ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ, ಅಪಘಾತಗಳಿಗೆ ಅಧಿಕಾರಿಗಳೇ ಹೊಣೆ: ಹೆದ್ದಾರಿ ಪ್ರಾಧಿಕಾರ ಸುತ್ತೋಲೆ

Last Updated 18 ಅಕ್ಟೋಬರ್ 2022, 11:47 IST
ಅಕ್ಷರ ಗಾತ್ರ

ನವದೆಹಲಿ: ಕಳಪೆ ರಸ್ತೆ ಕಾಮಗಾರಿಯಿಂದಾಗಿ ಸಂಭವಿಸುವ ಮಾರಣಾಂತಿಕ ಅಪಘಾತಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ. ಈ ಸಂಬಂಧ ಮಂಗಳವಾರ ಸುತ್ತೋಲೆ ಹೊರಡಿಸಿದೆ.

‘ತಾತ್ಕಾಲಿಕ ಪ್ರಮಾಣ ಪತ್ರ ವಿತರಣೆ ಪ್ರಕ್ರಿಯೆಯಲ್ಲಿ ಎನ್‌ಎಚ್‌ಎಐ/ಐಇ/ಎಇ ಪ್ರತಿನಿಧಿಗಳಿಂದ ಕರ್ತವ್ಯ ಲೋಪವಾದರೆ, ಅವರ ನಿರ್ಲಕ್ಷ್ಯದಿಂದ ಬಳಕೆದಾರರ ಸುರಕ್ಷತೆಗೆ ಧಕ್ಕೆಯುಂಟಾದರೆ ಅದನ್ನು ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ರಸ್ತೆಗಳಲ್ಲಿ ಗುರುತು ಹಾಗೂ ಸಂಕೇತಗಳನ್ನು ಹಾಕಿರುವುದನ್ನೇ ಆಧಾರವಾಗಿಟ್ಟುಕೊಂಡು ಕಾಮಗಾರಿ ಪೂರ್ಣಗೊಳಿಸಿರುವ ಕುರಿತ ತಾತ್ಕಾಲಿಕ ಪ್ರಮಾಣ ಪತ್ರ ವಿತರಿಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದು ಬಳಕೆದಾರರ ಸುರಕ್ಷತೆ ಜೊತೆ ರಾಜಿಮಾಡಿಕೊಂಡಂತೆ. ಇದರಿಂದ ಪ್ರಾಧಿಕಾರಕ್ಕೂ ಕೆಟ್ಟ ಹೆಸರು ಬರುತ್ತದೆ’ ಎಂದು ಹೇಳಲಾಗಿದೆ.

‘ಕಾಮಗಾರಿ ಪೂರ್ಣಗೊಂಡಿರುವ ಕುರಿತು ತಾತ್ಕಾಲಿಕ ಪ್ರಮಾಣ ಪತ್ರ ವಿತರಿಸುವ ಮುನ್ನ ‘ಪ್ರಾಜೆಕ್ಟ್‌ ಹೈವೆ’ಯ ರಸ್ತೆ ಸುರಕ್ಷತೆ ನಿಯಮಾವಳಿಗಳ ಪಾಲನೆಯಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಒಂದೊಮ್ಮೆಕಳಪೆ ರಸ್ತೆ ಕಾಮಗಾರಿಯಿಂದಾಗಿ ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದರೆ ಅದಕ್ಕೆ ಪ್ರಾದೇಶಿಕ ಅಧಿಕಾರಿಗಳು, ಯೋಜನಾ ನಿರ್ದೇಶಕರು ಅಥವಾ ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ’ ಎಂದು ಎಚ್ಚರಿಸಿದೆ.

ಬಹು‍ಪಾಲು ಅಪಘಾತಗಳಿಗೆ ಅಸಮರ್ಪಕ ರಸ್ತೆ ಕಾಮಗಾರಿಯೇ ಕಾರಣ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಇತ್ತೀಚೆಗೆ ತಿಳಿಸಿದ್ದರು. ಹೆದ್ದಾರಿ ಹಾಗೂ ಇತರೆ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸುವ ಕುರಿತು ಕಂಪನಿಗಳಿಗೆ ಸೂಕ್ತ ತರಬೇತಿ ನೀಡುವ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದ್ದರು.

ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೊ ದತ್ತಾಂಶದ ಪ್ರಕಾರ ಭಾರತದಲ್ಲಿ ಹೋದ ವರ್ಷ ರಸ್ತೆ ಅ‍ಪಘಾತಗಳಿಂದಾಗಿಯೇ 1.55 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈವರೆಗೆ ವರ್ಷವೊಂದರಲ್ಲಿ ದಾಖಲಾದ ಗರಿಷ್ಠ ಮರಣ ಪ್ರಮಾಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT