ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೀಕರ್‌ ಹುದ್ದೆಗೆ ಆರ್‌ಜೆಡಿ ಸ್ಪರ್ಧೆ: ಬಿಹಾರದಲ್ಲಿ ಮತ್ತೊಂದು ಬಲಾಬಲ ಪರೀಕ್ಷೆ

Last Updated 24 ನವೆಂಬರ್ 2020, 10:50 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಧಾನಸಭೆಯ ಸ್ಪೀಕರ್‌ ಸ್ಥಾನಕ್ಕೆ ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಆರ್‌ಜೆಡಿ ನೇತ್ವದ ಮಹಾಗಠಬಂಧನದಿಂದ ಅಭ್ಯರ್ಥಿಗಳನ್ನು ಹಾಕಲಾಗಿದೆ. ಈ ಮೂಲಕ ಬಿಹಾರದಲ್ಲಿ ಮತ್ತೊಂದು ಬಲಾಬಲ ಪರೀಕ್ಷೆ ನಿರೀಕ್ಷಿಸಲಾಗಿದೆ

ಸ್ಪೀಕರ್‌ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿದ್ದು, ಎನ್‌ಡಿಎ ಪರವಾಗಿ ಬಿಜೆಪಿಯ ಹಿರಿಯ ಮುಖಂಡ ವಿಜಯ್ ಕುಮಾರ್ ಸಿನ್ಹಾ ಮತ್ತು ಐದು ಪಕ್ಷಗಳ ಮಹಾಗಠಬಂಧನದಿಂದ ಆರ್‌ಜೆಡಿಯ ಅವಧ್ ಬಿಹಾರಿ ಚೌಧರಿ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ವಿಧಾನಸಭಾ ಕಾರ್ಯದರ್ಶಿ ತಿಳಿಸಿದ್ದಾರೆ.

ಚೌಧರಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, 'ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಎನ್‌ಡಿಎ ತನ್ನ ಅಭ್ಯರ್ಥಿಯನ್ನು ನಿರ್ಧರಿಸುವ ಮೊದಲೇ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ,' ಎಂದರು.

'ಐದು ಬಾರಿ ಶಾಸನಸಭೆಗೆ ಆಯ್ಕೆಯಾಗಿರುವ ಚೌಧರಿ, 1980ರಿಂದಲೂ ವಿಧಾನಸಭೆ ಸದಸ್ಯರು. ವಿಧಾನಸಭೆಯ ನಡಾವಳಿಗಳನ್ನು ಅವರು ಅತ್ಯುತ್ತಮವಾಗಿ ಬಲ್ಲರು. ಭಾಷೆ ಗೊತ್ತಿರುವ, ಘನತೆಯುಳ್ಳ ಚೌಧರಿ ಎಲ್ಲರನ್ನು ವಿಶ್ವಾಸದೊಂದಿಗೆ ಕರೆದೊಯ್ಯಬಲ್ಲರು. ವಿಧಾನಸಭೆ ಸ್ಪೀಕರ್‌ ಆಗಬೇಕಾದವರಿಗೆ ಬೇಕಾದ ಎಲ್ಲ ಗುಣಗಳೂ ಅವರಲ್ಲಿದೆ,' ಎಂದು ಯಾದವ್‌ ಹೇಳಿದರು.

'ಆಡಳಿತದಲ್ಲಿರುವ ಮೈತ್ರಿಕೂಟವು ಸ್ಪೀಕರ್‌ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಸರ್ವಾನುಮತ ಬೇಡುವುದು ಪರಿಪಾಠವಲ್ಲವೇ?' ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಯಾದವ್, 'ಉಪಾಧ್ಯಕ್ಷ ಸ್ಥಾನವನ್ನು ಪ್ರತಿಪಕ್ಷ ತನ್ನದಾಗಿಸಿಕೊಂಡ ಉದಾಹರಣೆಯೂ ಇದೆ. ವಿಧಾನಸಭೆ, ಲೋಕಸಭೆಗಳಲ್ಲಿ ಇದು ನಡೆದಿದೆ. ಹಿಂದಿನ ವಿಧಾನಸಭೆಯಲ್ಲಿ ನಾವು ಇದಕ್ಕಾಗಿ ವಿನಂತಿ ಮಾಡಿದ್ದೆವು. ಆದರೆ, ಹುದ್ದೆಯನ್ನು ಖಾಲಿ ಇಡಲಾಗಿತ್ತು,' ಎಂದು ತೇಜಸ್ವಿ ಯಾದವ್‌ ಹೇಳಿದರು.

ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ತಾರ್ ಕಿಶೋರ್ ಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ವಿಧಾನಸಭೆಯ ಸಂಪ್ರದಾಯ ಪಾಲಿಸುವಂತೆಯು ಮತ್ತು ಸ್ಪೀಕರ್ ಹುದ್ದೆಗೆ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ನಾವು ಪ್ರತಿಪಕ್ಷಗಳಿಗೆ ವಿನಂತಿಸುತ್ತೇವೆ. ಸ್ಪೀಕರ್ ಇಡೀ ಸದನಕ್ಕೆ ಸೇರಿದವರು. ಕೇವಲ ಆಡಳಿತ ಪಕ್ಷಕ್ಕೆ ಮಾತ್ರವಲ್ಲ,' ಎಂದು ಹೇಳಿದರು.

ಜೆಡಿಯು ಮತ್ತು ಬಿಜೆಪಿಯ ಈ ವರೆಗಿನ ಸರ್ಕಾರದಲ್ಲಿ ಜೆಡಿಯು ಸ್ಪೀಕರ್‌ ಸ್ಥಾನವನ್ನು ತಾನೇ ಇಟ್ಟುಕೊಳ್ಳುತ್ತಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ ಸ್ಪೀಕರ್‌ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಜೆಡಿಯುಗಿಂತಲೂ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡು, ಮೈತ್ರಿಯಲ್ಲಿ ಪಾರಮ್ಯ ಹೊಂದಿದೆ.

ಸ್ಪೀಕರ್‌ ಆಯ್ಕೆ ಕುರಿತು ಮಾತನಾಡಿರುವ ಅಸಾದುದ್ದೀನ್‌ ಒವೈಸಿ ಪಕ್ಷ ಎಐಎಂಐಎಂನ ರಾಜ್ಯ ಘಟಕದ ಅಧ್ಯಕ್ಷ, ಶಾಸಕ ಅಖ್ತುಲ್‌ ಇಮಾನ್, 'ಸ್ಪೀಕರ್‌ ಆಯ್ಕೆ ಅವಿರೋಧವಾಗಿರಬೇಕು. ಆದರೆ, ಈ ಬಾರಿ ಹಾಗೆ ಆಗುತ್ತಿಲ್ಲ. ಹೀಗಾಗಿ ನಾವು ಅಭ್ಯರ್ಥಿಯನ್ನು ಇಳಿಸಬಯಸಿದ್ದೆವು. ಅದರೆ, ಸಮಯ ಮುಗಿದಿದೆ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಾಳೆ ನಿರ್ಧಾರ ಮಾಡುತ್ತೇವೆ,' ಎಂದು ಹೇಳಿದ್ದಾರೆ. ಎಐಎಂಐಎಂ ಪಕ್ಷವು ಬಿಹಾರದಲ್ಲಿ ಐವರು ಶಾಸಕರನ್ನು ಹೊಂದಿದೆ.

243 ಸದಸ್ಯ ಬಲದ ಬಿಹಾರ ವಿಧಾಸಭೆಯಲ್ಲಿ, ಹಂಗಾಮಿ ಸ್ಪೀಕರ್‌ ಅವರನ್ನು ಒಳಗೊಂಡಂತೆ ಎನ್‌ಡಿಎ 125 ಮಂದಿ ಶಾಸಕರನ್ನು ಹೊಂದಿದೆ. ಆರ್‌ಜೆಡಿ, ಕಾಂಗ್ರೆಸ್‌, ಸಿಪಿಐಎಂಎಲ್‌, ಸಿಪಿಐ, ಸಿಪಿಐಎಂ 109 ಶಾಸಕರನ್ನು ಹೊಂದಿದೆ. ಮಾಯಾವತಿ ಅವರ ಬಿಎಸ್‌ಪಿ ಪಕ್ಷ ಒಬ್ಬ ಶಾಸಕರನ್ನು ಹೊಂದಿದೆ. ಎಲ್‌ಜೆಪಿ ಒಬ್ಬ ಸದಸ್ಯರನ್ನು ಹೊಂದಿದೆ. ಒಬ್ಬ ಪಕ್ಷೇತರ ಶಾಸಕರು ಗೆದ್ದಿದ್ದು ಅವರು ನಿತೀಶ್‌ ಕುಮಾರ್‌ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.

243 ಶಾಸಕರ ಪೈಕಿ ಇಬ್ಬರನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಪ್ರಮಾಣವಚನ ಸ್ವೀಕರಿಸಿದ್ದು, ಆರ್‌ಜೆಡಿಯ ಅಮರ್‌ಜಿತ್‌ ಕುಶ್ವಾಹ ಮತ್ತು ಸಿಪಿಐಎಂಎಲ್‌ನ ಶಾಸಕರು ಜೈಲಿನಲ್ಲಿ ಇರುವುದರಿಂದ ಅವರಿಬ್ಬರೂ ಪ್ರಮಾಣ ವಚನ ಸ್ವೀಕರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT