ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಲ್ಲಿ ‘ಅಣಬೆ ಅಮ್ಮ‘ನ ಮಹಿಳಾ ಸಬಲೀಕರಣ: ಇಡೀ ಗ್ರಾಮದ ಆಶಾಕಿರಣ

Last Updated 2 ಆಗಸ್ಟ್ 2021, 7:58 IST
ಅಕ್ಷರ ಗಾತ್ರ

ಭವಾನಿಪಟ್ಟಣ (ಒಡಿಶಾ): 80ರ ದಶಕದಲ್ಲಿ ಹಸಿವು ಮತ್ತು ಹಸಿವಿನಿಂದ ಮೃತಪಟ್ಟ ಸುದ್ದಿಗಳಿಂದಲೇ ‘ಕುಖ್ಯಾತಿ‘ ಪಡೆದಿದ್ದ ಒಡಿಶಾದ ಕಾಳಹಂದಿ ಜಿಲ್ಲೆಯ ಕುಟೇನ್‌ಪದಾರ್‌ ಗ್ರಾಮ, ಇಂದು ಮಹಿಳಾ ಸಬಲೀಕರಣದ ಮಾದರಿ ಹಳ್ಳಿಯಾಗಿದೆ.

ಅಷ್ಟೇ ಅಲ್ಲ, ಈ ಗ್ರಾಮದ ಮಹಿಳೆ ಅಣಬೆ ಕೃಷಿಯಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ ‘ಅಣಬೆ ಅಮ್ಮ‘ ಎಂಬ ಖ್ಯಾತಿ ಪಡೆದು, ತಮ್ಮೂರನ್ನೇ ‘ಅಣಬೆ ಗ್ರಾಮ‘ ಎನ್ನುವ ಹಂತಕ್ಕೆ ಕೊಂಡೊಯ್ದಿದ್ದಾರೆ.

ಕುಟೇನ್‌ಪದಾರ್‌ ಹಳ್ಳಿಯ 45ರ ಹರೆಯದ ಬನದೇ ಮಜ್ಹಿ, ‘ಮಾದರಿ ಗ್ರಾಮವಾಗಲು‘ ಕಾರಣವಾದ ಮಹಿಳೆ. ಅಣಬೆ ಕೃಷಿಯಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿರುವ ಕಾರಣದಿಂದ ಮಜ್ಹಿ ಅವರನ್ನು ‘ಅಣಬೆ ಅಮ್ಮ‘ (ಮಶ್ರೂಮ್ ಮಾ) ಎಂದೇ ಕರೆಯುತ್ತಾರೆ.

ಜಿಲ್ಲಾ ಕೇಂದ್ರ ಭವಾನಿಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವ ಕುಟೇನ್‌ಪದಾರ್‌ ಗ್ರಾಮ 55 ಮನೆಗಳನ್ನು ಹೊಂದಿದೆ. ಇಲ್ಲಿರುವ 40 ಕುಟುಂಬಗಳು ಬುಡಕಟ್ಟು ಜನಾಂಗದವರು. ಈ ಕುಟುಂಬಗಳು ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿದ್ದಾರೆ.

ಇಂಥ ಗ್ರಾಮದಲ್ಲಿ ನಬಾರ್ಡ್ 2007-08ರಲ್ಲಿ ಒಣ ಹುಲ್ಲನ್ನು ಬಳಸಿ ಅಣಬೆ ಬೆಳೆಯುವ ಕುರಿತು ತರಬೇತಿ ಶಿಬಿರವನ್ನು ಏರ್ಪಡಿಸಿತು. ಈ ತರಬೇತಿಯಲ್ಲಿ ಬನದೇ ಮಜ್ಹಿ ಕೂಡ ಭಾಗವಹಿಸಿದ್ದರು. ತರಬೇತಿಯಲ್ಲಿ ಕಲಿತ ಪಾಠವೇ ಅವರಿಗೆ ‘ಈ ಕೃಷಿಯಿಂದ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಬಹುದು‘ ಎಂಬ ವಿಶ್ವಾಸವನ್ನು ತುಂಬಿತು.

ತರಬೇತಿ ನಂತರ, ಅಣಬೆ ಕೃಷಿ ಆರಂಭಿಸಿದರು. ಆರಂಭದಲ್ಲಿ ಒಂದಷ್ಟು ಏಳುಬೀಳುಗಳನ್ನು ಕಾಣುತ್ತಾ, ಪ್ರತಿ ಹಂತದ ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡರು. ಹಂತ ಹಂತವಾಗಿ ಯಶಸ್ಸಿನ ಹೆಜ್ಜೆಗಳನ್ನಿಟ್ಟರು. ‘ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತೇನೆ‘ ಎಂಬ ದೃಢಸಂಕಲ್ಪದಿಂದ ಮಜ್ಹಿ ಅವರು ಆರಂಭಿಸಿದ ‘ಅಣಬೆ ಕೃಷಿ‘, ಕುಟುಂಬಕ್ಕೆ ‘ಆರ್ಥಿಕ ಶಕ್ತಿ‘ ತುಂಬುವ ಜೊತೆಗೆ, ಇಡೀ ಗ್ರಾಮದಲ್ಲಿ ಒಂದು ಚಳವಳಿಯಾಗಿ ರೂಪುಗೊಂಡಿತು.

ಬಡ ಕುಟುಂಬದ ‘ನಾರಿಶಕ್ತಿ‘

ಬನದೇ ಅವರದ್ದು ಬಡ ಕುಟುಂಬ. ಪತಿ ಮತ್ತು ನಾಲ್ಕು ಮಕ್ಕಳಿದ್ದಾರೆ. ಜೀವನೋಪಾಯಕ್ಕಾಗಿ ಸರ್ಕಾರ ಎರಡು ಎಕರೆ ಭೂಮಿಯನ್ನು ನೀಡಿದೆ. ಅದು ಎತ್ತರದ ಪ್ರದೇಶದಲ್ಲಿದ್ದು, ಅದು ರಾಗಿ ಮತ್ತು ಸಿರಿಧಾನ್ಯಗಳನ್ನು ಬೆಳೆಯಲು ಯೋಗ್ಯವಾದ ಭೂಮಿಯಾಗಿದೆ.

ದಶಕಗಳ ಹಿಂದೆ ಎಲ್ಲ ಗ್ರಾಮಸ್ಥರಂತೆ, ಇವರ ಕುಟುಂಬವೂ ಎರಡು ಹೊತ್ತು ಊಟಕ್ಕಾಗಿ ಕೂಲಿ ಕೆಲಸ ಮತ್ತು ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತವಾಗಿತ್ತು. ಅಣಬೆ ಕೃಷಿ ಕುರಿತು ಪ್ರಾಥಮಿಕ ತರಬೇತಿ ಪಡೆದು, ಎರಡು ವರ್ಷಗಳ ಕಾಲ ಪ್ರಾಯೋಗಿಕವಾಗಿ ಕೃಷಿ ಮಾಡಿದ ನಂತರ, ಬನದೇ ಮಜ್ಹಿ ಗ್ರಾಮದಲ್ಲಿ ‘ಹೊಸ ಗ್ರಾಮೋದ್ಯೋಗ‘ಕ್ಕೆ ಮುನ್ನುಡಿ ಬರೆದರು. ‘ಕಳೆದ ವರ್ಷದ ಜೂನ್‌ನಿಂದ ಅಕ್ಟೋಬರ್‌ವರೆಗೆ ಅಣಬೆ ಕೃಷಿಯಿಂದ ₹1 ಲಕ್ಷ ನಿವ್ವಳ ಲಾಭ ಗಳಿಸಿದ್ದೇನೆ‘ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ತರಕಾರಿ ಕೃಷಿಯಲ್ಲೂ ಯಶಸ್ಸು

ಅಣಬೆ ಕೃಷಿ ಜೊತೆಗೆ, ಸರ್ಕಾರ ನೀಡಿದ್ದ ಜಮೀನಿನನ್ನು ಕೃಷಿ ಮಾಡಿ, ಕುಟುಂಬದ ಬಳಕೆಗಾಗಿ ತರಕಾರಿ ಬೆಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳನ್ನು ಬೆಳೆದು ಮಾರಾಟ ಮಾಡಿ, ಅದರಿಂದ ವಾರ್ಷಿಕ ₹50 ರಿಂದ 60 ಸಾವಿರ ಗಳಿಸುತ್ತಿದ್ದಾರೆ. ಆದಾಯ ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡ ಮಜ್ಹಿ ಅವರು, 2010ರಲ್ಲಿ ₹500 ಕೊಟ್ಟು ಒಂದು ಹೆಣ್ಣು ಮೇಕೆಯನ್ನು ಖರೀದಿಸಿದ್ದರು. ಕ್ರಮೇಣ ಮೇಕೆಯ ಸಂಖ್ಯೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಮೇಕೆಗಳನ್ನು ಮಾರಾಟ ಮಾಡುತ್ತಾ ಹಣ ಗಳಿಸುತ್ತಾರೆ. ಈಗ ಅವರಲ್ಲಿ 45 ಮೇಕೆಗಳಿವೆ.

ಮಜ್ಹಿ ಅವರ ಎಲ್ಲ ಕಾರ್ಯಗಳಿಗೆ ಕುಟುಂಬದ ಸದಸ್ಯರು ಬೆಂಬಲಿಸುತ್ತಾರೆ. ಪತಿ ಜಗಬಂಧು ಮತ್ತು ಮಗಳು ಜಾಗಿನ್ಸೇನಿ ದೈನಂದಿನ ಕೆಲಸಗಳಿಗೆ ನೆರವಾಗುತ್ತಾರೆ. ಒಬ್ಬ ಮಗಳಿಗೆ ಎರಡು ವರ್ಷಗಳ ಹಿಂದೆ ಮದುವೆ ಮಾಡಿದ್ದಾರೆ. ಇನ್ನಿಬ್ಬರು ಪುತ್ರರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಅಣಬೆ ಕೃಷಿ ಮತ್ತು ಇತರೆ ಆದಾಯ ತರುವ ಚಟುವಟಿಕೆಗಳಿಂದ ಗಳಿಸಿದ ಹಣದಿಂದ, ಮಜ್ಹಿ ಅವರು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಪತಿ ಜಗಬಂಧು ಅವರು, ಅಣಬೆ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ, ಅದರ ಆದಾಯದಲ್ಲಿ ಬೈಕ್ ಖರೀದಿಸಿದ್ದಾರೆ.

ಗ್ರಾಮವನ್ನೇ ಪರಿವರ್ತಿಸಿದ ಯಶೋಗಾಥೆ

ಬನದೇ ಮಜ್ಹಿ ಅವರ ‘ಯಶೋಗಾಥೆ‘ಯಿಂದ ಉತ್ತೇಜನಗೊಂಡ ಗ್ರಾಮದ ಇತರೆ 50 ಕುಟುಂಬಗಳು ಅಣಬೆ ಕೃಷಿ ಆರಂಭಿಸಿವೆ. ಅಣಬೆ ಕೃಷಿ ಹೊರತುಪಡಿಸಿ, ತರಕಾರಿ ಕೃಷಿಯಿಂದಲೇ ಪ್ರತಿ ಕುಟುಂಬವು ವರ್ಷಕ್ಕೆ ₹50,000 ಆದಾಯ ಗಳಿಸುತ್ತಿದೆ.

ತರಬೇತಿ ಪಡೆದು ಅಣಬೆ ಕೃಷಿ ಮಾಡುತ್ತಿದ್ದ ಬನದೇ ಮಜ್ಹಿ ಅವರು, ಈಗ ತಾವೇ ಮಾಸ್ಟರ್‌ ಟ್ರೈನರ್ ಆಗಿದ್ದಾರೆ. ಸುತ್ತಾ ಹತ್ತು ಹಳ್ಳಿಗಳಲ್ಲಿ ಅಣಬೆ ಕೃಷಿ ಕುರಿತು ತರಬೇತಿ ನೀಡುತ್ತಿದ್ದಾರೆ.

ಅಣಬೆ ಕೃಷಿ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ 2010ರಲ್ಲಿ ನಬಾರ್ಡ್ ಬನದೇ ಮಜ್ಹಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ‘ಬನದೇ ಅವರು, ಮಹಿಳಾ ಸಬಲೀಕರಣಕ್ಕೊಂದು ನೈಜ ಮಾದರಿ. ಅವರದ್ದು ಬುಡಕಟ್ಟು ಮಹಿಳೆಯ ಬದ್ಧತೆ ಮತ್ತು ಸಮರ್ಪಣೆಯ ಯಶಸ್ಸಿನ ಕಥೆ‘ ಎಂದು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಲಯ ಕುಮಾರ್ ಮೆಹರ್ ಬಣ್ಣಿಸುತ್ತಾರೆ.

ಅಣಬೆ ಕೃಷಿ ಮತ್ತು ತರಕಾರಿ ಕೃಷಿ, ಗ್ರಾಮಸ್ಥರ ಬದುಕನ್ನೇ ಬದಲಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬನದೇ ಮಜ್ಹಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT