ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಒಸಿಯಲ್ಲಿ ಗುಂಡಿನ ಚಕಮಕಿ: ಪಾಕ್‌ನ 8 ಸೈನಿಕರು ಬಲಿ

ಭಾರತದ ನಾಲ್ವರು ಯೋಧರು ಹುತಾತ್ಮ
Last Updated 13 ನವೆಂಬರ್ 2020, 18:55 IST
ಅಕ್ಷರ ಗಾತ್ರ

ಶ್ರೀನಗರ:ಜಮ್ಮು–ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಭಾರತದ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಭಾರತದ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ ಎಂಟು ಸೈನಿಕರು ಸತ್ತಿದ್ದಾರೆ. ಹಲವು ಬಂಕರ್‌ಗಳು, ಇಂಧನ ಸಂಗ್ರಹಾಗಾರಗಳು ನಾಶವಾಗಿವೆಎಂದು ವರದಿಯಾಗಿದೆ.

ಪಾಕಿಸ್ತಾನ ಸೇನೆಯು ಅಪ್ರಚೋದಿತವಾಗಿ ನಡೆಸಿದ ದಾಳಿಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಆರು ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಪಾಕಿಸ್ತಾನದ ಭಾಗದಲ್ಲಿ ಸತ್ತವರಲ್ಲಿ ಆರ್ಮಿ ಸ್ಪೆಶಲ್‌ ಸರ್ವಿಸ್‌ ಗ್ರೂಪ್‌ನ 2–3 ಕಮಾಂಡೊಗಳು ಸೇರಿದ್ದಾರೆ ಎಂದು ಭಾರತ ಸೇನೆಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅದಲ್ಲದೆ, 10–12 ಸೈನಿಕರು ಗಾಯಗೊಂಡಿದ್ದಾರೆ.

ನಾಗರಿಕ ವಸತಿ ಪ್ರದೇಶಗಳ ಮೇಲೆಯೇ ಪಾಕಿಸ್ತಾನದ ಸೇನೆಯು ಉದ್ದೇಶಪೂರ್ವಕವಾಗಿ ಫಿರಂಗಿ ದಾಳಿ ನಡೆಸಿದೆ ಎಂದು ಸೇನೆಯ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ.‌ದವಾರ್‌, ಕೇರನ್‌, ಉರಿ ಮತ್ತು ನೌಗಾಮ್‌ ವಲಯಗಳಲ್ಲಿ ಪಾಕಿಸ್ತಾನವು ಗುಂಡಿನ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಹುತಾತ್ಮರಾದ ಯೋಧರಲ್ಲಿ ಒಬ್ಬರು ನಾಗಪುರದ ಭೂಷಣ್‌ ರಾಮೇಶ್ರ ಮತ್ತು ಇನ್ನೊಬ್ಬರು ಕೊಲ್ಹಾಪುರದ ರಿಷಿಕೇಶ್‌‌ ರಾಮಚಂದ್ರ ಎಂದು ಗುರುತಿಸಲಾಗಿದೆ. ಹುತಾತ್ಮರಾದ ಇನ್ನೊಬ್ಬರು ಬಿಎಸ್‌ಎಫ್‌ನ ಸಬ್‌ ಇನ್ಸ್‌ಪೆಕ್ಟರ್‌ ರಾಕೇಶ್‌‌ ದೋವಲ್‌. ಮೃತಪಟ್ಟ ನಾಗರಿಕರಲ್ಲಿ ಒಬ್ಬ ಮಹಿಳೆ ಮತ್ತು ಏಳು ವರ್ಷದ ಬಾಲಕ ಸೇರಿದ್ದಾರೆ.

ಜನರಲ್ಲಿ ಭೀತಿ

ಪಾಕ್‌ ದಾಳಿಯಿಂದಾಗಿ ಜನ ವಸತಿ ಪ್ರದೇಶಗಳಲ್ಲಿ ಭೀತಿಯ ವಾತಾವರಣ ನಿರ್ಮಾಣ ಆಗಿದೆ. ಅಲ್ಲಿನ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ. ‘ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಭೀಕರವಾದ ಷೆಲ್‌ ದಾಳಿ ಇದು. ಕೆಲವು ಷೆಲ್‌ಗಳು ಮನೆಗಳ ಮೇಲೆಯೇ ಬಿದ್ದಿವೆ. ಜನರು ಭಯದಿಂದ ಮನೆ ತೊರೆಯುತ್ತಿದ್ದಾರೆ’ ಎಂದು ಉರಿ ನಿವಾಸಿ ಗುಲ್‌ ಝಮಾನ್‌ ಎಂಬವರು ತಿಳಿಸಿದ್ದಾರೆ. ಗ್ರಾಮಗಳಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್‌ ಮೂಲಕ ಸಾಗಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಉರಿ ವಲಯದ ಕೆಲವು ಪ್ರದೇಶಗಳಲ್ಲಿ ಶುಕ್ರವಾರ ಸಂಜೆಯವರೆಗೂ ಷೆಲ್‌ ದಾಳಿ ನಡೆದಿದೆ ಎಂದು ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್‌ ಖಯೂಂ ತಿಳಿಸಿದ್ದಾರೆ.

ನುಸುಳುವಿಕೆ ಯತ್ನ

ಕೇರನ್‌ ವಲಯದ ಕೆಲವು ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಿತ್ತು. ಗಡಿಯ ಆಚಿನಿಂದ ನುಸುಳುವ ಯತ್ನ ನಡೆಯಿತು. ಆದರೆ, ಜಾಗೃತರಾಗಿದ್ದ ಯೋಧರು ಈ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಕಾಲಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT