧನದ ಬಳಿಕ ಟ್ವೀಟ್‌ ಮಾಡಿರುವ ಮೋದಿ, 'ಶ್ರೀ ಮುಲಾಯಂ ಅವರದ್ದು ಅಸಾಧಾರಣವಾದ ವ್ಯಕ್ತಿತ್ವ. ಅವರು ಜನರ ಸಮಸ್ಯೆಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸುತ್ತಿದ್ದರು. ಆ ಮೂಲಕ ವಿನಮ್ರ ಮತ್ತು ತಳಮಟ್ಟದ ನಾಯಕನಾಗಿ ಅಪಾರ ಮೆಚ್ಚುಗೆ ಗಳಿಸಿದ್ದರು. ಶ್ರದ್ಧೆಯಿಂದ ಜನರ ಸೇವೆ ಮಾಡಿದ್ದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಡಾ.ಲೋಹಿಯಾ ಅವರ ವಿಚಾರಧಾರೆಗಳನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು' ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಮುಲಾಯಂ ಅವರು ಉತ್ತರ ಪ್ರದೇಶ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮನ್ನು ತಾವು ವಿಶಿಷ್ಠ ರೀತಿಯಲ್ಲಿ ಗುರುತಿಸಿಕೊಂಡವರು. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಪ್ರಮುಖ ಸೇನಾನಿಯಾಗಿದ್ದರು. ರಕ್ಷಣಾ ಸಚಿವರಾಗಿ ಬಲಿಷ್ಠ ಭಾರತಕ್ಕಾಗಿ ಶ್ರಮಿಸಿದ್ದಾರೆ. ಅವರ ಸಂಸದೀಯ ಮಧ್ಯಸ್ಥಿಕೆಗಳು ದೂರದೃಷ್ಠಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಒತ್ತು ನೀಡಿದ್ದವು' ಎಂದು ಸ್ಮರಿಸಿದ್ದಾರೆ.

ಮುಲಾಯಂ ಅವರೊಂದಿಗೆ ಸಾಕಷ್ಟು ಸಲ ಮಾತುಕತೆ ನಡೆಸಿದ್ದ ಎಂದೂ ಹೇಳಿಕೊಂಡಿರುವ ಮೋದಿ, ಇಬ್ಬರೂ ಜೊತೆಯಾಗಿರುವ ಹಲವು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

'ಮುಲಾಯಂ ಸಿಂಗ್‌ ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ಸಾಧಾರಣ ಪರಿಸ್ಥಿತಿಯಿಂದ ಬಂದ ಮುಲಾಯಂ ಅವರ ಸಾಧನೆಗಳು ಅಸಾಧಾರಣವಾದವು' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದ್ದಾರೆ. ಮುಲಾಯಂ ಅವರನ್ನು 'ಭೂಮಿ ಪುತ್ರ' ಎಂದೂ ಸಂಬೋಧಿಸಿರುವ ಮುರ್ಮು, ಎಲ್ಲ ಪಕ್ಷದವರೂ ಅವರನ್ನು (ಮುಲಾಯಂ ಸಿಂಗ್) ಗೌರವಿಸುತ್ತಿದ್ದರು. ಅವರ ಕುಟುಂಬದವರು, ಬೆಂಬಲಿಗರಿಗೆ ತೀವ್ರ ಸಂತಾಪ ಸೂಚಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು