ಚೆನ್ನೈ: ‘ಇಲ್ಲಿ ಅಕ್ರಮವಾಗಿ ವಾಸವಾಗಿದ್ದ ಇರಾನ್‌ನ ಒಂಬತ್ತು ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಕಲಿ ಆಧಾರ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ದರೋಡೆ ಪ್ರಕರಣದ ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ’ ಎಂದು ಪೊಲೀಸರು ತಿಳಿಸಿದರು.
‘ಮೂವರು ಮಹಿಳೆಯರು ಸೇರಿದಂತೆ 9 ಇರಾನಿ ಪ್ರಜೆಗಳು ಕೋವಲಂನ ರೆಸಾರ್ಟ್‌ವೊಂದರಲ್ಲಿ ವಾಸವಾಗಿದ್ದರು’ ಎಂದು ನಗರ ಪೊಲೀಸ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
‘ತಮ್ಮನ್ನು ಕೇಂದ್ರ ಪೊಲೀಸ್ ಪಡೆಯ ಅಧಿಕಾರಿಗಳು ಎಂದು ಹೇಳಿಕೊಂಡ ಮೂವರು ವ್ಯಕ್ತಿಗಳು ಮಾದಕ ದ್ರವ್ಯಗಳನ್ನು ಪರಿಶೀಲಿಸುವ ನೆಪವೊಡ್ಡಿ ಸೊಮಾಲಿಯಾದ ಪ್ರಜೆಯೊಬ್ಬರಿಂದ ₹2.83 ಲಕ್ಷ (3,800 ಡಾಲರ್) ದರೋಡೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ, ದೂರು ದಾಖಲಿಸಿದ್ದರು. ಇದರ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ದರೋಡೆ ವೇಳೆ ಆರೋಪಿಗಳು ಬಳಸಿದ್ದ ಕಾರಿನ ಸಹಾಯದಿಂದ ಪೊಲೀಸರು ಅವರು ಅಡಗಿದ್ದ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಅವರೊಂದಿಗೆ ಇನ್ನೂ ಆರು ಇರಾನಿ ಪ್ರಜೆಗಳು ರೆಸಾರ್ಟ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ವಾಸವಾಗಿರುವ ಬಗ್ಗೆ ತಿಳಿದುಬಂದಿದೆ. ಅವರ ಬಳಿ ನಕಲಿ ಆಧಾರ ಕಾರ್ಡ್‌ಗಳಿದ್ದವು. ಅಲ್ಲದೆ ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳಿರಲಿಲ್ಲ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.