ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ‘ಡೆಲ್ಟಾ ಪ್ಲಸ್’ ಸಂಕಟ: ಪ್ರಕರಣಗಳ ಸಂಖ್ಯೆ 65ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ವರದಿಯಾದ ಎರಡನೇ ಸಾವು: ಪ್ರಕರಣಗಳ ಸಂಖ್ಯೆ 65ಕ್ಕೆ ಏರಿಕೆ
Last Updated 13 ಆಗಸ್ಟ್ 2021, 20:11 IST
ಅಕ್ಷರ ಗಾತ್ರ

ಮುಂಬೈ: ಕೊರೊನಾದ ರೂಪಾಂತರ ತಳಿಯಾದ ಡೆಲ್ಟಾ ಪ್ಲಸ್‌ ವೈರಾಣುವಿನಿಂದ, ಮುಂಬೈನಲ್ಲಿ 63 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ಇದು ಮುಂಬೈನಲ್ಲಿ ಡೆಲ್ಟಾ ಪ್ಲಸ್‌ನಿಂದ ಸಂಭವಿಸಿದ ಮೊದಲ ಸಾವಿನ ಪ್ರಕರಣವಾಗಿದ್ದು, ಮಹಾರಾಷ್ಟ್ರದಲ್ಲಿ ವರದಿಯಾದ ಎರಡನೇ ಸಾವಿನ ಪ್ರಕರಣ. ಇದುವರೆಗೆ ರಾಜ್ಯದಲ್ಲಿ ಒಟ್ಟು 65 ಡೆಲ್ಟಾ ಪ್ರಕರಣಗಳು ವರದಿಯಾಗಿವೆ.

ಲಸಿಕೆಯ ಒಂದು ಡೋಸ್‌ ಕೂಡ ಪಡೆಯದಿದ್ದ, 80 ವರ್ಷದ ಮಹಿಳೆಯೊಬ್ಬರು ಜೂನ್‌ 13ರಂದು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಮೃತಪಟ್ಟಿದ್ದರು. ಅದು, ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ನಮೊದಲ ‍ಪ್ರಕರಣವಾಗಿತ್ತು.

ಮುಂಬೈನಲ್ಲಿ ಮೃತಪಟ್ಟ ಮಹಿಳೆಯು, ಕೋವಿಡ್‌–19 ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರು. ಅವರಿಗೆ, ಯಾವುದೇ ಪ್ರಯಾಣ ಹಿನ್ನೆಲೆ ಇರಲಿಲ್ಲ ಎಂದು ತಿಳಿದುಬಂದಿದೆ. ಅವರ ಸಂಪರ್ಕಕ್ಕೆ ಬಂದಿದ್ದ, ಮುಂಬೈನವರೇ ಆದ ಆರು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಆರೂ ಜನರ ಜಿನೋಮ್ ಸ್ವೀಕ್ವೆನ್ಸ್‌ ಪರೀಕ್ಷೆ ನಡೆದಿದ್ದು, ಆ ಪೈಕಿ ಇಬ್ಬರಲ್ಲಿ ಡೆಲ್ಟಾ ಪ್ಲಸ್‌ ಸೋಂಕು ಇರುವುದು ತಿಳಿದುಬಂದಿದೆ. ಇನ್ನಿಬ್ಬರ ಪರೀಕ್ಷಾ ವರದಿ ಬರಬೇಕಿದೆ.

ಮುಂಬೈನ ಘಾಟ್‌ಕೋಪರ್‌ನ ಈ ಮಹಿಳೆಯು ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯ ಭಾಗವಾಗಿ ಅವರಿಗೆ ಸ್ಟಿರಾಯ್ಡ್‌ ಹಾಗೂ ರೆಮ್‌ಡೆಸಿವಿರ್‌ ನೀಡಲಾಗಿತ್ತು. ಜುಲೈ 27ರಂದು ಮೃತಪಟ್ಟಿದ್ದ ವೃದ್ಧೆಯ ಜಿನೋಮ್ ಸೀಕ್ವೆನ್ಸಿಂಗ್‌ ವರದಿಯು ಆಗಸ್ಟ್‌ 11ರಂದು ಬಂದಿದೆ. ಆ ನಂತರವಷ್ಟೇ, ಮಹಿಳೆಯು ಡೆಲ್ಟಾ ಪ್ಲಸ್‌ ವೈರಸ್‌ ಸೋಂಕಿಗೆ ಒಳಗಾಗಿದ್ದರು ಎಂಬುದು ತಿಳಿದುಬಂದಿದೆ ಎಂದು ಬೃಹನ್‌ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ, ಡೆಲ್ಟಾ ಪ್ಲಸ್‌ವೈರಾಣು ಸೋಂಕಿನ 20 ಪ್ರಕರಣಗಳು ಬುಧವಾರ ಒಂದೇ ದಿನ ವರದಿಯಾಗಿದೆ.

ಮಹಿಳೆಯರಿಗೆ ಕೋವಿಡ್‌ ಲಸಿಕೆ: ರಾಜ್ಯಗಳಿಗೆ ಪತ್ರ

ನವದೆಹಲಿ (ಪಿಟಿಐ): ಕೋವಿಡ್‌–19 ಲಸಿಕೆ ಪಡೆಯುವುದರಲ್ಲಿ ಮಹಿಳೆಯರು ಹಿಂದೆ ಇದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕಳವಳ ವ್ಯಕ್ತಪಡಿಸಿದೆ. ಲಸಿಕೆ ಅಭಿಯಾನದಲ್ಲಿ ಮಹಿಳೆಯರು ಹಿಂದೆ ಬೀಳುವುದನ್ನು ತಡೆ
ಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದೆ.

ಮಹಿಳೆಯರು ಲಸಿಕೆ ಪಡೆಯುವುದರಲ್ಲಿ ಹಿಂದಿರುವ ಕುರಿತು ಮಾಧ್ಯಮವೊಂದು ಮಾಡಿದ್ದ ವರದಿಯನ್ನು ಉಲ್ಲೇಖಿಸಿ ಪತ್ರ ಬರೆದಿರುವ ಎನ್‌ಸಿಡಬ್ಲ್ಯು, ‘ಮನೆಯಿಂದ ಹೊರಗಡೆ ಹೋಗಿ ದುಡಿಯದ ಮಹಿಳೆಯ ಆರೋಗ್ಯವನ್ನು ಆದ್ಯತೆಯ ವಿಷಯವಾಗಿ ಹಲವಾರು ಕುಟುಂಬಗಳು ಪರಿಗಣಿಸುವುದಿಲ್ಲ. ಆದ್ದರಿಂದ, ಮನೆಯಲ್ಲೇ ಇರುವ ಮಹಿಳೆಯರ ಲಸಿಕೆ ವಿಚಾರ ಪ್ರಾಮುಖ್ಯ ಪಡೆದಿಲ್ಲ. ಸೋಂಕಿಗೆ ಒಳಗಾದ ಕುಟುಂಬದ ಸದಸ್ಯನನ್ನು ಆರೈಕೆ ಮಾಡುವ ವೇಳೆ ಮಹಿಳೆಯರು ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ. ಆದ್ದರಿಂದ ಲಸಿಕೆ ತೆಗೆದುಕೊಳ್ಳುವುದು ಅತ್ಯಗತ್ಯ’ ಎಂದಿದೆ.

ಸಮಾಜದಲ್ಲಿರುವ ಲಿಂಗ ತಾರತಮ್ಯವೇ ಲಸಿಕೆ ಅಭಿಯಾನದಲ್ಲಿ ಮಹಿಳೆಯರು ಹಿಂದೆ ಬೀಳಲು ಕಾರಣ. ಜೊತೆಗೆ, ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಲಭ್ಯತೆಯಲ್ಲಿರುವ ತಾರತಮ್ಯವೂ ಇದಕ್ಕೆ ಕಾರಣ ಎಂದು ಎನ್‌ಸಿ ಡಬ್ಲ್ಯುಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT