ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಬಿಜೆಪಿಗೆ ಜಯ, ಕಾಂಗ್ರೆಸ್‌ಗೆ ಸಮಾಧಾನ, ಎಸ್‌ಪಿ, ಎಎಪಿಗೆ ಆಘಾತ

Last Updated 27 ಜೂನ್ 2022, 0:59 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಆಮ್ ಆದ್ಮಿ ಪಕ್ಷ(ಎಎಪಿ) ಆಘಾತ ಅನುಭವಿಸಿವೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ವಿರುದ್ಧ ಬಿಜೆಪಿ ಅಭ್ಯರ್ಥಿಗಳು ಹಾಗೂ ಪಂಜಾಬ್‌ನಲ್ಲಿ ಎಎಪಿ ಅಭ್ಯರ್ಥಿ ವಿರುದ್ಧ ಅಕಾಲಿದಳ (ಅಮೃತಸರ) ಅಭ್ಯರ್ಥಿ ಗೆಲುವುದಾಖಲಿಸಿದ್ದಾರೆ.

ಎಎಪಿಯ ಸಂಗ್ರೂರ್ ಕ್ಷೇತ್ರವು ಅಕಾಲಿದಳ (ಅಮೃತಸರ) ಪಾಲಾಗಿದ್ದರೆ, ತನ್ನ ಭದ್ರನೆಲೆಗಳಾದ ಆಜಂಗಡ ಹಾಗೂ ರಾಂಪುರಕ್ಷೇತ್ರಗಳನ್ನು ಎಸ್‌ಪಿ ಭಾರಿ ಮತಗಳ ಅಂತರದಿಂದ ಕಳೆದುಕೊಂಡಿದೆ.

ವಿಧಾನಸಭಾ ಉಪಚುನಾವಣೆ ನಡೆದ ಏಳು ಕ್ಷೇತ್ರಗಳ ಪೈಕಿ ತ್ರಿಪುರಾದಲ್ಲಿ 3 ಕಡೆ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪಕ್ಷವು ತ್ರಿಪುರಾ ಹಾಗೂ ಜಾರ್ಖಂಡ್‌ನಲ್ಲಿ ಒಂದೊಂದು ಕ್ಷೇತ್ರದಲ್ಲಿ ಜಯ ಗಳಿಸಿದೆ. ದೆಹಲಿಯಲ್ಲಿ ಎಎಪಿ, ಆಂಧ್ರಪ್ರದೇಶ ದಲ್ಲಿ ವೈಎಸ್‌ಆರ್‌ಸಿ ತಲಾ ಒಂದೊಂದು ಕ್ಷೇತ್ರವನ್ನು ಗೆದ್ದುಕೊಂಡಿವೆ.

ದೆಹಲಿಯ ರಾಜಿಂದರ್ ನಗರ ವಿಧಾನಸಭಾ ಕ್ಷೇತ್ರವನ್ನು ಎಎಪಿ ಗೆದ್ದುಕೊಂಡಿದ್ದರೂ, ಸಂಗ್ರೂರ್‌ ಲೋಕಸಭಾ ಕ್ಷೇತ್ರದ ಮತದಾರರು ಪಕ್ಷಕ್ಕೆ ಮಣೆ ಹಾಕಿಲ್ಲ.

ಒಂದನೇ ಪುಟದಿಂದ...

ರಾಜಿಂದರ್ ನಗರದಿಂದ ಆಯ್ಕೆಯಾಗಿದ್ದ ರಾಘವ್ ಚಡ್ಡಾ ಅವರನ್ನು ಎಎಪಿ ರಾಜ್ಯಸಭೆಗೆ ಕಳುಹಿಸಿದ್ದರಿಂದ ಈ ಕ್ಷೇತ್ರ ತೆರವಾಗಿತ್ತು. ಸಂಗ್ರೂರ್ ಲೋಕಸಭಾ ಸದಸ್ಯರಾಗಿದ್ದ ಭಗವಂತ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರಿಂದ ಅವರು ರಾಜೀನಾಮೆ ನೀಡಿದ್ದರು.

ಈ ಉಪಚುನಾವಣೆಯ ಬಳಿಕ ಲೋಕಸಭೆಯಲ್ಲಿ ಪಕ್ಷವನ್ನು ಪ್ರತಿನಿಧಿಸುವ ಒಬ್ಬ ಸಂಸದರೂ ಇಲ್ಲ.

ಸಂಗ್ರೂರ್ ಕ್ಷೇತ್ರವನ್ನು ಎಎಪಿ ಕಳೆದುಕೊಂಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ಸಹಿಸುವುದಿಲ್ಲ ಎಂಬಸಂದೇಶವನ್ನು ಮತದಾರರು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಮೂರು ತಿಂಗಳ ಹಿಂದೆಯಷ್ಟೇ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 117ರ ಪೈಕಿ 92 ಕ್ಷೇತ್ರಗಳನ್ನು ಗೆದ್ದುಕೊಂಡು ಬೀಗಿದ್ದ ಎಎಪಿಗೆ ಈ ಫಲಿತಾಂಶ ಆಘಾತ ನೀಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ ತನ್ನ ಎರಡು ಭದ್ರ ನೆಲೆಗಳನ್ನು ಬಿಜೆಪಿಗೆ ಒಪ್ಪಿಸಿದೆ.

ವಿಧಾನಸಭೆಗೆ ಆಜಂಗಡದಿಂದ ಆಯ್ಕೆಯಾಗಿದ್ದ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ರಾಂಪುರದಿಂದ ಆಯ್ಕೆಯಾಗಿದ್ದ ಹಿರಿಯ ನಾಯಕ ಅಜಂ ಖಾನ್‌ ರಾಜೀನಾಮೆಯಿಂದ ಈ ಕ್ಷೇತ್ರಗಳು ತೆರವಾಗಿದ್ದವು. ಭೋಜಪುರಿ ನಟ ಬಿಜೆಪಿಯ ದಿನೇಶ್ ಲಾಲ್ ಯಾದವ್ ನಿರಹುಆ ಅವರು ಆಜಂಗಡದಲ್ಲಿ, ಬಿಜೆಪಿಯ ಘನಶ್ಯಾಮ್‌ ಸಿಂಗ್‌ ಲೋಧಿ ಅವರುರಾಂಪುರದಲ್ಲಿ ಗೆದ್ದಿದ್ದಾರೆ.

ತ್ರಿಪುರಾದ ಮೂರು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಬರದೋಲಿ ಕ್ಷೇತ್ರದಲ್ಲಿ ಆರಿಸಿ ಬಂದಿದ್ದಾರೆ. ವಿಪ್ಲವ್ ದೇವ್ ಅವರ ಬದಲಿಗೆ ಮುಖ್ಯಮಂತ್ರಿಯಾಗಿ ಮಾಣಿಕ್ ಸಹ ಅವರನ್ನು ಆಯ್ಕೆ ಮಾಡಲಾಗಿತ್ತು. ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ನ ಶಿಲ್ಪಿ ನೇಹಾ ಟಿಕ್ರೆ, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ ಎಂ. ವಿಕ್ರಂ ರೆಡ್ಡಿ ಗೆದ್ದಿದ್ದಾರೆ.

ವಿಕ್ರಂ ಅವರು 1.2 ಲಕ್ಷ ಮತಗಳನ್ನು ಪಡೆದಿದ್ದು, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭರತ್ ಕುಮಾರ್ ಅವರು ಪಡೆದ ಮತಗಳು 19,332 ಮಾತ್ರ.

ಈ ಕ್ಷೇತ್ರದಲ್ಲಿ ತೆಲುಗು ದೇಶಂ ಪಕ್ಷವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಈ ಪಕ್ಷದ ನೀತಿಯಾಗಿದೆ.

ಲೋಕಸಭೆ ಉಪಚುನಾವಣೆ ಫಲಿತಾಂಶ

ಕ್ಷೇತ್ರ;ಅಭ್ಯರ್ಥಿ;ಗೆದ್ದ ಪಕ್ಷ

ಸಂಗ್ರೂರ್ (ಪಂಜಾಬ್);ಸಿಮ್ರನ್‌ಜಿತ್ ಸಿಂಗ್ ಮಾನ್;ಅಕಾಲಿದಳ

ಅಜಂಗಡ (ಉ.ಪ್ರ.);ದಿನೇಶ್ ಲಾಲ್ ಯಾದವ್ ನಿರಹುಆ;ಬಿಜೆಪಿ

ರಾಂಪುರ (ಉ.ಪ್ರ.);ಘನಶ್ಯಾಮ್ ಸಿಂಗ್ ಲೋಧಿ;ಬಿಜೆಪಿ

ವಿಧಾನಸಭೆ ಉಪಚುನಾವಣೆ ಫಲಿತಾಂಶ

ಆತ್ಮಕಾರ್ (ಆಂಧ್ರ);ಎಂ. ವಿಕ್ರಂ ರೆಡ್ಡಿ;ವೈಎಸ್‌ಆರ್‌ಸಿ

ಮಂದರ್ (ಜಾರ್ಖಂಡ್);ಶಿಲ್ಪಿ ನೇಹಾ ಟಿರ್ಕಿ;ಕಾಂಗ್ರೆಸ್

ರಾಜಿಂದರ್ ನಗರ (ದೆಹಲಿ);ದುರ್ಗೇಶ್ ಪಾಠಕ್;ಎಎಪಿ

ಅಗರ್ತಲಾ (ತ್ರಿಪುರಾ);ಸುದೀಪ್ ರಾಯ್ ಬರ್ಮನ್;ಕಾಂಗ್ರೆಸ್

ಜುಬಾರಾಜ್‌ನಗರ (ತ್ರಿಪುರಾ);ಮಾಲಿನಾ ದೇವನಾಥ್;ಬಿಜೆಪಿ

ಸುರ್ಮಾ (ತ್ರಿಪುರಾ);ಸ್ವಪ್ನಾ ದಾಸ್;ಬಿಜೆಪಿ

ಟೌನ್ ಬಾರದೋಲಿ (ತ್ರಿಪುರಾ);ಮಾಣಿಕ್ ಸಹಾ;ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT