ಶ್ರೀನಗರ: ಸೈಬರ್ ಸ್ಪೇಸ್ ಬಳಸಿ ಭಯೋತ್ಪಾದನೆಗೆ ಕುಮ್ಮಕ್ಕು ಮತ್ತು ಹಣಕಾಸಿನ ನೆರವು ನೀಡುತ್ತಿರುವ ಆರೋಪದ ಮೇಲೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜಮ್ಮು ಮತ್ತು ಕಾಶ್ಮೀರದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಎಎನ್‌ಐ ಟ್ವೀಟಿಸಿದೆ.
ಅಲ್ಪಸಂಖ್ಯಾತರು, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಹತ್ಯೆ ಸಂಚು ಮತ್ತು ಕೋಮು ಸೌಹಾರ್ದತೆ ಕದಡುವ ಕೃತ್ಯದಲ್ಲಿ ತೊಡಗಿದ್ದವರ ಮೇಲೆ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಮತ್ತು ಸಿಆರ್‌ಪಿಎಫ್ ಪಡೆಗಳ ನೆರವು ಪಡೆದು ಕುಲ್ಗಾಂ, ಪುಲ್ವಾಮಾ, ಅನಂತ್ ನಾಗ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಶೋಧ ನಡೆಯುತ್ತಿದೆ.
ಪುಲ್ವಾಮಾ ನಿವಾಸಿ ಸರ್ತಾಜ್ ಅಲ್ತಾಫ್ ಭಟ್ ಎಂಬ ಪತ್ರಕರ್ತನನ್ನು ಎನ್‌ಐಎ ಬಂಧಿಸಿದೆ. ಭಟ್ ಸ್ಥಳೀಯ ಸುದ್ದಿವಾಹಿನಿ ಗ್ರೋಯಿಂಗ್ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಕಳೆದ ವಾರ, ಭಯೋತ್ಪಾದಕ ನಿಧಿಗೆ ಸಂಬಂಧಿಸಿದಂತೆ ಹುರಿಯತ್ ನಾಯಕ ಖಾಜಿ ಯಾಸಿರ್ ಮತ್ತು ಜಮ್ಮು ಮತ್ತು ಕಾಶ್ಮೀರ ಸಾಲ್ವೇಶನ್ ಮೂವ್‌ಮೆಂಟ್ ಅಧ್ಯಕ್ಷ ಜಾಫರ್ ಭಟ್ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.
ಈ ಸಂಬಂಧ ಕಳೆದ ವರ್ಷ ಜೂನ್ 21ರಂದು ಎನ್‌ಐಎ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.
ಕಳೆದ ವರ್ಷ ಡಿಸೆಂಬರ್ 23ರಂದು ಕುಲ್ಗಾಮ್, ಪುಲ್ವಾಮಾ, ಅನಂತನಾಗ್, ಸೋಪೋರ್ ಮತ್ತು ಜಮ್ಮು ಜಿಲ್ಲೆಗಳಲ್ಲಿ 14 ಕಡೆ ಸಂಸ್ಥೆ ಶೋಧ ನಡೆಸಿತ್ತು. ದಾಳಿ ವೇಳೆ, ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್‌ಗಳು ಮತ್ತು ಡಿಜಿಟಲ್ ಸ್ಟೋರೇಜ್ ಸಾಧನಗಳಂತಹ ವಿವಿಧ ವಸ್ತುಗಳನ್ನು ಎನ್‌ಐಎ ವಶಪಡಿಸಿಕೊಂಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.