ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಹೆಚ್ಚಿಸಲು ವೋಚರ್; ಅರ್ಥ ವ್ಯವಸ್ಥೆಯಲ್ಲಿ ನಗದು ಚಲಾವಣೆ ಹೆಚ್ಚಿಸಲು ಕ್ರಮ

Last Updated 12 ಅಕ್ಟೋಬರ್ 2020, 21:49 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಗ್ರಾಹಕ ಬಳಕೆಯ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೆಲವು ಕ್ರಮಗಳನ್ನು ಪ್ರಕಟಿಸಿದೆ.

ಅವುಗಳ ಭಾಗವಾಗಿ, ತನ್ನ ನೌಕರರಿಗೆ ಈ ಬಾರಿ ಪ್ರವಾಸ ಭತ್ಯೆಯ (ಎಲ್‌ಟಿಸಿ) ಬದಲಿಗೆ, ಆ ಭತ್ಯೆಗೆ ಸಮನಾದ ಮೊತ್ತದ ನಗದು ವೋಚರ್‌ಗಳನ್ನು ನೀಡಲಿದೆ. ಈ ವೋಚರ್‌ ಬಳಸಿ ನೌಕರರು ಶೇಕಡ 12 ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್‌ಟಿ ತೆರಿಗೆ ವ್ಯಾಪ್ತಿಗೆ ಬರುವ ಯಾವುದಾದರೂ ವಸ್ತುಗಳನ್ನು ಖರೀದಿಸಬಹುದು.

ಜಿಎಸ್‌ಟಿ ವ್ಯವಸ್ಥೆಯಡಿ ನೋಂದಾಯಿಸಿದ ವ್ಯಾಪಾರಿಗಳಿಂದಲೇ ವಸ್ತುಗಳನ್ನು ಖರೀದಿಸಬೇಕು. ಡಿಜಿಟಲ್ ರೂಪದಲ್ಲೇ ಹಣ ಪಾವತಿಸಬೇಕು. ಖರೀದಿಯನ್ನು 2021ರ ಮಾರ್ಚ್‌ 31ರೊಳಗೆ ಮಾಡಬೇಕು.ಈ ವೋಚರ್ ಬಳಸಿ ಆಹಾರ ಸಾಮಗ್ರಿ ಖರೀದಿಸಲು ಅವಕಾಶವಿಲ್ಲ.

ಕೇಂದ್ರ ಸರ್ಕಾರ ತನ್ನ ನೌಕರರಿಗೆ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಪ್ರವಾಸ ಭತ್ಯೆ ನೀಡುತ್ತದೆ. ‘ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಈ ವರ್ಷ ಪ್ರವಾಸ ಕೈಗೊಳ್ಳುವುದು ಕಷ್ಟ. ಹಾಗಾಗಿ, ನೌಕರರಿಗೆ ಸಿಗಬೇಕಿದ್ದ ಭತ್ಯೆಯ ಮೊತ್ತವನ್ನು ನಗದುವೋಚರ್ ರೂಪದಲ್ಲಿ ನೀಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಗ್ರಾಹಕ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದ ನಾಲ್ಕು ಯೋಜನೆಗಳಿಂದ ಒಟ್ಟು ₹ 73 ಸಾವಿರ ಕೋಟಿ ಮೌಲ್ಯದ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗಬಹುದು ಎಂಬುದು ಕೇಂದ್ರದ ಲೆಕ್ಕಾಚಾರ.

‘ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಹಾಗೂ ನೌಕರರಿಗೆ ರೂಪೇ ಪ್ರೀಪೇಯ್ಡ್‌ ಕಾರ್ಡ್ ರೂಪದಲ್ಲಿ‌ ಬಡ್ಡಿ ರಹಿತವಾಗಿ ₹ 10 ಸಾವಿರವನ್ನು ಮುಂಗಡವಾಗಿ ನೀಡಲಾಗುವುದು. ಮುಂಗಡ ಹಣವನ್ನು 2021ರ ಮಾರ್ಚ್‌ 31ಕ್ಕೆ ಮೊದಲು ಖರ್ಚು ಮಾಡಬೇಕು’ ಎಂದು ನಿರ್ಮಲಾ ತಿಳಿಸಿದರು.

ರಾಜ್ಯಗಳಿಗೆ ₹ 12 ಸಾವಿರ ಕೋಟಿ

ರಾಜ್ಯಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳ ಮೇಲೆ ವಿನಿಯೋಗಿಸಲು ಒಟ್ಟು ₹ 12 ಸಾವಿರ ಕೋಟಿ ಮೊತ್ತವನ್ನು ಸಾಲವಾಗಿ ನೀಡಲಾಗುತ್ತದೆ. ಈ ಸಾಲವನ್ನು 50 ವರ್ಷಗಳ ನಂತರ ತೀರಿಸಬಹುದು. ಸಾಲಕ್ಕೆ ಬಡ್ಡಿ ಇರುವುದಿಲ್ಲ. ಆದರೆ, ರಾಜ್ಯಗಳು ತಮಗೆ ಸಿಗುವ ಮೊತ್ತವನ್ನು ಮಾರ್ಚ್‌ 31ರೊಳಗೆ ಖರ್ಚು ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ರಸ್ತೆ ನಿರ್ಮಾಣ, ರಕ್ಷಣಾ ಮೂಲಸೌಕರ್ಯ ನಿರ್ಮಾಣ, ನೀರಿನ ಪೂರೈಕೆ ವ್ಯವಸ್ಥೆ ರೂಪಿಸುವುದು, ನಗರಾಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರವು ಹೆಚ್ಚುವರಿಯಾಗಿ ₹ 25 ಸಾವಿರ ಒದಗಿಸಲಿದೆ. ‘ಈ ಎಲ್ಲ ಕ್ರಮಗಳಿಂದಾಗಿ ಅರ್ಥ ವ್ಯವಸ್ಥೆಯಲ್ಲಿ ಮಾರ್ಚ್‌ 31ರೊಳಗೆ ಒಟ್ಟು ₹ 73 ಸಾವಿರ ಕೋಟಿ ಮೌಲ್ಯದ ಸೇವೆ, ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಹಣದುಬ್ಬರ ಶೇ 7.34ಕ್ಕೆ

ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್ ತಿಂಗಳಿನಲ್ಲಿ ಶೇಕಡ 7.34ಕ್ಕೆ ಹೆಚ್ಚಳವಾಗಿದೆ. ಆಗಸ್ಟ್‌ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ6.69ರಷ್ಟಿತ್ತು. ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಇದು ಶೇ 3.99ರಷ್ಟಿತ್ತು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶದ ಅನ್ವಯ ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣವುಸೆಪ್ಟೆಂಬರ್‌ನಲ್ಲಿ ಶೇ10.68ರಷ್ಟಾಗಿತ್ತು. ಇದು ಆಗಸ್ಟ್‌ ತಿಂಗಳಿನಲ್ಲಿ ಶೇ 9.05
ರಷ್ಟು ಇತ್ತು. ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ)‌ ರೆಪೊ ದರ ನಿಗದಿ ಮಾಡುವಾಗ ಚಿಲ್ಲರೆ ಹಣದುಬ್ಬರ ದರವನ್ನು ಗಮನದಲ್ಲಿ ಇರಿಸಿಕೊಳ್ಳುತ್ತದೆ.

ಜಿಎಸ್‌ಟಿ ಮಂಡಳಿ: ಪರಿಹಾರ ತೀರ್ಮಾನ ಇಲ್ಲ

ಜಿಎಸ್‌ಟಿ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ರಾಜ್ಯಗಳಿಗೆ ಭರ್ತಿ ಮಾಡಿಕೊಡುವುದು ಹೇಗೆ ಎಂಬ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಸೋಮವಾರದ ಸಭೆಯನ್ನೂ ಪರಿಗಣಿಸಿದರೆ, ಕೊರತೆ ಭರ್ತಿ ವಿಚಾರದ ಬಗ್ಗೆ ಚರ್ಚಿಸಲು ಜಿಎಸ್‌ಟಿ ಮಂಡಳಿ ಮೂರು ಬಾರಿ ಸಭೆ ನಡೆಸಿದಂತೆ ಆಗಿದೆ. ರಾಜ್ಯಗಳಿಗೆ ಆಗಿರುವ ಕೊರತೆಯನ್ನು ಭರ್ತಿ ಮಾಡಿಕೊಡಲು ಕೇಂದ್ರ ಸರ್ಕಾರ ಸಾಲ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

21 ರಾಜ್ಯಗಳು ತಾವೇ ಸಾಲ ತರಲು ಒಪ್ಪಿವೆ. ಆದರೆ ಇನ್ನುಳಿದ ರಾಜ್ಯಗಳು ಸರ್ವಸಮ್ಮತಿಯ ತೀರ್ಮಾನ ಆಗಬೇಕು ಎಂಬ ಒತ್ತಾಯ ಮುಂದಿಟ್ಟವು ಎಂದು ನಿರ್ಮಲಾ ತಿಳಿಸಿದರು. ಹಿಂದಿನ ಸಭೆಯಲ್ಲೂ ಸಾಲದ ವಿಚಾರವಾಗಿ ಯಾವುದೇ ತೀರ್ಮಾನ ಕೈಗೊಳ್ಳಲು ಮಂಡಳಿಗೆ ಸಾಧ್ಯವಾಗಿರಲಿಲ್ಲ. ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯನ್ನು ಭರ್ತಿ ಮಾಡಿಕೊಳ್ಳಲು ಕೇಂದ್ರವು ರಾಜ್ಯಗಳಿಗೆ ಈ ವರ್ಷದಲ್ಲಿ ಇದುವರೆಗೆ ಒಟ್ಟು ₹ 20 ಸಾವಿರ ಕೋಟಿ ಬಿಡುಗಡೆ ಮಾಡಿದೆ.

***

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಘೋಷಣೆ ಸಕಾಲಿಕ ಕ್ರಮ. ಇದರಿಂದ ಅರ್ಥವ್ಯವಸ್ಥೆಯಲ್ಲಿನ ಬೇಡಿಕೆ ಹೆಚ್ಚಲಿದೆ

- ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT