ಮಂಗಳವಾರ, ಜನವರಿ 19, 2021
21 °C

ಅರ್ಧ ಪ್ಯಾಂಟ್ ಧರಿಸಿ ಭಾಷಣ ಮಾಡುವುದು ರಾಷ್ಟ್ರೀಯತೆಯಲ್ಲ: ಸಚಿನ್ ಪೈಲಟ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಜೈಪುರ (ರಾಜಸ್ಥಾನ): ನಾಗ್ಪುರದಲ್ಲಿ ನಿಂತುಕೊಂಡು ಅರ್ಧ ಪ್ಯಾಂಟ್ ಧರಿಸಿ ಫೋನ್‌ನಲ್ಲಿ ಭಾಷಣಗಳನ್ನು ಮಾಡುವುದು ರಾಷ್ಟ್ರೀಯತೆಯಲ್ಲ ಬದಲಾಗಿ ರೈತರ ಕಲ್ಯಾಣ ಬಗ್ಗೆ ಆಗಿರಬೇಕು ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಆರೋಪ ಮಾಡಿದರು.

ರೈತರ ಕಲ್ಯಾಣದ ಬಗ್ಗೆ ಮಾತನಾಡಿದರೆ ಅದುವೇ ನಿಜವಾದ ರಾಷ್ಟ್ರೀಯತೆ. ರಾಷ್ಟ್ರೀಯತೆ ಅರ್ಧ ಪ್ಯಾಂಟ್ ಧರಿಸಿ ನಾಗ್ಪುರದಿಂದ ಫೋನ್ ಭಾಷಗಳನ್ನು ಮಾಡುವುದಲ್ಲ ಎಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಆರ್‌ಎಸ್‌ಎಸ್ ಹೆಸರನ್ನು ಉಚ್ಚರಿಸದೆಯೇ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದರು.

ಅದೇ ಹೊತ್ತಿಗೆ ಕೇಂದ್ರ ಸರಕಾರವು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸಚಿನ್ ಪೈಲಟ್ ಆಗ್ರಹಿಸಿದರು. ಇದು ಕೇಂದ್ರ ಸರಕಾರದಿಂದ ಬಗೆಹರಿಸಲು ಸಾಧ್ಯವಾಗದಷ್ಟು ಸಂಕೀರ್ಣ ಸಮಸ್ಯೆಯಲ್ಲ. ಈ ಕಾನೂನಿನಲ್ಲಿ ನಾವು ಎಂಎಸ್‌ಪಿ ನಿಬಂಧನೆಯನ್ನು ಸೇರಿಸುತ್ತಿದ್ದೇವೆ ಮತ್ತು ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುತ್ತೇವೆ. ಕೆಲವು ಕಾಯ್ದೆಗಳನ್ನು ಹಿಂಪಡೆಯುವುದರಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅವರು ಕಾನೂನುಗಳನ್ನು ಹಿಂತೆಗೆದುಕೊಂಡರೆ ನಾವು ಧನ್ಯವಾದ ಸಲ್ಲಿಸಲಿದ್ದೇವೆ. ಆದರೆ ಅವರು ನಿರ್ಧಾರದಲ್ಲಿ ಅಚಲವಾಗಿದ್ದು, ಕಾನೂನು ರದ್ದುಗೊಳಿಸುವುದಿಲ್ಲ ಎಂದು ಟೀಕೆ ಮಾಡಿದರು.

ಇದನ್ನೂ ಓದಿ: 

ಕಾಯ್ದೆಯಲ್ಲಿ ತಿದ್ದುಪಡಿ ಮಾಡುವುದು, ಅವುಗಳನ್ನು ಹಿಂತೆಗೆದುಕೊಳ್ಳುವುದು ಅಥವಾ ತಪ್ಪನ್ನು ಒಪ್ಪಿಕೊಳ್ಳುವುದು ಇವೆಲ್ಲವೂ ನಾಯಕರ ವರ್ಚಸ್ಸನ್ನು ಹೆಚ್ಚಿಸುತ್ತದೆ. ಇದು ನಾಚಿಕೆಗೇಡಿನ ವಿಷಯವಲ್ಲ ಎಂದು ಸಲಹೆ ಮಾಡಿದರು.

ತಮ್ಮ ಹಕ್ಕುಗಳಿಗಾಗಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾವೋವಾದಿಗಳು, ಪತ್ಯೇಕತಾವಾದಿಗಳು, ಉಗ್ರರು ಎಂದು ಕರೆಯಲಾಗುತ್ತದೆ. ಕೇಂದ್ರ ಸರಕಾರದಲ್ಲಿ ರೈತರ ಕಲ್ಯಾಣಕ್ಕಾಗಿ ಯೋಚಿಸುವ ಮುಖಂಡರಿಲ್ಲದ ಕಾರಣ ಈ ರೀತಿಯಾಗಿ ಯೋಚಿಸುತ್ತಾರೆ. ರೈತರಿಗೆ ಬೆಂಬಲ ಸೂಚಿಸುವುದು ರಾಜಕೀಯವಾದರೆ ನಾವದನ್ನು ಮಾಡುತ್ತಿದ್ದೇವೆ. ನಾವು ರೈತರನ್ನು ಬೆಂಬಲಿಸುತ್ತಿದ್ದು, ಅದನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.

ಕೇಂದ್ರ ಸರಕಾರವು ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜೊತೆ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿದ್ದು, ಕೊರೆಯುವ ಚಳಿ ಹಾಗೂ ಮಳೆಯ ಮಧ್ಯೆಯೂ ರೈತರು ಹೋರಾಟವನ್ನು ಮುಂದುವರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು