ಶನಿವಾರ, ಜೂನ್ 25, 2022
22 °C
ಅಜಿತ್ ಪವಾರ್ ಆಪ್ತ, ಅನಿಲ್‌ ಪರಬ್‌ ಹೆಸರು ಪ್ರಸ್ತಾಪ

ಪೊಲೀಸ್‌ ಇಲಾಖೆಗೆ ವಾಪಸ್‌ ಸೇರಲು ದೇಶಮುಖ್‌ ₹2 ಕೋಟಿ ಕೇಳಿದ್ದರು: ಸಚಿನ್‌ ವಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಹಣ ವಸೂಲಿ ಮಾಡುವಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಾರಿಗೆ ಸಚಿವ ಅನಿಲ್‌ ಪರಬ್‌ ಸೂಚಿಸಿದ್ದರು ಎಂದು ಸದ್ಯ ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಬಹಿರಂಗಪಡಿಸಿದ್ದಾರೆ.

ಪರಬ್‌ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರಿಗೂ ಅತ್ಯಾಪ್ತರು. ಅಲ್ಲದೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಆಪ್ತ ಮತ್ತು ಸೋದರಳಿಯನಾದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಪ್ತರೊಬ್ಬರು ಸಹ ತಮ್ಮನ್ನು ಸಂಪರ್ಕಿಸಿ, ಹಣ ಸುಲಿಗೆ ಮಾಡಲು ಹೇಳುತ್ತಿದ್ದರು ಎಂದು ವಾಜೆ ಹೇಳಿದ್ದಾರೆ.

ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿರುವ ನಾಲ್ಕು ಪುಟಗಳ ಪತ್ರದಲ್ಲಿ ವಾಜೆ ಈ ವಿಷಯ ಉಲ್ಲೇಖಿಸಿದ್ದಾರೆ.

ವಾಜೆ ಹೇಳಿಕೆಯಿಂದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಗಾಡಿ ಸರ್ಕಾರಕ್ಕೆ ಗಂಡಾಂತರ ಎದುರಾಗಿದೆ.

‘ಪೊಲೀಸ್‌ ಇಲಾಖೆಗೆ ವಾಪಸ್‌ ಸೇರಲು ದೇಶಮುಖ್‌ ಅವರು ತಮ್ಮಿಂದ ₹2 ಕೋಟಿ ಕೇಳಿದ್ದರು. ಈ ವಿಷಯದ ಬಗ್ಗೆ ಶರದ್‌ ಪವಾರ್‌ ಅವರಿಗೂ ಮನವರಿಕೆ ಮಾಡುವ ಭರವಸೆ ನೀಡಿದ್ದರು. ಆದರೆ, ಇಷ್ಟೊಂದು ಮೊತ್ತ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ತಡವಾಗಿ ನೀಡುವಂತೆ ಸೂಚಿಸಿದರು’ ಎಂದು ವಾಜೆ ಹೇಳಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ಸಹ್ಯಾದ್ರಿ ಅತಿಥಿ ಗೃಹಕ್ಕೆ ಕರೆಯಿಸಿಕೊಂಡಿದ್ದ ದೇಶಮುಖ್‌ ಅವರು, ಮುಂಬೈನಲ್ಲಿ 1,650 ಬಾರ್‌ಗಳು ಮತ್ತು ರೆಸ್ಟೊರೆಂಟ್‌ಗಳಿಂದ ಪ್ರತಿ ತಿಂಗಳು ₹3 ಲಕ್ಷ ವಸೂಲಿ ಮಾಡುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ.

‘ಸಿಂಗ್‌ ಸೂಚನೆ ಮೇರೆಗೆ ಸಿಐಯುಗೆ ವಾಜೆ’: ಜಂಟಿ ಪೊಲೀಸ್‌ ಕಮಿಷನರ್‌ (ಅಪರಾಧ) ಆಕ್ಷೇಪ ವ್ಯಕ್ತಪಡಿಸಿದ್ದರೂ ಮುಂಬೈನ ಹಿಂದಿನ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ ಅವರ ಒತ್ತಾಯದ ಮೇರೆಗೆ ಕಳೆದ ವರ್ಷ ಜೂನ್‌ನಲ್ಲಿ ಸಚಿನ್‌ ವಾಜೆ ಅವರನ್ನು ಅಪರಾಧ ಗುಪ್ತದಳ ಘಟಕಕ್ಕೆ (ಸಿಐಯು) ನಿಯೋಜಿಸಲಾಗಿತ್ತು ಎಂದು ಮುಂಬೈ ಪೊಲೀಸರು, ರಾಜ್ಯ ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

ಹಿರಿತನವನ್ನು ಕಡೆಗಣಿಸುತ್ತಿದ್ದ ವಾಜೆ ನೇರವಾಗಿ ಅಂದಿನ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ ಅವರಿಗೆ ವಿವಿಧ ಪ್ರಕರಣಗಳ ತನಿಖೆಯ ವಿವರಗಳ ಬಗ್ಗೆ ವರದಿ ನೀಡುತ್ತಿದ್ದರು. ಟಿಆರ್‌ಪಿ ಹಗರಣ, ಮುಕೇಶ್‌ ಅಂಬಾನಿ ಭದ್ರತಾ ಪ್ರಕರಣ ಮುಂತಾದ ಮಹತ್ವದ ಪ್ರಕರಣಗಳ ಕುರಿತು ಸಚಿವರಿಗೆ ವಿವರಣೆ ನೀಡುವ ಸಭೆಗಳಲ್ಲಿಯೂ ಪೊಲೀಸ್‌ ಕಮಿಷನರ್‌ ಅವರ ಜತೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸಾಮಾನ್ಯವಾಗಿ ಅಪರಾಧ ಗುಪ್ತದಳ ಘಟಕದ ಮುಖ್ಯಸ್ಥರ ಹುದ್ದೆಗೆ ಪೊಲೀಸ್‌ ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಆದರೆ, ವಾಜೆ ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿದ್ದರೂ ಅವರನ್ನು ನೇಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ... ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು