ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಜನರ ಹಿತಾಸಕ್ತಿ ಬಲಿಕೊಟ್ಟು ಲಸಿಕೆ ರಫ್ತು ಮಾಡಿಲ್ಲ: ಅದರ್ ಪೂನವಾಲಾ

Last Updated 19 ಮೇ 2021, 3:40 IST
ಅಕ್ಷರ ಗಾತ್ರ

ಮುಂಬೈ: ಭಾರತದಲ್ಲಿ ಜನರ ಹಿತಾಸಕ್ತಿ ಬಲಿ ಕೊಟ್ಟು ವಿದೇಶಕ್ಕೆ ಕೋವಿಡ್ ಲಸಿಕೆ ರಫ್ತು ಮಾಡಿಲ್ಲ. ನಮ್ಮ ಬದ್ಧತೆಯ ಭಾಗವಾಗಿ ಕಳುಹಿಸಲಾಗಿದೆ ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಓ ಅದರ್ ಪೂನವಾಲಾ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಕೋವಿಡ್ ಲಸಿಕೆಗೆ ಕೊರತೆ ಇದ್ದು, ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳು ಮತ್ತಿತರರ ತೀವ್ರ ಟೀಕೆಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ತಮ್ಮ ಕುಟುಂಬದೊಂದಿಗೆ ಪ್ರಸ್ತುತ ಲಂಡನ್‌ನಲ್ಲಿರುವ ಪೂನವಾಲಾ, ಅಲ್ಲಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ನಾವು ಉತ್ಪಾದಿಸಿದ ಮತ್ತು ವಿತರಿಸಿದ ಒಟ್ಟು ಲಸಿಕೆಯ ಪ್ರಮಾಣವನ್ನು ನೋಡಿದರೆ, ನಾವು ವಿಶ್ವದ ಅಗ್ರ ಮೂರು ಸ್ಥಾನಗಳಲ್ಲಿದ್ದೇವೆ’ಎಂದು ಅವರು ಹೇಳಿದ್ದಾರೆ.

‘ನಾವು ಎಂದಿಗೂ ಭಾರತದ ಜನರ ಹಿತಾಸಕ್ತಿ ಬಲಿ ಕೊಟ್ಟು ಲಸಿಕೆಗಳನ್ನು ರಫ್ತು ಮಾಡಿಲ್ಲ ಮತ್ತು ದೇಶದಲ್ಲಿ ವ್ಯಾಕ್ಸಿನೇಷನ್ ಡ್ರೈವ್‌ಗೆ ಬೆಂಬಲವಾಗಿ ನಾವು ಮಾಡಬಹುದಾದ ಎಲ್ಲವನ್ನು ಮಾಡಲು ಬದ್ಧರಾಗಿರುತ್ತೇವೆ ಎಂದು ಪುನರುಚ್ಚರಿಸಲು ನಾವು ಬಯಸುತ್ತೇವೆ. ಮಾನವೀಯತೆಯಿಂದ ನಾವು ಸರ್ಕಾರದೊಂದಿಗೆ ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ ಮತ್ತು ಅದೇ ಮನೋಭಾವದಲ್ಲಿ ಮುಂದುವರಿಯುತ್ತೇವೆ’ ಎಂದು ಕೋವಿಡ್ -19 ಲಸಿಕೆ ಹೊರತಂದ ಮೊದಲ ಭಾರತೀಯ ಕಂಪನಿ ಸೀರಂ ಇನ್‌ಸ್ಟಿಟ್ಯೂಟ್ ಅಫ್ ಇಂಡಿಯಾದ ಸಿಇಓ ಪೂನವಾಲಾ ಹೇಳಿದರು.

ಜನವರಿ 2021ರಂದು ಭಾರತದಲ್ಲಿ ಲಸಿಕೆಯ ದೊಡ್ಡ ಸಂಗ್ರಹವಿತ್ತು. ಲಸಿಕಾ ಅಭಿಯಾನ ಯಶಸ್ವಿಯಾಗಿ ಪ್ರಾರಂಭವಾಗಿತ್ತು. ಕೋವಿಡ್ ದೈನಂದಿನ ಪ್ರಕರಣಗಳ ಸಂಖ್ಯೆ ಸಾರ್ವಕಾಲಿಕವಾಗಿ ಕಡಿಮೆಯಾಗಿತ್ತು. ಆ ಹಂತದಲ್ಲಿ, ಭಾರತವು ಸಾಂಕ್ರಾಮಿಕ ರೋಗದಿಂದ ಹೊರಬರುತ್ತದೆ ಎಂದು ಆರೋಗ್ಯ ತಜ್ಞರು ಸೇರಿದಂತೆ ಹೆಚ್ಚಿನ ಜನರು ನಂಬಿದ್ದರು ಎಂದು ಹೇಳಿಕೆಯಲ್ಲಿ ಪೂನವಾಲಾ ತಿಳಿಸಿದ್ದಾರೆ.

ಪೂನವಾಲಾ ಪ್ರಕಾರ, ಅದೇ ಸಮಯದಲ್ಲಿ, ವಿಶ್ವದ ಇತರ ದೇಶಗಳು ಕೊರೊನಾ ಸೋಂಕಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದವು ಮತ್ತು ಆ ದೇಶಗಳಿಗೆ ನಾವು ಸಹಾಯದ ಹಸ್ತ ಚಾಚುವ ಅಗತ್ಯವಿತ್ತು. ‘ಈ ಅವಧಿಯಲ್ಲಿ ನಮ್ಮ ಸರ್ಕಾರವು ಸಾಧ್ಯವಾದ ಎಲ್ಲ ಬೆಂಬಲವನ್ನು ನೀಡಿತು. 2020ರ ಆರಂಭದಲ್ಲಿ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಾಗ ದೇಶಗಳ ನಡುವೆ ಪರಸ್ಪರ ಸಹಕಾರದ ಮನೋಭಾವ ಮೂಡಿತ್ತು. ಅದೇ ಮನೋಭಾವದಲ್ಲಿ ನೆರವು ನೀಡಲಾಯಿತು. ದೇಶಗಳ ನಡುವಿನ ಸಹಕಾರವು ನಮಗೆ ತಂತ್ರಜ್ಞಾನದ ಪ್ರವೇಶ ಪಡೆಯಲು ಆಧಾರವಾಗಿದೆ ಮತ್ತು ನಮ್ಮ ದೇಶದ ಜನರ ಆರೋಗ್ಯ ರಕ್ಷಣೆಗಾಗಿ ವಿದೇಶಗಳಿಂದ ನೆರವು ಸಿಕ್ಕಿದೆ’ ಎಂದು ಅವರು ಹೇಳಿದ್ದಾರೆ.

ಈ ಸಾಂಕ್ರಾಮಿಕವು ಭೌಗೋಳಿಕ ಅಥವಾ ರಾಜಕೀಯ ಗಡಿಗಳಿಂದ ಸೀಮಿತವಾಗಿಲ್ಲ ಎಂಬುದನ್ನು ಜನರು ಸಹ ಅರ್ಥಮಾಡಿಕೊಳ್ಳಬೇಕು ಎಂದು ಪೂನವಾಲಾ ಹೇಳಿದರು.

‘ಜಾಗತಿಕವಾಗಿ ಪ್ರತಿಯೊಬ್ಬರೂ ಈ ವೈರಸ್ ಅನ್ನು ಸೋಲಿಸುವವರೆಗೂ ನಾವು ಸುರಕ್ಷಿತವಾಗಿರುವುದಿಲ್ಲ. ಇದಲ್ಲದೆ, ನಮ್ಮ ಜಾಗತಿಕ ಮೈತ್ರಿಗಳ ಭಾಗವಾಗಿ ಕೋವಾಕ್ಸಿನ್ ರಫ್ತಿನ ಬದ್ಧತೆಯನ್ನು ಹೊಂದಿದ್ದೇವೆ, ಇದರಿಂದಾಗಿ ಅವರು ಸಹ ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಲಸಿಕೆಗಳನ್ನು ವಿತರಿಸಬಹುದು’ ಎಂದು ಅವರು ಹೇಳಿದರು. .

ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂಬುದನ್ನು ಒತ್ತಿ ಹೇಳಿರುವ ಅವರು, ಹಲವಾರು ‘ಅಂಶಗಳು ಮತ್ತು ಸವಾಲುಗಳು’ ಇರುವ ಬೃಹತ್ ದೇಶದಲ್ಲಿ 2–3 ತಿಂಗಳಿಗೆ ಲಸಿಕೆ ಅಭಿಯಾನ ಮುಗಿಯುವುದಿಲ್ಲ. ಇಡೀ ವಿಶ್ವದ ಜನಸಂಖ್ಯೆಯು ಸಂಪೂರ್ಣವಾಗಿ ಲಸಿಕೆ ಪಡೆಯಲು 2-3 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT