ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಬಿಜೆಪಿ – ಟಿಎಂಸಿ ಸಂಘರ್ಷ ತೀವ್ರ, ಕೇಂದ್ರದ ಸಮನ್ಸ್‌ಗೆ ತಿರಸ್ಕಾರ

Last Updated 11 ಡಿಸೆಂಬರ್ 2020, 20:36 IST
ಅಕ್ಷರ ಗಾತ್ರ

ಕೋಲ್ಕತ್ತ : ಕೇಂದ್ರದ ಎನ್‌ಡಿಎ ಸರ್ಕಾರ ಮತ್ತು ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ.

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರು (ಡಿಜಿಪಿ) ಸೋಮವಾರ (ಡಿ.14) ಹಾಜರಾಗುವಂತೆ ಕೇಂದ್ರ ಗೃಹ ಸಚಿವಾಲಯವು ಸಮನ್ಸ್ ನೀಡಿತ್ತು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇತರ ಮುಖಂಡರು ಸಂಚರಿಸುತ್ತಿದ್ದ ವಾಹನ ಸಾಲಿನ ಮೇಲೆ ಗುರುವಾರ ನಡೆದ ಕಲ್ಲೆಸೆತದ ಪ್ರಕರಣದ ಬಗ್ಗೆ ವಿವರಣೆ ಪಡೆಯಲು ಈ ಸಮನ್ಸ್ ನೀಡಲಾಗಿತ್ತು. ಆದರೆ, ಅಧಿಕಾರಿಗಳನ್ನು ದೆಹಲಿಗೆ ಕಳುಹಿಸದಿರಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

‘ಇದೇ 14ರಂದು ಕರೆದಿರುವ ಸಭೆಗೆ ಹಾಜರಾಗುವುದರಿಂದ ರಾಜ್ಯದ ಅಧಿಕಾರಿಗಳಿಗೆ ವಿನಾಯಿತಿ ಕೊಡಬೇಕು’ ಎಂದು ಪಶ್ಚಿಮ ಬಂಗಾಳ ಮುಖ್ಯಕಾರ್ಯದರ್ಶಿಯವರು ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಅದಲ್ಲದೆ, ‘ಝಡ್‌ ಶ್ರೇಣಿಯ ಭದ್ರತೆ ಇದ್ದ ವ್ಯಕ್ತಿಯು ಗುರುವಾರ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಅವರ ಭದ್ರತೆಗೆ ರಾಜ್ಯ ಸರ್ಕಾರವು ವ್ಯಾಪಕ ವ್ಯವಸ್ಥೆಗಳನ್ನು ಮಾಡಿತ್ತು. ಅವರಿಗೆ ಸಂಚರಿಸಲು ಗುಂಡು ನಿರೋಧಕ ವಾಹನ ಮತ್ತು ಬೆಂಗಾವಲು ವಾಹನ ನೀಡಲಾಗಿತ್ತು’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಹಲ್ಲೆ ಪೂರ್ವಯೋಜಿತ: ಬಿಜೆಪಿ

ನಡ್ಡಾ ಅವರ ವಾಹನದ ಮೇಲೆ ನಡೆದ ದಾಳಿಯು ಯೋಜಿತ ಎಂದು ಬಿಜೆಪಿ ಶುಕ್ರವಾರ ಹೇಳಿದೆ.

ನಡ್ಡಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್‌ ಮತ್ತು ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ ಅವರು ಸಂಚರಿಸುತ್ತಿದ್ದ ವಾಹನಗಳ ಸಾಲಿನ ಮೇಲೆ ಡೈಮಂಡ್‌ ಹಾರ್ಬರ್ ಪ್ರದೇಶದಲ್ಲಿ ಗುರುವಾರ ಕಲ್ಲೆಸೆಯಲಾಗಿತ್ತು. ರಾಯ್‌ ಮತ್ತು ವಿಜಯವರ್ಗೀಯ ಅವರು ಕಲ್ಲೆಸೆತದಿಂದ ಗಾಯಗೊಂಡಿದ್ದರು.

ಮಮತಾ ತಾಟಕಿ: ಶಾಸಕ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ತಾಟಕಿ’ ಎಂದು ಶಾಸಕ ಸುರೇಂದ್ರ ಸಿಂಗ್‌ ಹೇಳಿದ್ದಾರೆ. ಅವರು ಭಯೋತ್ಪಾದಕ ಮನಸ್ಥಿತಿ ಹೊಂದಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಮುಂದಿನ ಚುನಾವಣೆಯ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಲಿದೆ. ಹಾಗಾಗಿ ತಾಟಕಿಯ ಅಧ್ಯಾಯ ಮುಗಿಯಿತು ಎಂದು ಸಿಂಗ್‌ ಹೇಳಿದ್ದಾರೆ.

ರಾಜಕೀಯದಲ್ಲಿ ‘ರಾಷ್ಟ್ರವಿರೋಧಿ’ ಶಕ್ತಿಗಳ ನೆರವು ಪಡೆಯುವ ಮಮತಾ ಅವರಿಗೆ ನಡ್ಡಾ ಅವರ ಮೇಲೆ ದಾಳಿ ನಡೆಸುವುದು ‘ಸಣ್ಣ ವಿಷಯ’ ಎಂದೂ ಸಿಂಗ್‌ ಹೇಳಿದ್ದಾರೆ. ಸಿಂಗ್‌ ಅವರು ಪ್ರತಿಸ್ಪರ್ಧಿಗಳ ವಿರುದ್ಧ ಈ ಹಿಂದೆಯೂ ಅವಹೇಳನಕಾರಿ ಮಾತುಗಳನ್ನು ಆಡಿದ್ದರು.

ಸ್ಥಿತಿ ಅಪಾಯಕಾರಿ: ರಾಜ್ಯಪಾಲ

ರಾಜ್ಯದವರು ಮತ್ತು ಹೊರಗಿನವರು ಎಂಬ ಅಪಾಯಕಾರಿ ಆಟವು ರಾಜ್ಯದಲ್ಲಿ ನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನ್ಕರ್‌ ಹೇಳಿದ್ದಾರೆ.

‘ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂಬುದನ್ನು ಕಂಡುಕೊಂಡ ಕಾರಣ ಸಾಂವಿಧಾನಿಕ ಕರ್ತವ್ಯದಂತೆ ಕೇಂದ್ರಕ್ಕೆ ವರದಿ ಕಳುಹಿಸಿದ್ದೇನೆ. ರಾಜ್ಯದಲ್ಲಿ ನಡೆದ ಘಟನೆಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಪೂರಕವಲ್ಲ, ಕಾನೂನು ಮತ್ತು ಸುವ್ಯವಸ್ಥೆಗೆ ಮಾರಕ. ಇಂತಹ ಘಟನೆಗಳು ಸಾಂವಿಧಾನಿಕ ಮಾನದಂಡಗಳ ದಮನದ ಮುನ್ಸೂಚನೆ’ ಎಂದು ರಾಜಭವನದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

ಧನ್ಕರ್‌ ಹೇಳಿಕೆಗೆ ಟಿಎಂಸಿ ಕಟುವಾಗಿಯೇ ಪ್ರತಿಕ್ರಿಯೆ ನೀಡಿದೆ. ‘ರಾಜ್ಯಪಾಲರು ದಿನವೂ ಮಾಧ್ಯಮಗೋಷ್ಠಿ ನಡೆಸುತ್ತಾರೆ. ಅವರ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ. ಅವರು ಬಿಜೆಪಿಯ ತುತ್ತೂರಿ ಎಂದಷ್ಟೇ ನಾವು ಹೇಳಬಹುದು’ ಎಂಬುದು ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರ ಪ್ರತಿಕ್ರಿಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT