ನವದೆಹಲಿ: ದೆಹಲಿಯ ಯುವತಿ ನಿಕ್ಕಿ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಸಂಚಿನಲ್ಲಿ ಸಹಕರಿಸಿದ ಆರೋಪದಡಿ ಆರೋಪಿ ಸಾಹಿಲ್ ಗೆಹಲೋತ್ ಅವರ ತಂದೆ ಸೇರಿ ಐದು ಜನರನ್ನು ಬಂಧಿಸಲಾಗಿದೆ.
'ಸಾಹಿಲ್ ಗೆಹಲೋತ್ ಅಲ್ಲದೆ ಇತರೆ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಸಂಚಿಗೆ ಸಹಕರಿಸಿದ ಆರೋಪದ ಮೇಲೆ ಅವರ ತಂದೆಯನ್ನೂ ಸಹ ಬಂಧಿಸಲಾಗಿದೆ’ಎಂದು ವಿಶೇಷ ಪೊಲೀಸ್ ಅಧಿಕಾರಿ ರವಿಂದ್ರ ಯಾದವ್ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
‘ಮಗ ಸಾಹಿಲ್, ನಿಕ್ಕಿಯನ್ನು ಕೊಂದಿದ್ದರ ಬಗ್ಗೆ ತಂದೆ ವೀರೇಂದ್ರ ಸಿಂಗ್‌ಗೆ ಮಾಹಿತಿ ತಿಳಿದಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 120ಬಿ(ಕ್ರಿಮಿನಲ್ ಸಂಚು) ಅಡಿ ಪ್ರಕರಣ ದಾಖಲಿಸಲಾಗಿದೆ. ಉಳಿದಂತೆ ಬಂಧಿತ ನಾಲ್ವರು ಸಾಹಿಲ್‌ನ ಸಹೋದರರು, ಸೋದರ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಎಎನ್‌ಐ ಪ್ರಕಾರ, ಸಹಜೀವನ ನಡೆಸುತ್ತಿದ್ದ ಸಾಹಿಲ್ ಮತ್ತು ನಿಕ್ಕಿ ಅಕ್ಟೋಬರ್ 2020ರಲ್ಲೇ ನೋಯ್ಡಾದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು.
‘ಈ ಮದುವೆ ಬಗ್ಗೆ ಸಾಹಿಲ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಮದುವೆ ಪ್ರಮಾಣಪತ್ರವನ್ನೂ ಪತ್ತೆ ಮಾಡಿದ್ದಾರೆ. ಸಾಹಿಲ್ ಸ್ನೇಹಿತರು ಮತ್ತು ಸೋದರ ಸಂಬಂಧಿಗಳು, ನಿಕ್ಕಿ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಡಲು ನೆರವು ನೀಡಿದ್ದರು’ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಟ್ವಿಟಿಸಿದೆ.
ತನ್ನ ಮತ್ತು ನಿಕ್ಕಿ ನಡುವಿನ ಚಾಟಿಂಗ್ ಮಾಹಿತಿ ಪೊಲೀಸರಿಗೆ ದೊಡ್ಡ ಸಾಕ್ಷ್ಯವಾಗಲಿದೆ ಎಂಬುದನ್ನು ಆರಿತಿದ್ದ ಆರೋಪಿ ಸಾಹಿಲ್, ನಿಕ್ಕಿ ಮೊಬೈಲ್‌ನಿಂದ ಎಲ್ಲ ಡೇಟಾವನ್ನು ಅಳಿಸಿರುವುದು ತನಿಖೆ ವೇಳೆ ದೃಢಪಟ್ಟಿತ್ತು.
ಇವನ್ನೂ ಓದಿ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.