ಭಾನುವಾರ, ಡಿಸೆಂಬರ್ 4, 2022
21 °C
ಮಧ್ಯಪ್ರದೇಶದ ರಾಜಗಡ ಜೈಲು ಅಧಿಕಾರಿ ವಿರುದ್ಧ ಆರೋಪ: ಪ್ರಕರಣದ ಕುರಿತು ತನಿಖೆಗೆ ಆದೇಶ

ಮಧ್ಯಪ್ರದೇಶ: ಗಡ್ಡ ಬೋಳಿಸುವಂತೆ ಮುಸ್ಲಿಂ ಸಮುದಾಯದ ಕೈದಿಗಳಿಗೆ ಕಿರುಕುಳ, ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಜಗಡ, ಮಧ್ಯಪ್ರದೇಶ: ‘ಇಲ್ಲಿನ ಜಿಲ್ಲಾ ಕಾರಾಗೃಹದ ಜೈಲರ್‌ ಎಸ್‌.ಎನ್.ರಾಣಾ ಅವರು ಗಡ್ಡ ಬೋಳಿಸುವಂತೆ ತಮಗೆ ಕಿರುಕುಳ ನೀಡಿದ್ದಾರೆ’ ಎಂದು ಮುಸ್ಲಿಂ ಸಮುದಾಯದ ಕೈದಿಗಳು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ಕಲೀಂ ಖಾನ್‌, ತಾಲಿಬ್‌ ಖಾನ್‌, ಆರೀಫ್ ಖಾನ್‌, ಸಲ್ಮಾನ್‌ ಖಾನ್‌ ಯಾನೆ ಭೋಲಾ ಮತ್ತು ವಾಹೀದ್‌ ಖಾನ್‌ ಎಂಬುವವರನ್ನು ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಆರೋಪದಡಿ ಬಂಧಿಸಿ ಸೆಪ್ಟೆಂಬರ್‌ 13ರಂದು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಸೆಪ್ಟೆಂಬರ್‌ 15ರಂದು ಇವರು ಜೈಲಿನಿಂದ ಬಿಡುಗಡೆಯಾಗಿದ್ದರು.

ಜೈಲಿನಿಂದ ಹೊರಬಂದ ನಂತರ ಭೋಪಾಲ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆರೀಫ್‌ ಮಸೂದ್‌ ಅವರನ್ನು ಭೇಟಿ ಮಾಡಿದ್ದ ಇವರು ಜೈಲಿನಲ್ಲಿ ನಡೆದ ಸಂಗತಿ ವಿವರಿಸಿದ್ದರು. ಅವರ ಸಮಸ್ಯೆ ಆಲಿಸಿದ್ದ ಆರೀಫ್‌, ಐವರೊಂದಿಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರನ್ನು ಭೇಟಿ ಮಾಡಿ ಈ ಸಂಬಂಧ ದೂರು ನೀಡಿದ್ದರು.

‘ಜೈಲು ಅಧಿಕಾರಿ ರಾಣಾ, ಗಡ್ಡ ಬೋಳಿಸುವಂತೆ ಬಲವಂತಪಡಿಸಿದ್ದಲ್ಲದೇ ಐವರನ್ನು ನಿಂದಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದರು.

‘ಕೈದಿಗಳ ಮನವಿ ಮೇರೆಗೆ ಅಧಿಕಾರಿಗಳು ಗಡ್ಡ ಬೋಳಿಸುವ ವ್ಯವಸ್ಥೆ ಮಾಡಿರಬಹುದು. ಅಂತಹ ಪದ್ಧತಿ ಜೈಲಿನಲ್ಲಿ ಹಿಂದಿನಿಂದಲೂ ಇದೆ. ತಮ್ಮ ನಂಬಿಕೆಗೆ ಅನುಗುಣವಾಗಿ ಗಡ್ಡ ಬಿಡುವ, ಕೇಶ ವಿನ್ಯಾಸ ಹೊಂದುವ ಸ್ವಾತಂತ್ರ್ಯ ಕೈದಿಗಳಿಗೆ ಇದೆ. ಗಡ್ಡ ಬಿಟ್ಟಿರುವ ಮುಸ್ಲಿಂ ಸಮುದಾಯದ 10 ಮಂದಿ ಕೈದಿಗಳು ಈಗಾಗಲೇ ಜೈಲಿನಲ್ಲಿ ಇದ್ದಾರೆ’ ಎಂದು ರಾಣಾ ಹೇಳಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ಜೈಲು ಅಧಿಕಾರಿಯ ವರ್ತನೆಯನ್ನು ಖಂಡಿಸಿದ್ದಾರೆ.

‘ಐವರನ್ನು ಠಾಣಾ ಜಾಮೀನಿನ ಮೇಲೆಯೇ ಬಿಡುಗಡೆ ಮಾಡಬಹುದಿತ್ತು. ಆದರೆ ಅಧಿಕಾರಿಗಳು ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಅಲ್ಲಿ ಅವರಿಗೆ ಕಿರುಕುಳ ನೀಡಲಾಗಿದೆ. ಗಡ್ಡ ಬಿಟ್ಟ ಮುಸ್ಲಿಮರನ್ನೆಲ್ಲಾ ಪಾಕಿಸ್ತಾನದವರೆಂದು ಏಕೆ ಭಾವಿಸುತ್ತೀರಿ. ಬಿಜೆಪಿಯ ಹಲವರೂ ಗಡ್ಡ ಬಿಟ್ಟಿದ್ದಾರೆ. ಅವರ ಜೊತೆಯೂ ಹೀಗೆ ನಡೆದುಕೊಳ್ಳಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು