ಸೋಮವಾರ, ಮೇ 23, 2022
24 °C
‘ಥಣಿಸಂದ್ರ: ಹೈ ಟೆನ್ಷನ್‌ ವಿದ್ಯುತ್‌ ಮಾರ್ಗದ ಸಮೀಪ ವಾಸಿಸುವ ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಿ’

ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಎನ್‌ಜಿಟಿ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬ್ಯಾಟರಾಯನಪುರ ಉಪ ವಿಭಾಗದ ಥಣಿಸಂದ್ರ ವಾರ್ಡ್‌ನ ಅಶ್ವತ್ಥನಗರದಲ್ಲಿ ಹಾದುಹೋಗಿರುವ ಹೈ ಟೆನ್ಷನ್ ವಿದ್ಯುತ್‌ ಮಾರ್ಗದ ಸಮೀಪವೇ ಮನೆಗಳನ್ನು ಕಟ್ಟಿಸಿಕೊಂಡು ಇರುವ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ವಾರ್ಡ್‌ನಲ್ಲಿನ ಒಳಚರಂಡಿ, ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣಾ ಘಟಕ), ಮಳೆ ನೀರು ಹರಿಯುವ ಚರಂಡಿಗಳ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪ್ರಧಾನ ಪೀಠ ಬಿಬಿಎಂಪಿಗೆ ಸೂಚಿಸಿದೆ.

ಅಶ್ವತ್ಥನಗರದಲ್ಲಿ ಸುರಕ್ಷತಾ ಅಂತರವಿಲ್ಲದೆ ಹೈ ಟೆನ್ಷನ್‌ ಮಾರ್ಗದ ಸಮೀಪವೇ ಅಕ್ರಮವಾಗಿ ಮನೆ ಮತ್ತು ಅಂಗಡಿಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದೆ. ಬೆಂಗಳೂರಿನ ಕೆರೆಗಳಿಗೆ ಸಂಪರ್ಕ ಕಲ್ಪಿಸಿರುವ ಮಳೆ ನೀರಿನ ಚರಂಡಿಗಳನ್ನೂ ಒತ್ತುವರಿ ಮಾಡಲಾಗಿದ್ದು, ಸಂಸ್ಕರಿಸದ ತ್ಯಾಜ್ಯವನ್ನು ಚರಂಡಿಗೆ ಬಿಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಾರ್ಡ್‌ನಲ್ಲಿ ಶೇ 90 ರಷ್ಟು ಒಳಚರಂಡಿ ಪೂರ್ಣಗೊಂಡಿದೆ ಮತ್ತು ಎಸ್‌ಟಿಪಿ ನಿರ್ಮಾಣ ಪ್ರಗತಿಯಲ್ಲಿದೆ ಎಂಬ ಬಿಬಿಎಂಪಿಯ ಹೇಳಿಕೆಯನ್ನು ಆಲಿಸಿದ ಎನ್‌ಜಿಟಿ, ‘ಇಡೀ ಒಳಚರಂಡಿ ಕಾಮಗಾರಿಗಳು ಮತ್ತು ಎಸ್‌ಟಿಪಿ ಸಮನಾಗಿ ಏಕಕಾಲದಲ್ಲಿಯೇ ಆಗಬೇಕಿದೆ. ಮಳೆ ನೀರು ಅಥವಾ ಚರಂಡಿಗಳ ಮೂಲಕ ಹರಿಯುವ ಕಲುಷಿತಗೊಳ್ಳದ ನೀರಿನಿಂದ ಮಾತ್ರ ಜಲಮೂಲಗಳು, ಕೆರೆಗಳು ಸರೋವರಗಳು ಕಲುಷಿತಗೊಳ್ಳುವುದಿಲ್ಲ ಎಂದು ಹೇಳಿದೆ.

ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಸಂಸ್ಕರಿಸದ ಕೊಳಚೆ ನೀರನ್ನು ಒಳಚರಂಡಿ ಸಂಸ್ಕರಣಾ ಘಟಕಕ್ಕೆ ವಿಲೇವಾರಿ ಮಾಡಲು ಒಳಚರಂಡಿ ವ್ಯವಸ್ಥೆಯನ್ನು ಒದಗಿಸುವ ಮೂಲಕ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಶ್ವತ್ಥನಗರ ಮತ್ತು ಸುತ್ತಮುತ್ತಲಿನ ಪ್ರದೇಶ ಹಾಗೂ ಇತರ ಪ್ರದೇಶಗಳಲ್ಲಿ ಮಳೆ ನೀರನ್ನು ವಿಲೇವಾರಿ ಮಾಡಲು ಆರ್‌ಸಿಸಿ ಚರಂಡಿಗಳನ್ನು ನಿರ್ಮಿಸಲಾಗಿದೆ. ವಾರ್ಡ್ ನಂ. 06 (ಥಣಿಸಂದ್ರ) ಮತ್ತು ಪರಿಸರ ಸಂರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

‘ಅಶ್ವತ್ಥನಗರದಲ್ಲಿರುವ ಈ ಮನೆಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್‌ ಸಂಪರ್ಕ ಒದಗಿಸಿದೆ. ಹೈ ಟೆನ್ಷನ್ ಮಾರ್ಗಗಳಿಗೆ ಸಂಬಂಧಿಸಿದ ಯಾವುದೇ ಉಲ್ಲಂಘನೆಗಳಿದ್ದರೆ ಕೆಪಿಟಿಸಿಎಲ್ ನಿಯಮಾನುಸಾರ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಶ್ವತ್ಥನಗರ ಮತ್ತು ಇತರ ಪ್ರದೇಶಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಹೈ ಟೆನ್ಷನ್ ಮಾರ್ಗಗಳ ಕೆಳಗಿರುವ, ಹತ್ತಿರದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂಗೆ ಪತ್ರ ಬರೆಯಲಾಗಿದೆ ಎಂದೂ ಬಿಬಿಎಂಪಿ ಹೇಳಿದೆ.

ಅಶ್ವತ್ಥನಗರದಲ್ಲಿ ಹಾದುಹೋಗಿರುವ ಹೈ ಟೆನ್ಷನ್ ಮಾರ್ಗದ ಉದ್ದಕ್ಕೂ, ಥಣಿಸಂದ್ರ ಮುಖ್ಯ ರಸ್ತೆಯ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ 320 ಕಟ್ಟಡಗಳು, ಮನೆಗಳು, ಅಂಗಡಿಗಳು, ಶೆಡ್‌ಗಳು ಅನಧಿಕೃತ ನಿರ್ಮಾಣಗೊಂಡಿವೆ ಎಂದು ಈ ಹಿಂದೆ ಬಿಬಿಎಂಪಿ ಎನ್‌ಜಿಟಿಗೆ ನೀಡಿದ ವರದಿಯಲ್ಲಿ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.