ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಬಿಜೆಪಿಯ ಪಾಲು ಹೆಚ್ಚಳ; ಇತರರಿಗೆ ಚಿಂತೆ

8ನೇ ಹಂತದ ಮತದಾನ ಇಂದು
Last Updated 28 ಏಪ್ರಿಲ್ 2021, 21:04 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಎಂಟನೇ ಹಂತದಲ್ಲಿ ಗುರುವಾರ ಮತದಾನ ನಡೆಯಲಿರುವ 35 ವಿಧಾನಸಭಾ ಕ್ಷೇತ್ರಗಳಲ್ಲಿ, ಬಿಜೆಪಿಯ ಮತಪಾಲು ಮೂರು ಪಟ್ಟು ಹೆಚ್ಚಾಗಿರುವುದು ಟಿಎಂಸಿ ಹಾಗೂ ಎಡಪಕ್ಷ– ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಸವಾಲಾಗಿದೆ.

2016ರ ಚುನಾವಣೆಯಲ್ಲಿ ಈ 35 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. 2019ರ ಲೋಕಸಭಾ ಚುನಾ ವಣೆಯ ಸಂದರ್ಭದಲ್ಲಿ ಇಲ್ಲಿ ಬಿಜೆಪಿಯ ಮತಪಾಲು ಶೇ 11.48 ರಿಂದ ಶೇ 30.77ಕ್ಕೆ ಹೆಚ್ಚಿದೆ.

ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಈ 35 ಕ್ಷೇತ್ರಗಳ ಪೈಕಿ 17ರಲ್ಲಿ ಕಳೆದ ಬಾರಿ ಟಿಎಂಸಿ ಗೆದ್ದಿತ್ತು. ಕಾಂಗ್ರೆಸ್‌ 13 ಹಾಗೂ ಮೂರು ಕ್ಷೇತ್ರಗಳನ್ನು ಎಡ ಪಕ್ಷಗಳು ಗೆದ್ದಿದ್ದವು.

ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್–ಎಡಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆದ್ದಿದ್ದರು.

ಕಳೆದ ಲೋಕಸಭಾ ಚುನಾವ ಣೆಯಲ್ಲಿ ಬಿಜೆಪಿಯು 11,ಟಿಎಂಸಿ 19 ಹಾಗೂ ಕಾಂಗ್ರೆಸ್‌ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು. ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಮೈತ್ರಿ ಇರಲಿಲ್ಲ. ಎಡಪಕ್ಷಗಳು ಶೇ 5.15ರಷ್ಟು ಹಾಗೂ ಕಾಂಗ್ರೆಸ್‌ ಶೇ 19.45ರಷ್ಟು ಮತಗಳನ್ನು ಪಡೆದಿದ್ದವು.

2016ರ ವಿಧಾನಸಭಾ ಚುನಾವಣೆ ಯಲ್ಲಿ ಮಾಲ್ಡಾ ಜಿಲ್ಲೆಯ ಆರರಲ್ಲಿ ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್‌,ಒಂದು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಇನ್ನೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು. ಟಿಎಂಸಿ ಇಲ್ಲಿ ಶೂನ್ಯ ಸಾಧನೆ ಮಾಡಿತ್ತು.

ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ನಾಲ್ಕರಲ್ಲಿ ಹಾಗೂ ಕಾಂಗ್ರೆಸ್‌ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು.

2016ರಲ್ಲಿ, ಟಿಎಂಸಿಯ ಭದ್ರಕೋಟೆ ಎಂದು ಭಾವಿಸಲಾಗಿರುವ ಬಿರ್‌ಭೂಮ್‌ ಜಿಲ್ಲೆಯ 11 ಕ್ಷೇತ್ರಗಳಲ್ಲಿ 9ರಲ್ಲಿ ಟಿಎಂಸಿ ಗೆಲುವು ಪಡೆದಿತ್ತು. ಕಾಂಗ್ರೆಸ್‌ ಹಾಗೂ ಸಿಪಿಎಂ ತಲಾ ಒಂದು ಕ್ಷೇತ್ರ ಗೆದ್ದಿದ್ದವು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐದರಲ್ಲಿ ಹಾಗೂ ಟಿಎಂಸಿ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು.

ಹಿಂದಿನ ವಿಧಾನಸಭಾ ಚುನಾವ ಣೆಯಲ್ಲಿ ಕೋಲ್ಕತ್ತದ ಎಲ್ಲಾ 7 ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವು ದಾಖಲಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಇವುಗಳಲ್ಲಿ 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಲು ಬಿಜೆಪಿಗೆ ಸಾಧ್ಯವಾಗಿತ್ತು.

ಉಳಿದ ಐದು ಕ್ಷೇತ್ರಗಳಲ್ಲಿ ಟಿಎಂಸಿ ತನ್ನ ಪ್ರಾಬಲ್ಯಉಳಿಸಿಕೊಂಡಿತ್ತು.

ಎಣಿಕೆ ಕೇಂದ್ರ ಪ್ರವೇಶಕ್ಕೆ ‘ಕೋವಿಡ್‌ ಇಲ್ಲ’ ಪ್ರಮಾಣಪತ್ರ ಕಡ್ಡಾಯ
ನವದೆಹಲಿ: ಮತ ಎಣಿಕೆ ಕೇಂದ್ರಗಳಿಗೆ ಹೋಗುವ ಅಭ್ಯರ್ಥಿ ಅಥವಾ ಅವರ ಏಜೆಂಟರು ಕೋವಿಡ್‌ ಇಲ್ಲ ಎಂಬ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ ಎಂದು ಚುನಾವಣಾ ಆಯೋಗವು ಮತ ಎಣಿಕೆಗೆ ಸಂಬಂಧಿಸಿ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಹೇಳಿದೆ.

ಕೋವಿಡ್‌–19 ತಡೆ ಲಸಿಕೆಯ ಎರಡೂ ಡೋಸ್‌ ಪಡೆದುಕೊಂಡ ಅಭ್ಯರ್ಥಿ ಅಥವಾ ಏಜೆಂಟರು ಮತ ಎಣಿಕೆ ಕೇಂದ್ರಕ್ಕೆ ಹೋಗಬಹುದು. ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡು ವಿಧಾನಸಭೆಯ ಮತಗಳ ಎಣಿಕೆಯು ಮೇ 2ರಂದು ನಡೆಯಲಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ತೆರವಾಗಿದ್ದ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆಯೂ ಅಂದೇ ನಡೆಯಲಿದೆ.

ಅಭ್ಯರ್ಥಿ ಸಾವು: ಆಯೋಗದ ವಿರುದ್ಧ ಕೊಲೆ ಪ್ರಕರಣಕ್ಕೆ ಒತ್ತಾಯ
ಕೋಲ್ಕತ್ತ:‘ನನ್ನ ಪತಿಯ ಸಾವಿಗೆ ಚುನಾವಣಾ ಆಯೋಗವೇ ಕಾರಣ. ಆಯೋಗದ ವಿರುದ್ಧ, ಉದ್ದೇಶಪೂರ್ವಕವಲ್ಲದ ಹತ್ಯೆ ಪ್ರಕರಣ ದಾಖಲಿಸಿ’ ಎಂದು ಕೋವಿಡ್‌ನಿಂದ ಮೃತಪಟ್ಟ ಪಶ್ಚಿಮ ಬಂಗಾಳದ ಟಿಎಂಸಿ ಅಭ್ಯರ್ಥಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋವಿಡ್‌ ಹರಡಲು ಚುನಾವಣಾ ಆಯೋಗದ ನಿರ್ಲಕ್ಷ್ಯವೇ ಕಾರಣ. ಆಯೋಗದ ಅಧಿಕಾರಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿದರೂ ತಪ್ಪಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಛೀಮಾರಿ ಹಾಕಿರುವ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಖಾರ್ದಾಹಾ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಕಾಜಲ್ ಸಿನ್ಹಾ ಕಣಕ್ಕೆ ಇಳಿದಿದ್ದರು. ಅವರು ಸಾರ್ವಜನಿಕವಾಗಿ ಪ್ರಚಾರ ನಡೆಸಿದ್ದರು. ಅವರಿಗೆ ಕೋವಿಡ್‌ ಇರುವುದು ಏಪ್ರಿಲ್ 21ರಂದು ದೃಢಪಟ್ಟಿತ್ತು. ಏಪ್ರಿಲ್ 25ರಂದು ಅವರು ಕೋವಿಡ್‌ನಿಂದ ಮೃತಪಟ್ಟಿದ್ದರು. ಈಗ ಅವರ ಪತ್ನಿ ನಂದಿತಾ ಸಿನ್ಹಾ, ಖಾರ್ದಾಹಾ ಪೊಲೀಸ್ ಠಾಣೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ದೂರು ನೀಡಿದ್ದಾರೆ.

‘ಕೋವಿಡ್‌ ತೀವ್ರವಾಗಿ ಹರಡುತ್ತಿದ್ದರೂ ಎಂಟು ಹಂತಗಳಲ್ಲಿ ಮತದಾನ ನಡೆಸುವ ನಿರ್ಧಾರವನ್ನು ಚುನಾವಣಾ ಆಯೋಗ ಹಿಂಪಡೆಯಲಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾರಣ, ಅನಿವಾರ್ಯವಾಗಿ ಪ್ರಚಾರ ನಡೆಸಿ ನನ್ನ ಪತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ರಾಜ್ಯ ಪೊಲೀಸ್, ಕೇಂದ್ರದ ಅರೆಸೇನಾಪಡೆಗಳನ್ನು ಚುನಾವಣಾ ಆಯೋಗವು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಹೀಗಿದ್ದೂ, ಪ್ರಚಾರ ಮತ್ತು ಮತದಾನದ ವೇಳೆ ಕೋವಿಡ್‌ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ಆಯೋಗದ ವಿರುದ್ಧ ನಿರ್ಲಕ್ಷ್ಯ, ಉದ್ದೇಶಪೂರ್ವಕವಲ್ಲದ ಹತ್ಯೆ ಪ್ರಕರಣಗಳನ್ನು ದಾಖಲಿಸಿ' ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT