ಬುಧವಾರ, ಆಗಸ್ಟ್ 10, 2022
24 °C
ಉತ್ತರ ಪ್ರದೇಶ, ಬಿಹಾರ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್‌

ಗಂಗೆಯಲ್ಲಿ ತೇಲಿಬಂದ ಹೆಣಗಳು: ವರದಿಗೆ ಎನ್‌ಎಚ್‌ಆರ್‌ಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಗಂಗಾ ನದಿಯಲ್ಲಿ ಹೆಣಗಳು ತೇಲಿ ಬಂದ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ನಾಲ್ಕು ವಾರದೊಳಗೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಆರ್‌ಆರ್‌ಸಿ) ಕೇಂದ್ರ ಹಾಗೂ ಉಭಯ ರಾಜ್ಯ ಸರ್ಕಾರಗಳಿಗೆ ಗುರುವಾರ ಸೂಚಿಸಿದೆ.

ಈ ಸಂಬಂಧ ಸಲ್ಲಿಕೆಯಾದ ದೂರಿನ ಆಧಾರದ ಮೇಲೆ ಆಯೋಗವು ಎರಡೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ, ಕೇಂದ್ರದ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್‌ ಜಾರಿ ಮಾಡಿದೆ.

ನದಿಯಲ್ಲಿ ತೇಲಿಬಂದ ಹೆಣಗಳು ಕೋವಿಡ್‌–19 ನಿಂದ ಮೃತಪಟ್ಟವರಿರಬಹುದು ಎಂಬ ಸಂಶಯವಿದೆ.

‘ಅರ್ಧ ಸುಟ್ಟ ಹಾಗೂ ಸುಡದೇ ಇರುವಂಥ ಮೃತದೇಹಗಳನ್ನು ಗಂಗಾ ನದಿಯಲ್ಲಿ ತೇಲಿ ಬಿಡಬಾರದು ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಸಂಬಂಧಪಟ್ಟವರು ವಿಫಲರಾಗಿದ್ದಾರೆ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಗಂಗೆ ನದಿಯಲ್ಲಿ ಮೃತದೇಹಗಳನ್ನು ಎಸೆಯುವುದು ‘ರಾಷ್ಟ್ರೀಯ ಗಂಗಾ ನದಿ ಸ್ವಚ್ಛತಾ ಮಿಷನ್‌’ ಯೋಜನೆಯ ಉಲ್ಲಂಘನೆಯೂ ಆಗುವುದು ಎಂದೂ ಆಯೋಗ ಹೇಳಿದೆ.

‘ಈ ಮೃತದೇಹಗಳು ಕೋವಿಡ್‌–19ನಿಂದ ಸಾವನ್ನಪ್ಪಿದವರದಾಗಿರದಿದ್ದರೂ, ಈ ರೀತಿ ಹೆಣಗಳನ್ನು ನದಿಗೆ ಎಸೆಯುವುದು ಸಮಾಜವೇ ತಲೆ ತಗ್ಗಿಸುವಂಥ ವಿಚಾರ. ಇದು ಮೃತ ವ್ಯಕ್ತಿಗಳಿಗೂ ಅಗೌರವ ತೋರಿದಂತೆ’ ಎಂದಿದೆ.

‘ಸಾವಿರಾರು ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಗಂಗಾ ನದಿಯನ್ನೇ ಅವಲಂಬಿಸಿದ್ದಾರೆ. ಈ ರೀತಿ ಹೆಣಗಳನ್ನು ಎಸೆಯುವುದು, ನದಿಯನ್ನು ಅವಲಂಬಿಸಿದವರ ಮೇಲೆ ದುಷ್ಪರಿಣಮ ಬೀರುತ್ತದೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುಬೇಕು’ ಎಂದು ದೂರುದಾರರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು