ಬುಧವಾರ, ಅಕ್ಟೋಬರ್ 28, 2020
23 °C

ಪಶ್ಚಿಮ ಬಂಗಾಳ, ಕೇರಳದಲ್ಲಿ 9 ಶಂಕಿತ ಅಲ್ ಖೈದಾ ಉಗ್ರರ ಬಂಧಿಸಿದ ಎನ್‌ಐಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್‌ಐಎ ಬಂಧಿಸಿರುವ ಶಂಕಿತ ಅಲ್ ಖೈದಾ ಉಗ್ರರು

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ನಡೆದ ದಾಳಿಯಲ್ಲಿ 9 ಜನ ಅಲ್‌ ಖೈದಾ ಉಗ್ರರನ್ನು ಬಂಧಿಸುವ ಮೂಲಕ ಪಾಕಿಸ್ತಾನ ಪ್ರಾಯೋಜಿತ ಅಲ್ ಖೈದಾ ಘಟಕವನ್ನು ಭೇದಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಹೇಳಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಆರು ಜನರು ಮತ್ತು ಕೇರಳದ ಎರ್ನಾಕುಲಂನಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ ಮತ್ತು ಕೇರಳ ಸೇರಿದಂತೆ ಭಾರತದ ವಿವಿಧ ಸ್ಥಳಗಳಲ್ಲಿ ಅಲ್-ಖೈದಾ ಉಗ್ರರ ಅಂತರ ರಾಜ್ಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ.

ಮುಗ್ಧ ಜನರನ್ನು ಕೊಲ್ಲುವ ಮತ್ತು ಅವರ ಮನಸ್ಸಿನಲ್ಲಿ ಭಯವನ್ನುಂಟು ಮಾಡುವ ಉದ್ದೇಶದಿಂದ ಭಾರತದ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಈ ಗುಂಪು ಯೋಜನೆ ರೂಪಿಸುತ್ತಿತ್ತು ಎಂದು ಎನ್‌ಐಎ ತಿಳಿಸಿದೆ.

ಮುಂಜಾನೆ ನಡೆಸಿದ ದಾಳಿಯಲ್ಲಿ, ಡಿಜಿಟಲ್ ಸಾಧನಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ತೀಕ್ಷ್ಣವಾದ ಆಯುಧಗಳು, ದೇಸೀ ನಿರ್ಮಿತ ಬಂದೂಕುಗಳು, ಸ್ಥಳೀಯವಾಗಿ ತಯಾರಿಸಿದ ದೇಹದ ರಕ್ಷಾಕವಚ, ಮನೆಯಲ್ಲಿ ಸ್ಫೋಟಕ ತಯಾರಿಸಲು ನೆರವಾಗುವಂತ ಲೇಖನಗಳು ಮತ್ತು ಸಾಹಿತ್ಯ ಸೇರಿದಂತೆ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳಿಗೆ ಪಾಕಿಸ್ತಾನ ಮೂಲದ ಅಲ್ ಖೈದಾ ಭಯೋತ್ಪಾದಕರು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಅಣಿಗೊಳಿಸಿದ್ದಾರೆ ಮತ್ತು ರಾಷ್ಟ್ರ ರಾಜಧಾನಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲು ಪ್ರೇರೇಪಿಸಲಾಗಿದೆ ಎಂದು ಎನ್ಐಎ ಹೇಳಿದೆ.

ಈ ಉದ್ದೇಶಕ್ಕಾಗಿ, ಉಗ್ರ ಘಟಕವು ಹಣಸಂಗ್ರಹದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಮತ್ತು ಗ್ಯಾಂಗ್‌ನ ಕೆಲವು ಸದಸ್ಯರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ನವದೆಹಲಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರು. ಈ ಬಂಧನದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಕೃತ್ಯದ ಸಾಧ್ಯತೆಗಳನ್ನು ತಡೆಯುವಂತೆ ಮಾಡಿದೆ ಎಂದು ಹೇಳಿದೆ.

ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್ ಮತ್ತು ಮೊಸರಾಫ್ ಹುಸೇನ್ ಎಂಬುವವರನ್ನು ಕೇರಳದ ಎರ್ನಾಕುಲಂನಿಂದ ಬಂಧಿಸಿದ್ದರೆ, ನಂಜಮುಸ್ ಸಾಕಿಬ್, ಅಬು ಸುಫಿಯಾನ್, ಮೈನುಲ್ ಮೊಂಡಲ್, ಲೆವು ಯೇನ್ ಅಹ್ಮದ್, ಅಲ್ ಮಮುನ್ ಕಮಲ್ ಮತ್ತು ಅತಿತೂರ್ ರೆಹಮಾನ್ ಎಂಬುವವರನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಂಧಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು