ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನಗತಿಯ ಲಸಿಕಾ ಅಭಿಯಾನ ಸಲ್ಲದು: ವಿಜ್ಞಾನಿಗಳ ಎಚ್ಚರಿಕೆ

ರಾಜಕೀಯ ಪಕ್ಷಗಳ ಧೋರಣೆ, ರೂಪಾಂತರ ವೈರಸ್‌ನಿಂದ ಕೋವಿಡ್‌–19 ವೇಗವಾಗಿ ಹಬ್ಬಲು ಕಾರಣ
Last Updated 11 ಏಪ್ರಿಲ್ 2021, 9:08 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆ, ಸಾರ್ವಜನಿಕ ಕಾರ್ಯಕ್ರಮಗಳು,ನಿಧಾನಗತಿಯ ಲಸಿಕಾ ಅಭಿಯಾನ ಮತ್ತು ಎಚ್ಚರಿಕೆಯನ್ನು ಕಡೆಗಣಿಸಿದ್ದರಿಂದ ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ದಿಢೀರ್‌ ಹೆಚ್ಚಲು ಪ್ರಮುಖ ಕಾರಣಗಳು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ತಹಬದಿಗೆ ಬಂದಿದ್ದ ಕೋವಿಡ್‌–19 ಪ್ರಕರಣಗಳು ಹೆಚ್ಚಾಗಲು ಕಾರಣಗಳ ಬಗ್ಗೆ ವಿಜ್ಞಾನಿಗಳು ವಿಶ್ಲೇಷಣೆ ನಡೆಸುತ್ತಿದ್ದಾರೆ. ಕಳೆದ ವರ್ಷ ಕಾಣಿಸಿಕೊಂಡಿದ್ದ ಸೋಂಕಿಗಿಂತಲೂ ಎರಡನೇ ಅಲೆಯು ತೀವ್ರ ಗತಿಯಲ್ಲಿ ಹಬ್ಬುತ್ತಿದೆ.

‘ಕೋವಿಡ್‌–19 ನಿಯಮಗಳನ್ನು ಪಾಲಿಸುತ್ತಿಲ್ಲ. ಲಸಿಕೆ ಹಾಕಿಸಿಕೊಂಡ ಬಳಿಕವೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಮತ್ತು ನಿಧಾನಗತಿಯಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಂಡಿರುವುದರಿಂದ ಪ್ರಕರಣಗಳು ಹೆಚ್ಚಾಗಲು ಕಾರಣ’ ಎಂದು ವೈರಾಣು ತಜ್ಞರಾದ ಶಹೀದ್‌ ಜಮೀಲ್‌ ಮತ್ತು ಟಿ. ಜಾಕೋಬ್‌ ಅಭಿಪ್ರಾಯಪಟ್ಟಿದ್ದಾರೆ.

‘ವೈರಸ್‌ನ ರೂಪಾಂತರ ಮತ್ತು ಲಸಿಕೆ ಅಭಿಯಾನ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ಅಂಶಗಳ ಮೇಲೆ ಕೋವಿಡ್‌–19 ಮುಂದಿನ ದಿನಗಳಲ್ಲಿ ಹೇಗೆ ಹಬ್ಬುತ್ತದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ಹಬ್ಬಲು ವೈರಸ್‌ನ ರೂಪಾಂತರವೂ ಪ್ರಮುಖ ಕಾರಣವಾಗಿದೆ. ಪಂಜಾಬ್‌ನಲ್ಲಿ ಕಾಣಿಸಿಕೊಂಡಿರುವ ಶೇಕಡ 80ರಷ್ಟು ಪ್ರಕರಣಗಳಲ್ಲಿ ಬ್ರಿಟನ್‌ನ ರೂಪಾಂತರ ವೈರಸ್‌ ಕಾಣಿಸಿಕೊಂಡಿದೆ ಎಂದು ಜಮೀಲ್‌ ಹೇಳಿದ್ದಾರೆ.

ಆದರೆ, ಕೋವಿಡ್‌–19 ನಿಯಮಗಳನ್ನು ಪಾಲಿಸದಿರುವುದೊಂದೇ ಸೋಂಕು ಹೆಚ್ಚಲು ಪ್ರಮುಖ ಕಾರಣವಲ್ಲ ಎಂದು ತಮಿಳುನಾಡಿನ ಕ್ರಿಶ್ಚಿಯನ್‌ ವೈದ್ಯಕೀಯ ಕಾಲೇಜಿನ ವೈರಾಣು ಪ್ರಾಧ್ಯಾಪಕ ಜಾನ್‌ ಅಭಿಪ್ರಾಯಪಟ್ಟಿದ್ದಾರೆ.

‘ಎಲ್ಲ ರಾಜಕೀಯ ಪಕ್ಷಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕಡೆಗಣಿಸಿದವು. ಜತೆಗೆ ಎಲ್ಲ ಧಾರ್ಮಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಸಹ ನಿರ್ಲಕ್ಷ್ಯ ಧೋರಣೆ ತಳೆದರು. ಜತೆಗೆ, ಎಲ್ಲ ಸಿಬ್ಬಂದಿಗೆ ಲಸಿಕೆ ಹಾಕದೆಯೇ ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸಲಾಗಿದೆ. ಹೀಗಾಗಿ, ಎರಡನೇ ಅಲೆ ವ್ಯಾಪಕವಾಗಿ ಹಬ್ಬಲು ಶುರುವಾಗಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಸೋಂಕು ಹೆಚ್ಚಿದ ಸ್ಥಳಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ, ಚುನಾವಣೆಗಳಿದ್ದ ಕಾರಣ ಯಾವುದೇ ನಾಯಕರಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಬೇಕಿರಲಿಲ್ಲ. ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಚುನಾವಣೆ ನಡೆಸುವಾಗ ಅಪಾರ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಸರ್ಕಾರ ಲಸಿಕಾ ಅಭಿಯಾನವನ್ನು ಬಹಳ ತಡವಾಗಿ ಆರಂಭಿಸಿತು. ಜತೆಗೆ, ನಿಧಾನಗತಿಯಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಪಾರ ಲಸಿಕೆಯನ್ನು ಸಹ ವ್ಯರ್ಥ ಮಾಡಲಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸೋಂಕು ಹೆಚ್ಚಿರುವ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕು. ಉಳಿದ ರಾಜ್ಯಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಬಹುದು. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆ ಮತ್ತು ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮೋದನೆ ನೀಡಬಹುದು. ಈ ಎರಡು ಲಸಿಕೆಗಳಿಗೆ ಇತರ ದೇಶಗಳು ಅನುಮೋದನೆ ನೀಡಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT