ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವೆ ವಿರುದ್ಧ ಟೀಕೆ: ಕಮಲ್‌ನಾಥ್ ಅವರಿಂದ ವಿವರಣೆ ಕೋರಿದ ಮಹಿಳಾ ಆಯೋಗ

ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೂ ಪತ್ರ ಬರೆದ ಆಯೋಗ
Last Updated 19 ಅಕ್ಟೋಬರ್ 2020, 12:41 IST
ಅಕ್ಷರ ಗಾತ್ರ

ನವದೆಹಲಿ: ಸಚಿವೆ ಇಮಾರ್ತಿ ದೇವಿ ಅವರನ್ನು ‘ಐಟಂ’ ಎಂದು ಟೀಕಿಸಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರಿಂದ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ವಿವರಣೆ ಕೋರಿದೆ.

ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗಕ್ಕೂ ಮಹಿಳಾ ಆಯೋಗ ಮನವಿ ಮಾಡಿದೆ.

‘ಕಾಂಗ್ರೆಸ್ ಮುಖಂಡ ನೀಡಿರುವ ಈ ಬೇಜವಾಬ್ದಾರಿಯುತ ಮತ್ತು ಅವಹೇಳನಕಾರಿ ಹೇಳಿಕೆಯನ್ನು ಆಯೋಗವು ಬಲವಾಗಿ ಖಂಡಿಸುತ್ತದೆ. ವಿಡಿಯೊದಲ್ಲಿ ಬಳಸಲಾದ ಪದಗಳು ಮಹಿಳೆಯ ಘನತೆಗೆ ಕುಂದುಂಟು ಮಾಡುವುದಲ್ಲೇ, ಅಗೌರವ ತೋರಿಸುತ್ತವೆ’ ಎಂದೂ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರಬೇಕೆನ್ನುವ ಆಶಯದಲ್ಲಿ ನಾವಿರುವಾಗ, ಮಹಿಳಾ ನಾಯಕರ ಬಗೆಗಿನ ಅಗೌರವ ಸೂಚಕವಾದ ಹೇಳಿಕೆಗಳು ಶೋಭೆ ತರುವುದಿಲ್ಲ. ಅದರಲ್ಲೂ ಅಂಥದ್ದೊಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಹೀಗೆ ಮಾತನಾಡುವುದು ದುರದೃಷ್ಟಕರ’ ಎಂದು ಆಯೋಗ ವಿಷಾದಿಸಿದೆ.

ಏನಿದು ಘಟನೆ?: ಗ್ವಾಲಿಯರ್‌ ದಬ್ರಾ ಪಟ್ಟಣದಲ್ಲಿ ಭಾನುವಾರ ನಡೆದ ಚುನಾವಣಾ ಸಭೆಯಲ್ಲಿ, ಕಮಲ್‌ನಾಥ್ ಅವರು ‘ಎದುರಾಳಿ ‘ಐಟಂ’ ಅಭ್ಯರ್ಥಿಗೆ (ಬಿಜೆಪಿಯ ಇಮಾರ್ತಿ ದೇವಿ) ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಯು ಸರಳ ವ್ಯಕ್ತಿ’ ಎಂದು ಹೇಳಿದ್ದರು.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಇಮಾರ್ತಿ ದೇವಿ ಸೇರಿದಂತೆ 21 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈ ಪ್ರಕ್ರಿಯೆಯಲ್ಲಿ ಕಮಲ್‌ನಾಥ್ ಸರ್ಕಾರವು ಉರುಳಿಬಿದ್ದಿತ್ತು.

ಮಧ್ಯಪ್ರದೇಶದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ. ನ. 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT